ದಾವಣಗೆರೆ :
ಮಾರುಕಟ್ಟೆಯ ಬೇಡಿಕೆ ಮತ್ತು ಪ್ರಸ್ತುತ ಸಂದರ್ಭದ ಅಗತ್ಯತೆಗಳನ್ನು ಗಮನಿಸಿ ಪಠ್ಯಕ್ರಮ ಸಿದ್ಧಪಡಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಭಿಪ್ರಾಯಪಟ್ಟರು.
ಸಮೀಪದ ತೊಳಹುಣಸೆ ಬಳಿಯ ದಾವಣಗೆರೆ ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಪಠ್ಯಕ್ರಮ ವಿನ್ಯಾಸ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ವಾಸ್ತವದ ಅರಿವು ಮೂಡಿಸಿ ಭವಿಷ್ಯದ ಕಲ್ಪನೆಯನ್ನು ಬಿತ್ತಬೇಕಾದರೆ, ಮಾರುಕಟ್ಟೆಯ ಬೇಡಿಕೆ ಮತ್ತು ಪ್ರಸ್ತುತ ಸಂದರ್ಭದ ಅಗತ್ಯತೆಗಳನ್ನು ಗಮನಿಸಿ ಪಠ್ಯಕ್ರಮ ಸಿದ್ಧಪಡಿಸಬೇಕಾದ ಅವಶ್ಯಕತೆ ಇದೆ. ಬದುಕಿಗೆ ಅಗತ್ಯವಿರುವ ಭಾಷೆ, ಸಂಸ್ಕೃತಿ, ಸಂವಹನ ಕೌಶಲಗಳನ್ನು ತಿಳಿಸುವ ನಿಟ್ಟಿನಲ್ಲಿ ಪಠ್ಯಕ್ರಮ ವಿನ್ಯಾಸಗೊಳ್ಳಬೇಕೆಂದು ಕಿವಿಮಾತು ಹೇಳಿದರು.
ಭಾಷಾ ಶುದ್ಧಿ, ಸಂವಹನಕ್ಕೆ ಅಗತ್ಯವಿರುವ ವಿಭಿನ್ನ ಪ್ರಯೋಗಗಳಿಗೆ ಪಠ್ಯದಲ್ಲಿ ಆದ್ಯತೆ ನೀಡಬೇಕಾಗಿದೆ. ವಿದ್ಯಾರ್ಥಿಗಳೇ ಪ್ರಾಯೋಗಿಕವಾಗಿ ಭಾಷೆಯನ್ನು ಕಲಿತು, ಅದರಲ್ಲಿ ಪರಿಣತಿ ಪಡೆಯುವಂತೆ ಸಿದ್ಧಗೊಳಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಅದಕ್ಕೆ ಸಂಬಂಧಿಸಿದಂತೆ ತಜ್ಞರ ಜೊತೆ ಚರ್ಚಿಸಿ, ವಿಶ್ಲೇಷಿಸಿ, ವಿದ್ಯಾರ್ಥಿಗಳ ಭವಿಷ್ಯವನ್ನು ಗಮನಿಸಿ ಪಠ್ಯಕ್ರಮ ತಯಾರಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಕಲಿಯುವ ಅಥವಾ ಹೊಸತನ್ನು ತಿಳಿಯುವ ಆಸಕ್ತಿ ಕಡಿಮೆ ಇರಬಹುದು. ಆದರೆ ಶಿಕ್ಷಕರು ಮಕ್ಕಳ ಮನಸ್ಸನ್ನು ಹಿಡಿದಿಟ್ಟು, ಅವರಲ್ಲಿ ವಿಭಿನ್ನ ವಿಚಾರಗಳನ್ನು, ಅರ್ಥಪೂರ್ಣವಾಗಿ ಮನಸ್ಸಿಗೆ ನಾಟುವಂತೆ ಹೇಳುವ ಪರಿಪಾಠ ಬೆಳೆಸಿಕೊಳ್ಳಬೇಕು. ಅದಕ್ಕೆ ಶಿಕ್ಷಕರು ಅಧ್ಯಯನ ಶೀಲರಾಗಬೇಕು. ಯಾವುದೇ ಪರಿಶ್ರಮವಿಲ್ಲದೆ ಮಕ್ಕಳಿಗೆ ಪಾರಂಪರಿಕ ಶೈಲಿಯಲ್ಲಿ ಪಾಠ ಮಾಡಿದರೆ ಪ್ರಯೋಜನವಿಲ್ಲ. ವೃತ್ತಿಗೆ ಗೌರವ ನೀಡಿ ಕೆಲಸ ಮಾಡದಿದ್ದರೆ ಸರ್ಕಾರ ನೀಡುವ ವೇತನಕ್ಕೂ ಭಾರ. ಪಡೆಯುವ ಸಂಬಳಕ್ಕೆ ತಕ್ಕಂತೆ ಕನಿಷ್ಠ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತುಂಬುವ ಕೆಲಸವನ್ನು ಅಧ್ಯಾಪಕರು ಮಾಡಬೇಕೆಂದು ಕರೆ ನೀಡಿದರು.
ಇತ್ತೀಚೆಗೆ ಪದವಿ, ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ಇತರ ವಿಷಯಗಳಲ್ಲಿ ಉತ್ತಮ ಅಂಕ ಪಡೆದರೂ ಇಂಗ್ಲಿಷ್ ಭಾಷಾಂತರದಲ್ಲಿ ಅಂಕ ಗಳಿಸಲು ವಿಫಲರಾಗುತ್ತಿದ್ದಾರೆ. ಇದಕ್ಕೆ ಭಾಷೆಯ ಬಗೆಗಿನ ಭಯ ಅಥವಾ ಕಲಿಕೆಯ ವೈಫಲ್ಯಕಾರಣ ಇರಬಹುದು. ಆದರೆ ಕನಿಷ್ಠ ಅರ್ಥ ಮಾಡಿಕೊಂಡು ವಾಕ್ಯರಚನೆ ಮಾಡುವ ಜ್ಞಾನವನ್ನು ಬೆಳೆಸಿಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅನಿವಾರ್ಯ ಎಂದರು.ನಮ್ಮ ಸ್ಥಿತಿಗತಿ, ದೌರ್ಬಲ್ಯಗಳನ್ನು ನೋಡಿ ನಗುವವರ ಮುಂದೆ ಹೆಮ್ಮೆ ಪಡುವಂತಹ ಕೆಲಸವನ್ನು ಮಾಡುವ ಛಾತಿ, ಇಚ್ಛಾಶಕ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಆಗಲೇ ಭವಿಷ್ಯದಲ್ಲಿ, ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದರು.
ವಿಮರ್ಶಕ ಪ್ರೊ.ಮನು ಚಕ್ರವರ್ತಿ ಮಾತನಾಡಿ, ಪಠ್ಯಕ್ರಮ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಭವಿಷ್ಯದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ರೀತಿಯಲಿ ್ಲಇರಬೇಕು. ಮಕ್ಕಳ ಭವಿಷ್ಯವು ಪಠ್ಯವನ್ನೇ ಆಧರಿಸಿರುತ್ತದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ಪಠ್ಯಕ್ರಮವು ಮಕ್ಕಳ ಭವಿಷ್ಯದ ಬುನಾದಿಯಾಗಬೇಕು. ಇಲ್ಲಿ ಸಿದ್ಧವಾಗುವ ಶಿಕ್ಷಣ ಕ್ರಮ ಮಕ್ಕಳ ಕಲಿಕೆಯ ಜೊತೆಗೆ ಸ್ವತಂತ್ರವಾಗಿ ಆಲೋಚನೆ ಮಾಡುವ, ವಿಚಾರಗಳನ್ನು ಅಭಿವ್ಯಕ್ತಗೊಳಿಸುವ ಸಾಮಥ್ರ್ಯವನ್ನು ರೂಢಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಬಸವರಾಜ ಬಣಕಾರ. ಪ್ರೊ.ಎನ್.ಎಸ್. ಗುಂಡೂರ. ಪರೀಕ್ಷಾಂಗ ಕುಲಸಚಿವೆ ಪ್ರೊ.ಎಚ್.ಎಸ್.ಅನಿತಾ, ಹಣಕಾಸು ಅಧಿಕಾರಿ ಪ್ರೊ.ಗೋಪಾಲ ಎಂ. ಅಡವಿರಾವ್, ಕಲಾ ವಿಭಾಗದ ಡೀನ್ ಪ್ರೊ.ಕೆ.ಬಿ.ರಂಗಪ್ಪ, ವಿವಿಧ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ