ಬೆಂಗಳೂರು
ರಾಜ್ಯದಲ್ಲಿ ಮುಂಗಾರು ವಿಳಂಬವಾಗಿರುವ ಜತೆಗೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ರಾಜ್ಯದ ಸುಮಾರು ಎರಡು ಸಾವಿರ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಎದುರಾಗಿದೆ.
ಈ ಬಾರಿ ರಾಜ್ಯದಲ್ಲಿ ಸಮರ್ಪಕವಾಗಿ ಮುಂಗಾರು ಪೂರ್ವ ಮಳೆಯಾಗಿಲ್ಲ. ಜತೆಗೆ ಕೆರೆ ಕಟ್ಟೆಗಳು ಬತ್ತಿದ್ದು, ಜಲಾಶಯಗಳು ಬಹುತೇಕ ಖಾಲಿಯಾಗಿವೆ. ಹಲವು ಗ್ರಾಮಗಳಲ್ಲಿ ಜನತೆ ಟ್ಯಾಂಕರ್ ನೀರನ್ನೇ ಅವಲಂಬಿಸುವಂತಾಗಿದೆ. ಟ್ಯಾಂಕರ್ ನೀರು ಪೂರೈಸುವ ಗ್ರಾಮಗಳ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ. ಮಾರ್ಚ್ ನಿಂದ ಈವರೆಗೆ ಟ್ಯಾಂಕರ್ ನೀರಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದ್ದು, ಈ ಮೂರು ತಿಂಗಳ ಅವಧಿಯಲ್ಲಿ ನೀರಿಗೆ ಆಹಾಕಾರ ಸೃಷ್ಟಿಯಾಗಿದೆ.
ಕೊಳವೆ ಬಾವಿಗಳು ಬತ್ತಿಹೋಗುತ್ತಿರುವ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದ್ದು, ಗ್ರಾಮಿಣ ಭಾಗದಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ತೆಗೆದುಕೊಂಡು ನೀರು ಪೂರೈಸಲಾಗುತ್ತಿದೆ. ಇಷ್ಟಾದರೂ ಬೇಸಿಗೆಯ ದಾಹ ತೀರುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಗಳು ತಿಳಿಸಿವೆ.
ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಸಾಕಷ್ಟು ಆರ್ಥಇಕ ಸಂಪನ್ಮೂಲ ಇದ್ದರೂ ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರತಿ ಹದಿನೈದು ದಿನಗಳಿಗೊಮ್ಮೆ ಖಾಸಗಿ ಕೊಳವೆ ಬಾವಿ ಮತ್ತು ಟ್ಯಾಂಕರ್ ಮಾಲೀಕರಿಗೆ ಹಣ ಬಿಡುಗಡೆ ಮಾಡುವಂತೆ ಸರ್ಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದರೂ ಸಹ ಅದು ಸರಿಯಾಗಿ ಪಾಲನೆಯಾಗುತ್ತಿಲ್ಲ. ಇದರಿಂದ ಖಾಸಗಿ ಕೊಳವೆ ಮಾಲೀಕರು ಮತ್ತು ಟ್ಯಾಂಕರ್ ನೀರು ಪೂರೈಕೆದಾರರಲ್ಲಿ ಉತ್ಸಾಹ ಉಡುಗಿಹೋಗಿದೆ ಎನ್ನಲಾಗಿದೆ.
ಇನ್ನು ಹಲವು ಗ್ರಾಮಗಳಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸುವ ಕೆಲಸ ನಡೆಯುತ್ತಿಲ್ಲ. ಖಾಸಗಿ ನೀರು ಮಾರಾಟಗಾರರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಶುದ್ಧ ನೀರಿನ ಘಟಕಗಳಿಗೆ ಕೆಲವೆಡೆ ಬೀಗ ಹಾಕಿರುವ ಬಗ್ಗೆಯೂ ಪಂಚಾಯತ್ ರಾಜ್ ಇಲಾಖೆಗೆ ದೂರುಗಳು ಬರುತ್ತಿವೆ.
ನೈರುತ್ಯ ಮುಂಗಾರು ರಾಜ್ಯಕ್ಕೆ ಪ್ರವೇಶಿಸಿದ್ದರೂ ಸಹ ಅದು ಅಷ್ಟೊಂದು ಪ್ರಬಲವಾಗಿಲ್ಲ. ಪೂರ್ವ ಮುಂಗಾರು ಕೇವಲ ದಕ್ಷಿಣ ಒಳನಾಡಿನಲ್ಲಿ ಮಾತ್ರ ಕಾಣಿಸಿಕೊಂಡಿದೆ. ಉತ್ತರ ಒಳನಾಡಿನ ಕೆಲವೊಂದು ಪ್ರದೇಶಗಳಲ್ಲಿ ಮಳೆಯಾಗಿದೆಯಾದರೂ ಕುಡಿವ ನೀರಿನ ಬವಣೆ ನೀಗಿಸುವಷ್ಟು ವರುಣ ಕೃಪೆ ತೋರಿಲ್ಲ. ಹೀಗಾಗಿ ಕುಡಿಯುವ ನೀರಿನ ಜತೆಗೆ ಜಾನುವಾರುಗಳಿಗೂ ಸಹ ತೀವ್ರ ತೊಂದರೆ ನೀರು ಸಿಗದೆ ಪರಿತಪಿಸುತ್ತಿವೆ. ಇದೀಗ ಉತ್ತಮ ಮುಂಗಾರು ಮಳೆ ಸುರಿಯದಿದ್ದರೆ ಕುಡಿಯುವ ನೀರಿಗೆ ವರ್ಷ ಪೂರ್ತಿ ಆಹಾಕಾರ ಎದುರಾಗುವ ಆತಂಕವಿದೆ.