ನವದೆಹಲಿ:
ಲಾಕ್‌ಡೌನ್ ಸಮಯದಲ್ಲಿ ತೆರಿಗೆ ಸಂಗ್ರಹಕ್ಕೆ ಸಮಸ್ಯೆಯಾಗಿರುವ ಹಿನ್ನೆಲೆ ಕೇಂದ್ರ ನೌಕರರ ಹೆಚ್ಚುವರಿ ತುಟ್ಟಿಭತ್ಯೆ (ಡಿಎ ಮತ್ತು ಡಿಆರ್) ಹೆಚ್ಚಳ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. 12 ರಿಂದ 17 ಕ್ಕೆ ಹೆಚ್ಚಿಸಬೇಕೆಂದು ತಾನು ಈ ಹಿಂದೆ ತೆಗೆದುಕೊಂಡಿದ್ದ ನಿರ್ಧಾರವನ್ನು ತಡೆಹಿಡಿಯಲು ಸರ್ಕಾರ ತೀರ್ಮಾನಿಸಿದೆ.ಕೇಂದ್ರದ ಈ ಕ್ರಮವು ಸುಮಾರು 50 ಲಕ್ಷ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರ ಮೇಲೆ ಪರಿಣಾಮಬೀರಲಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಪಾವತಿಸಬೇಕಾದ ಹೆಚ್ಚುವರಿ ಭತ್ಯೆ ಮತ್ತು ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಸಂದಾಯವಾಗುವ ಡಿಎ ಗಳನ್ನು 2020 ರ ಜನವರಿ 1ರಿಂದ ಅನ್ವಯಿಸುವಂತೆ ಪಾವತಿಸಲು ಸಾಧ್ಯವಿಲ್ಲ ಸರ್ಕಾರಿ ಹೇಳಿಕೆಯಲ್ಲಿ ಹೇಳಿದೆ.
ಈ ಹಿಂದೆ ಮಾರ್ಚ್ 13 ರಂದು ಕೇಂದ್ರ ನೌಕರರ ಡಿಎಯನ್ನು ಶೇಕಡಾ 5 ರಷ್ಟು ಹೆಚ್ಚಿಸಲು ಕ್ಯಾಬಿನೆಟ್ ಒಪ್ಪಿಗೆ ನೀಡಿತ್ತು. ಇದು ಕೇಂದ್ರ ಬೊಕ್ಕಸಕ್ಕೆ ಹೆಚ್ಚುವರಿ 14,510 ಕೋಟಿ ರೂ ಹೊರೆಯನ್ನು ತಂದಿತ್ತು. ಆದರೆ ಇದೀಗ ಕೊರೋನಾ ವಿರುದ್ಧ ಹೋರಾಡಲು ದೇಶ 40 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ನಲ್ಲಿದೆ. ಹಾಗಾಗಿ ಮಾರ್ಚ್ 24 ರಿಂದ ಹೆಚ್ಚಿನ ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದರಿಂದ ಸರ್ಕಾರವು ಹಣದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದು ಭಾರತೀಯ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೆಚ್ಚಿನ ಇಲಾಖೆಗಳ ಬಜೆಟ್ ಹಂಚಿಕೆಯನ್ನು ಶೇಕಡಾ 40 ರಷ್ಟು ಕಡಿತಗೊಳಿಸುವುದು ಸೇರಿದಂತೆ ವೆಚ್ಚ ಕಡಿತ ಕ್ರಮಗಳ ಸರಣಿಯನ್ನು ಸರ್ಕಾರ ಇತ್ತೀಚೆಗೆ ಘೋಷಿಸಿತು.
ಸಂಸತ್ತಿನ ಸದಸ್ಯರ (ಸಂಸದರ) ವೇತನ, ಭತ್ಯೆ ಮತ್ತು ಪಿಂಚಣಿಗಳನ್ನು ಒಂದು ವರ್ಷ ಕಾಲ ಶೇ 30 ರಷ್ಟು ಕಡಿಮೆ ಮಾಡುವ ಸುಗ್ರೀವಾಜ್ಞೆಗೆ ಏಪ್ರಿಲ್ 6 ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು ಮತ್ತು ಈ ಮೊತ್ತವನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಕೆ ಮಾಡಲಾಗುವುದೆಂದು ಹೇಳಿದೆ. ರಾಷ್ಟ್ರಪತಿಗಳು, ಉಪರಾಷ್ಟ್ರಪತಿ, ರಾಜ್ಯಗಳ ರಾಜ್ಯಪಾಲರು ಸಹ ಸಾಮಾಜಿಕ ಜವಾಬ್ದಾರಿಯಾಗಿ ವೇತನ ಕಡಿತವನ್ನು ತೆಗೆದುಕೊಳ್ಳಲು ಸ್ವಯಂ ಪ್ರೇರಣೆಯಿಂದ ನಿರ್ಧರಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.