ದಾವಣಗೆರೆ
2019-20ನೇ ಸಾಲಿಗೆ 30 ಇಲಾಖೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಿಗೆ 331.53 ಕೋಟಿ ರೂ. ಕ್ರಿಯಾಯೋಜನೆಗೆ ಜಿಲ್ಲಾ ಪಂಚಾಯತ್ ಸಾಮಾನ್ಯಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿ.ಪಂ. ಅಧ್ಯಕ್ಷೆ ಶೈಲಜಾ ಬಸವರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 30 ಇಲಾಖೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಿಗೆ 331 ಕೋಟಿ 53 ಲಕ್ಷ 37 ಸಾವಿರ ರೂ. ಮೊತ್ತದ ಕ್ರಿಯಾಯೋಜನೆಗೆ ಸದಸ್ಯರು ಅನುಮೋದನೆ ನೀಡಿದರು.
ಸರ್ಕಾರವು 2019-20ನೇ ಸಾಲಿನಲ್ಲಿ ಜಿಲ್ಲೆಗೆ ಲಿಂಕ್ ಡಾಕ್ಯುಮೆಂಟ್ ಪ್ರಕಾರ ಜಿಪಂ, ತಾಪಂ ಹಾಗೂ ಗ್ರಾಪಂ.ಗಳನ್ನು ಒಳಗೊಂಡಂತೆ ಪಂಚಾಯತ್ ರಾಜ್ ಸಂಸ್ಥೆಗಳಿಗೆ 957.20 ಕೋಟಿ ರೂ. ಅನುದಾನ ನಿಗಧಿಪಡಿಸಿದ್ದು, ಈ ಪೈಕಿ ಗ್ರಾಪಂ ಕಾರ್ಯಕ್ರಮಗಳಿಗೆ 35 ಲಕ್ಷ(ಶೇ.0.04), ತಾಪಂ ಕಾರ್ಯಕ್ರಮಗಳಿಗೆ 625.31 ಕೋಟಿ ರೂ. (ಶೇ.65.33) ಅನುದಾನ ಹಂಚಿಕೆಯಾಗಿದೆ. ಇನ್ನುಳಿದ 331.53 ಕೋಟಿ (ಶೇ.34.64) ರೂ. ಅನುದಾನವನ್ನು ಜಿಪಂ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಿದೆ.
ತುಂಡು ಗುತ್ತಿಗೆಗಾಗಿ ಶಿಫಾರಸು:
ಹತ್ತು ಲಕ್ಷ ರೂಪಾಯಿಗಳ ವರೆಗಿನ ಕಾಮಗಾರಿಗಳಿಗೆ ತುಂಡುಗುತ್ತಿಗೆ ನೀಡುವ ಅಧಿಕಾರವನ್ನು ಜಿಲ್ಲಾ ಪಂಚಾಯತ್‍ಗೆ ನೀಡಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಹ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ, ರಸ್ತೆಗೆ ಮಣ್ಣು ಹಾಕುವ, ಗುಂಡಿ ಮುಚ್ಚಿಸುವ ಸಣ್ಣಪುಟ್ಟ ಕೆಲಸಗಳನ್ನು ಮಾಡಿಸಲೂ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಅಧಿಕಾರ ಇಲ್ಲವಾಗಿದೆ. ಪ್ಯಾಕೇಜ್, ಈ-ಟೆಂಡರ್ ವ್ಯವಸ್ಥೆಯಲ್ಲಿ ಎಲ್ಲವೂ ಆಗುವುದಾದರೆ ಚುನಾಯಿತ ಜನಪ್ರತಿನಿಧಿಗಳು ಇರುವುದಾದರೂ ಏಕೆ? ಎಂದು ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್.ಮಹೇಶ್, ಜಿಪಂ ಸದಸ್ಯರಿಗೆ 5 ಲಕ್ಷವರೆಗಿನ ಕಾಮಗಾರಿಗಳನ್ನು ಮಾಡಿಸುವ ಅಧಿಕಾರ ಸಿಗುವಂತೆ ಶಾಸಕರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಜಿ.ಪಂ. ಸದಸ್ಯರಾದ ಡಿ.ಜಿ.ವಿಶ್ವನಾಥ್, ಜಿ.ಸಿ.ನಿಂಗಪ್ಪ, ಕೆ.ಹೆಚ್.ಓಬಳಪ್ಪ ಮತ್ತಿತರರು, 10 ಲಕ್ಷವರೆಗಿನ ಕಾಮಗಾರಿಗಳಿಗೆ ಸ್ಥಳೀಯವಾಗಿ ತುಂಡುಗುತ್ತಿಗೆ ನೀಡಲು ಜಿಪಂಗೆ ಅಧಿಕಾರ ಇರಬೇಕು. ಈ ದಿಸೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳಿಸೋಣ. ನಿರ್ಣಯ ಅಂಗೀಕಾರಕ್ಕೆ ಶಾಸಕರು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಿ ಎಂದರು.
ರಾಜೀನಾಮೆಗೂ ಸಿದ್ಧ:
ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಜಗಳೂರು ಭಾಗದಲ್ಲಿ ನೀರಿನ ಹಾಹಾಕಾರ ತೀವ್ರವಾಗಿದೆ. 140 ಬೋರ್‍ವೆಲ್ ವಿಫಲವಾಗಿವೆ. ಖಾಸಗಿ ಬೋರ್‍ವೆಲ್, ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಜಗಳೂರಿನ ಬರಗಾಲವು ರಾಜಸ್ಥಾನದ ಮರುಭೂಮಿಯನ್ನು ನೆನಪಿಸುವಂತಿದೆ.
ಜನರು ನಮ್ಮ ಕೊರಳುಪಟ್ಟಿ ಹಿಡಿಯೋದೊಂದು ಬಾಕಿ ಇದೆ. 2011ರಲ್ಲಿ ಮಂಜೂರಾದ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಈಗಲೂ ಕುಂಟುತ್ತಾ ಸಾಗಿದೆ. ಕೆರೆಗಳ ಏತ ನೀರಾವರಿ, ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಕೈಗೆತ್ತಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ತರಬೇಕು. ಈ ವಿಚಾರವಾಗಿ ನಾನು ರಾಜೀನಾಮೆಗೂ ಸಿದ್ಧ ಎಂದರು.
ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ರೈತರಿಗೆ ಕಳಪೆ ಬಿತ್ತನೆ ಬೀಜ ವಿತರಿಸಿದ 12 ಮಂದಿ ಮಾರಾಟಗಾರರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದು, ರೈತರು ನಷ್ಟಕ್ಕೊಳಗಾಗದ ರೀತಿಯಲ್ಲಿ ಅಧಿಕೃತ ಮಾರಾಟಗಾರರಿಂದಲೇ ಗುಣಮಟ್ಟದ ಬೀಜ ಖರೀದಿಸಬೇಕು ಎಂದು ಮನವಿ ಮಾಡಿದರು.
ಮುಂಗಾರು ಹಂಗಾಮಿಗೆ 20 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ಅವಶ್ಯಕತೆ ಇದ್ದು, ಈಗಾಗಲೇ 15 ಸಾವಿರ ಕ್ವಿಂಟಾಲ್ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ. ಫ್ರೂಟ್ಸ್ ತಂತ್ರಾಂಶದ ಮೂಲಕ ಒಮ್ಮೆ ಮಾತ್ರ ರೈತರ ಮಾಹಿತಿ, ದಾಖಲೆಗಳನ್ನು ಸಂಗ್ರಹಿಸಿ ಬಿತ್ತನೆ ಬೀಜ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ಕಳಪೆ ಬೀಜ ಖರೀದಿಸದಂತೆ ಈಗಾಗಲೇ ವ್ಯಾಪಕ ಜಾಗೃತಿ ಮೂಡುಸುತ್ತಿದ್ದು, ರೈತರೂ ಸಹ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅವರು ವಿನಂತಿಸಿದರು.
ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ, ಜಿಪಂ ಉಪಾಧ್ಯಕ್ಷ ಪಿ.ಸುರೇಂದ್ರ ನಾಯ್ಕ, ಸಿಇಓ ಹೆಚ್.ಬಸವರಾಜೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಆರ್.ಮಹೇಶ, ಬಿ.ಎಂ.ವಾಗೀಶಸ್ವಾಮಿ, ಜೆ.ಸವಿತಾ, ಮುಖ್ಯ ಲೆಕ್ಕಾಧಿಕಾರಿ ಟಿ.ಆಂಜನೇಯ, ಯೋಜನಾಧಿಕಾರಿ ಭೀಮಾ ನಾಯ್ಕ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







