ದಾವಣಗೆರೆ:
ಪ್ರೋತ್ಸಾಹದ ಕೊರತೆಯ ಮಧ್ಯೆಯೂ ತಮಗಿದ್ದ ಎಲ್ಲ ಅಡೆತೆಗಳನ್ನು ಮೀರಿ ಸಾಹಿತ್ಯ ವಲಯದಲ್ಲಿ ಟಿ.ಗಿರಿಜಾ ಅವರು ಬುಗ್ಗೆಯಂತೆ ಚಿಮ್ಮಿದ್ದರು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್ ಸ್ಮರಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ವನಿತಾ ಸಾಹಿತ್ಯ ವೇದಿಕೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮ ಮತ್ತು ಹಿರಿಯ ಸಾಹಿತಿ ಟಿ. ಗಿರಿಜಾ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಜವಾದ ಪ್ರತಿಭೆಗಳನ್ನು ಎಷ್ಟೇ ಅಡೆತಡೆಗಳಿದ್ದರೂ ತಡೆಯಲು ಸಾಧ್ಯವಿಲ್ಲ. ಏಕೆಂದರೆ ಎಲ್ಲ ಅಡೆತಡೆಗಳನ್ನು ಮೀರಿ ಚಿಮ್ಮುವ ಶಕ್ತಿ ಪ್ರತಿಭೆಗೆ ಇದೆ. ಅದರಂತೆಯೇ ಪೋಲಿಯೋದಿಂದ ಅಂಗವೈಕಲ್ಯ ಇದ್ದರೂ, ಸರಿಯಾದ ಪ್ರೋತ್ಸಾಹ ಸಿಗದೇ ಇದ್ದರೂ ಬುಗ್ಗೆಯಂತೆ ಚಿಮ್ಮಿದ ಪ್ರತಿಭೆ ಟಿ.ಗಿರಿಜಕ್ಕ ಆಗಿದ್ದಾರೆ ಎಂದು ಹೇಳಿದರು.
ಕೇವಲ ತಮ್ಮ ಮನೆ, ಕುಟುಂಬಕ್ಕಾಗಿ ಬದುಕಿದವರು ನೆನಪಲ್ಲಿ ಉಳಿಯುವುದಿಲ್ಲ. ಸಮಾಜಮುಖಿಯಾಗಿ ಬದುಕಿದವರ ನೆನಪು ಜನಮಾನಸದಲ್ಲಿ ಹಚ್ಚ ಹಸಿರಾಗಿರುತ್ತದೆ. ಯಾರೂ ಸ್ವಾರ್ಥಕ್ಕಾಗಿ ಬದುಕುತ್ತಾರೋ ಅಂತಹವರನ್ನು ಇತಿಹಾಸವಾಗಲೀ, ಜನರಾಗಲೀ ನೆನಪಿಸಿಕೊಳ್ಳುವುದಿಲ್ಲ. ಆದರೆ, ಸಮಾಜಮುಖಿಯಾಗಿ ಬದುಕಿದ ಸಾಹಿತಿ, ಚಿಂತಕ, ಸಾಧಕರನ್ನು ಸಮಾಜ ಸದಾ ಸ್ಮರಿಸುತ್ತದೆ. ಅಂತಹವರ ಸಾಲಿನಲ್ಲಿ ಟಿ.ಗಿರಿಜಾರವರು ಒಬ್ಬರಾಗಿದ್ದಾರೆಂದು ಬಣ್ಣಿಸಿದರು.
ಎಲ್ಲಾ ಅಂಗಾಂಗಳು ಸರಿ ಇರುವ ಜನರಿಂದಲೂ ಸಾಧನೆ ಅಸಾಧ್ಯ. ಅಂತಹವರು ತಮ್ಮ ವೈಫಲ್ಯ ಒಪ್ಪಿಕೊಳ್ಳದೆ, ಸಾಧನೆಗೆ ಅನೇಕ ಅಡ್ಡಿ-ಆತಂಕಗಳ ನೆಪ ಹುಡುಕುತ್ತಾರೆ. ಆದರೆ, ಟಿ.ಗಿರಿಜಾರವರು ಅಂಗವೈಕಲ್ಯವನ್ನು ಮೆಟ್ಟಿ ನಿಂತು, ಸಾಹಿತಿಯಾಗಿ, ಸಂಶೋಧಕಿಯಾಗಿ ಹೆಸರು ಮಾಡಿದವರಾಗಿದ್ದಾರೆ. ಸಾಮಾನ್ಯವಾಗಿ ಮಹಿಳಾ ಲೇಖಕಿಯರು ಕೌಟುಂಬಿಕ ಕಾದಂಬರಿಗಳಲ್ಲಿ ಕೃಷಿ ಮಾಡುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಟಿ.ಗಿರಿಜಾ ಭೌಗೋಳಿಕ ಕ್ಷೇತ್ರ ವೀಕ್ಷಣೆ ಮಾಡಿ, ಜಿಲ್ಲಾ ದರ್ಶಿನಿ ಕೃತಿಗಳನ್ನು ರಚಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಅವರ ಕೃತಿಗಳಿಂದ ತುಂಬಾ ಅನುಕೂಲವಾಗುತ್ತಿದೆ. ಸ್ವತಃ ಅಂಗವಿಕಲರಾಗಿದ್ದರೂ ಸಾಕಷ್ಟು ತಿರುಗಾಡಿ, ಅಧ್ಯಯನ ನಡೆಸಿ ಸಾಹಿತ್ಯ ಕೃಷಿ ನಡೆಸಿರುವುದು ಟಿ.ಗಿರಿಜಾ ಅವರ ಹೆಗ್ಗಳಿಕೆಯಾಗಿದೆ ಎಂದರು.
ಹಿರಿಯ ಸಾಹಿತಿ ಟಿ.ಗಿರಿಜಾರವರ ಕೃತಿ ಅವಲೋಕನ ನಡೆಸಿದ ಸಾಹಿತಿ ಗಂಗಾಧರ ಬಿ.ಎಲ್.ನಿಟ್ಟೂರ್, ಟಿ.ಗಿರಿಜಾ ಸಾಮಾಜಿಕ ಕಾದಂಬರಿ, ಐತಿಹಾಸಿಕ ಕಾದಂಬರಿ, ಸಂಪಾದಿತ ಕೃತಿ, ಆತ್ಮಕಥನ, ಜೀವನ ಚರಿತ್ರೆ ಹೀಗೆ ಅನೇಕ ಪ್ರಕಾರದ ಕೃತಿಗಳನ್ನು ರಚಿಸಿದ್ದಾರೆ. ಬದುಕಿನ ವಾಸ್ತವಗಳನ್ನು ಬಿಚ್ಚಿಡುವ ಜೊತೆಗೆ ಬದುಕಿಗಾಗಿ ತುಡಿಯುವ, ಮಿಡಿಯುವ ಭಾವ ಕೃತಿಗಳಲ್ಲಿ ವ್ಯಕ್ತವಾಗಿದೆ. ಬದುಕನ್ನು ಹತ್ತಿರದಿಂದ ಕಂಡವರು ಮಾತ್ರ ಅಂತಹದ್ದನ್ನು ಬರೆಯಲು ಸಾಧ್ಯ ಎಂದು ಹೇಳಿದರು.
ಸಮಾಜದ ಸ್ವಾಸ್ಥ್ಯದ ಬಗ್ಗೆ ಸದಾ ಚಿಂತಿಸುತ್ತಿದ್ದ ದಾದಿ ಮತ್ತು ದೀದಿ ಗಿರಿಜಮ್ಮ. ಶುಶ್ರೂಷಕಿಯಾಗಿ ಆರೋಗ್ಯ ಕಾಪಾಡಿ ದಾದಿಯಾದರೆ, ಸಮಾಜಮುಖಿ ಬರವಣಿಗೆ ಮೂಲಕ ದೀದಿಯಾದವರಾಗಿದ್ದಾರೆ. ಗಿರಿಜಾ ಅವರು ಬರೆದ 13 ಸಾಮಾಜಿಕ ಕಾದಂಬರಿಗಳು, ಐದಾರು ಐತಿಹಾಸಿಕ ಕಾದಂಬರಿಗಳು, ಸಂಪಾದಿತ ಕೃತಿಗಳು, ಬೇರೆಯವರ ಆತ್ಮಚರಿತ್ರೆ, ಅವರ ಆತ್ಮಕಥನಗಳೆಲ್ಲ ಅವರು ಅನುಭವಿಸಿ ಬರೆದವುಗಳು. ಗಿರಿಜಕ್ಕ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದ್ದು, ಅವರ ಹೆಸರಲ್ಲಿ ಗ್ರಂಥಾಲಯವನ್ನು ತೆರೆಯಬೇಕು. ಅದರಲ್ಲಿ ಅವರ ಎಲ್ಲ ಪುಸ್ತಕಗಳು ಸಿಗಬೇಕು. ಜತೆಗೆ ದಾವಣಗೆರೆಯಲ್ಲಿ ಬಿಡುಗಡೆಯಾಗುವ ಎಲ್ಲ ಕೃತಿಗಳು ಸಿಗುವಂಥ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಯಶೋದಮ್ಮ ಬಿ.ರಾಜಶೇಖರಪ್ಪ , ಲೇಖಕಿ ಟಿ.ಎಸ್. ಶೈಲಜಾ ಉಪಸ್ಥಿತರಿದ್ದರು. ಸತ್ಯಭಾಮಾ ಸ್ವಾಗತಿಸಿದರು. ಸಾಹಿತಿ ಎಸ್.ಎಂ. ಮಲ್ಲಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಧ್ಯಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.