ಟಿ.ಎ.ನಾರಾಯಣಗೌಡರ ನೇತೃತ್ವದ ಕರವೇ ಅಧಿಕೃತ

ದಾವಣಗೆರೆ:

      ಬೆಂಗಳೂರು ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಟಿ.ಎ.ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆಯೇ ಅಧಿಕೃತ ಸಂಘಟನೆ ಎಂಬುದಾಗಿ ತೀರ್ಪು ನೀಡಿದ್ದು, ಇನ್ನೂ ಮುಂದೆ ಯಾರೂ ಸಹ ಕರವೇ ಹೆಸರು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ತಿಳಿಸಿದರು.

      ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ವಿರೋಧಿ ಚಟುವಟಿಕೆ ಮಾಡಿದ್ದ ಕಾರಣಕ್ಕೆ, ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರವೀಣ ಶೆಟ್ಟಿ, ಶಿವರಾಮೇಗೌಡ ಹಾಗೂ ಕೃಷ್ಣಪ್ಪ ಸೇರಿದಂತೆ ಹಲವರನ್ನು ಉಚ್ಛಾಟಿಸಲಾಗಿತ್ತು. ಆದರೆ, ಇವರೆಲ್ಲರೂ ಕರ್ನಾಟಕ ರಕ್ಷಣಾ ವೇದಿಕೆ ಹೆಸರಿನೊಂದಿಗೆ ತಮ್ಮವೇ ಬಣಗಳನ್ನು ಕಟ್ಟಿಕೊಂಡು ವೇದಿಕೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂದು ಆರೋಪಿಸಿದರು.

        ಅಲ್ಲದೇ, ಇವರೆಲ್ಲರೂ ತಮ್ಮವೇ ಅಧಿಕೃತ ಸಂಘಟನೆ ಎಂಬುದಾಗಿ ಪ್ರತಿ ಪಾದಿಸಲು ಬೆಂಗಳೂರು ಸಂಘ ಸಂಸ್ಥೆಗಳ ಜಿಲ್ಲಾ ನೋಂದಣಾಧಿಕಾರಿ ಹಾಗೂ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಸುಧೀರ್ಘ ವಿಚಾರಣೆ ನಡೆಸಿ, ಲೆಕ್ಕಪತ್ರ ಪರಿಶೀಲಿಸಿರುವ ನ್ಯಾಯಾಲಯವು ನಾರಾಯಣಗೌಡರದ್ದೇ ಅಧಿಕೃತ ಸಂಘಟನೆಯಾಗಿದೆ. ಹಾಗೂ ಈ ಹೆಸರನ್ನು ಯಾರೂ ದುರುಪಯೋಗ ಪಡೆಸಿಕೊಳ್ಳಬಾರದು ಎಂದು ತೀರ್ಪು ನೀಡಿದೆ. ಆದ್ದರಿಂದ ಇನ್ನೂ ಮುಂದೆ ಯಾರೂ ಸಹ ಕರ್ನಾಟಕ ರಕ್ಷಣಾ ವೇದಿಕೆಯ ಹಿಂದೆ ಮತ್ತು ಮುಂದೆ ಬೇರೆ, ಬೇರೆ ಹೆಸರುಗಳನ್ನು ಇಟ್ಟುಕೊಂಡು ವೇದಿಕೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಒಂದು ವೇಳೆ ವೇದಿಕೆ ಹೆಸರು ಮತ್ತೆ ಬಳಕೆ ಮಾಡಿಕೊಳ್ಳಲು ಮುಂದಾಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

         ನ್ಯಾಯಾಲಯದ ತೀರ್ಪಿನ ಆದೇಶದ ಪ್ರತಿಯನ್ನು ಸಂಘ ಸಂಸ್ಥೆಗಳ ಜಿಲ್ಲಾ ನೋಂದಣಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿ, ಇನ್ನೂ ಮುಂದೆ ಟಿ.ಎ.ನಾರಾಯಣಗೌಡ ಅವರ ಜೊತೆಯಲ್ಲಿರುವ ಕರವೇ ಕಾರ್ಯಕರ್ತರು, ಪದಾಧಿಕಾರಿಗಳನ್ನು ಹೊರತು ಪಡಿಸಿ, ಬೇರೆ ಯಾರಾದರೂ ಕರ್ನಾಟಕ ರಕ್ಷಣಾ ವೇದಿಕೆಯ ಹೆಸರಿನ ಮುಂದೆ ಇತರೆ ಹೆಸರು ಹಾಗೂ ಕೊನೆಗೆ ಬಣ ಎಂದಿಟ್ಟುಕೊಂಡು ಪ್ರತಿಭಟನೆ, ಕಾರ್ಯಕ್ರಮಗಳನ್ನು ಆಯೋಜಿಸಿದರೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

        ಟಿ.ಎ.ನಾರಾಯಣಗೌಡರು 2000ರಲ್ಲಿ ಹುಟ್ಟು ಹಾಕಿದ್ದ ಸಂಘಟನೆಯು ನಿಯಮಾನುಸಾರ ನೋಂದಣಿಯಾಗಿದ್ದು, ಈ ವರೆಗೆ ಪ್ರತಿವರ್ಷ ಸರ್ವ ಸದಸ್ಯರ ಸಭೆ ನಡೆಸಿ, ನಡಾವಳಿಗಳನ್ನು ಸರ್ಕಾರಕ್ಕೆ ಸಲ್ಲಿಸುತ್ತಾ ಬಂದಿದೆ. ಸಂಘದ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಪಾವತಿಸಲಾಗುತ್ತಿದೆ. 65 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಸಂಘವು ತನ್ನದೇ ಆದ ಪಾನ್ ಕಾರ್ಡ್ ಸಹ ಹೊಂದಿದೆ. ಹೀಗಾಗಿ ಸಂಘದ ಸದಸ್ಯರಲ್ಲದವರು, ಸಂಘದಿಂದ ಉಚ್ಛಾಟನೆಗೊಂಡವರು ಈ ಹೆಸರಿನಲ್ಲಿ ಕಾರ್ಯ ನಿರ್ವಹಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

        ಸುದ್ದಿಗೋಷ್ಠಿಯಲ್ಲಿ ಕರವೇ ಜಿಲ್ಲಾ ಗೌರವಾಧ್ಯಕ್ಷ ವಾಸುದೇವ ರಾಯ್ಕರ್, ಕಾನೂನು ಸಲಹೆಗಾರರಾದ ಎ.ವೈ.ಕೃಷ್ಣಮೂರ್ತಿ, ಎ.ಸಿ.ರಾಘವೇಂದ್ರ, ಮುಖಂಡರಾದ ಬಸಮ್ಮ, ಶಾಂತಮ್ಮ, ಕಮಲಮ್ಮ, ಮಹಾಂತೇಶ್, ಮಲ್ಲಿಕಾರ್ಜುನ್, ಖಾದರ್, ಸಂತೋಷ್, ವಾಸು, ಶಂಕರ್, ನಾಗರಾಜ್, ಗಿರೀಶ್ ಕುಮಾರ್, ಲಿಂಗರಾಜ್, ಹನುಮಂತಪ್ಪ, ಮಂಜುಳಮ್ಮ, ಮಂಜುಶ್ರೀಗೌಡ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link