ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಟಿ.ರಘುಮೂರ್ತಿ ಅವಿರೋಧ ಆಯ್ಕೆ

0
6

ಚಳ್ಳಕೆರೆ

     ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಎರಡನೇ ಬಾರಿಗೆ ಆಯ್ಕೆಯಾದ ಟಿ.ರಘುಮೂರ್ತಿಯವರು ಎರಡನೇ ಅವಧಿಯ ಒಂದು ವರ್ಷವನ್ನು ಪೂರೈಸಿದ್ದು, ಒಂದು ವರ್ಷದಲ್ಲೇ ಅವರು, ರಾಜಕೀಯ ಕ್ಷೇತ್ರದಲ್ಲಿ ಒಂದು ಶಕ್ತಿಯಾಗಿ ಬೆಳೆದಿದ್ಧಾರೆ. ಎರಡನೇ ಅವಧಿಯ ಶಾಸಕರಾಗಿ ಆಯ್ಕೆಯಾದ ಅವರು, ಒಂದು ವರ್ಷ ಪೂರ್ಣಗೊಳಿಸಿದ್ದು, ಹಲವಾರು ಸವಾಲುಗಳನ್ನು ಎದುರಿಸಿ ರಾಜಕೀಯ ಕ್ಷೇತ್ರದಲ್ಲಿ ತಮ್ಮ ನೆಲೆಯನ್ನು ಗಟ್ಟಿಗೊಳಿಸಿದ್ಧಾರೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಎನ್.ರವಿಕುಮಾರ್ ತಿಳಿಸಿದ್ಧಾರೆ.

   ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಬಹುಮುಖ ಪ್ರತಿಭೆವುಳ್ಳ ಇಂಜನಿಯರ್ ಪದವಿಯನ್ನು ಅಲಂಕರಿಸಿದ್ದರೂ ಸಹ ಸಾರ್ವಜನಿಕರ ಸೇವೆಯನ್ನು ಮಾಡುವ ಸದುದ್ದೇಶದಿಂದ ರಾಜಕೀಯವನ್ನು ಪ್ರವೇಶಿಸಿದ ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮ ಮೊದಲ ಅವಧಿಯ ಐದು ವರ್ಷಗಳ ಕಾಲ ಹೆಚ್ಚು ಶ್ರಮವನ್ನು ಹಾಕಿ ಇಂದು ರಾಜ್ಯದಲ್ಲಿಯೇ ಈ ಕ್ಷೇತ್ರ ಅತಿ ಹೆಚ್ಚು ಪ್ರಗತಿಹೊಂದಿದ ಕ್ಷೇತ್ರವನ್ನಾಗಿ ಮಾಡುವಲ್ಲಿ ಸಫಲರಾಗಿದ್ದಾರೆ. ಚಳ್ಳಕೆರೆ ನಗರವೂ ಸೇರಿದಂತೆ ಗ್ರಾಮಾಂತರ ಪ್ರದೇಶದ ತಮ್ಮ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಸೌಲಭ್ಯಗಳು ತಲುಪುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆಂದರು.

    ಎರಡನೇ ಅವಧಿಯಲ್ಲಿ ಶಾಸಕರಾಗಿ ಆಯ್ಕೆಯಾದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆಯುವುದೆಂಬ ವಿಶ್ವಾಸ ಪಕ್ಷದ ಮುಖಂಡರು ಹಾಗೂ ಕ್ಷೇತ್ರದ ಜನರಲ್ಲಿ ಮನೆ ಮಾಡಿತ್ತು. ಆದರೆ, ಜಿಲ್ಲೆಯಲ್ಲಿ ಏಕೈಕ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಆಯ್ಕೆಯಾದರೂ ಸಹ ಸಚಿವ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲವಾದರೂ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರಾಗಿ ಆಯ್ಕೆಗೊಂಡು ಆ ಕ್ಷೇತ್ರದಲ್ಲೂ ಸಹ ಗಮನಾರ್ಹ ಸೇವೆಯನ್ನು ಸಲ್ಲಿಸುತ್ತಿದ್ಧಾರೆ. ಎರಡನೇ ಅವಧಿಯ ಒಂದು ವರ್ಷವೂ ಸಹ ಅವರು, ಸಾರ್ಥಕ ವರ್ಷವನ್ನಾಗಿ ಮಾಡುವಲ್ಲಿ ಸಫಲರಾಗಿದ್ಧಾರೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಸ್ವಲ್ಪ ಹಿನ್ನೆಡೆಯಾದರು ಪಕ್ಷದ ಸಂಘಟನೆಯಲ್ಲಿ ದೃಢ ಹೆಜ್ಜೆ ಇಟ್ಟಿದ್ಧಾರೆ.

      ಇತ್ತೀಚೆಗೆ ನಡೆದ ಡಿಸಿಸಿ ಬ್ಯಾಂಕ್‍ನ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸಹಕಾರಿ ಕ್ಷೇತ್ರವನ್ನು ಪ್ರವೇಶಿಸಿ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಪಕ್ಷಕ್ಕೆ ಶಕ್ತಿಯನ್ನು ತುಂಭಿದ್ಧಾರೆ. ಕಳೆದ ತಿಂಗಳು ಮುಕ್ತಾಯವಾದ ಲೋಕಸಭಾ ಚುನಾವಣೆಯಲ್ಲೂ ಸಹ ಕ್ಷೇತ್ರದ ಉಸ್ತುವಾರಿಯಾಗಿ ಅಭ್ಯರ್ಥಿಪರ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಕಳೆದ ಡಿ.2018ರಂದು ನಡೆದ ಬಳ್ಳಾರಿ ಕ್ಷೇತ್ರದ ಲೋಕಸಭಾ ಉಪಚುನಾವಣೆಯಲ್ಲೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು.

      ಜಿಲ್ಲಾ ಡಿಸಿಸಿ ಬ್ಯಾಂಕ್‍ನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಟಿ.ರಘುಮೂರ್ತಿಯವರನ್ನು ಸಮಾಜ ಸೇವೆ ಎಸ್.ಎಚ್.ಸೈಯದ್, ಅಲ್ಪಸಂಖ್ಯಾತ ಮೋರ್ಚಾದ ತಾಲ್ಲೂಕು ಅಧ್ಯಕ್ಷ ಅನ್ವರ್ ಮಾಸ್ಟರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ತಿಪ್ಪೇಸ್ವಾಮಿ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿರಣ್‍ಶಂಕರ್, ಕಾಂಗ್ರೆಸ್ ಯುವ ಸಂಘಟನೆಯ ಕಾರ್ಯದರ್ಶಿ ಬಂಗ್ಲೆ ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಆರ್.ಪ್ರಸನ್ನಕುಮಾರ್, ಫರೀದ್‍ಖಾನ್, ನೇತಾಜಿ ಪ್ರಸನ್ನ, ತಾಲ್ಲೂಕು ಉಪಾಧ್ಯಕ್ಷ ವೆಂಕಟೇಶ್‍ಗುಪ್ತ ಮುಂತಾದವರು ಅಭಿನಂದಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here