ಪಡಿತರ ವಿತರಣೆ : ತಹಸೀಲ್ದಾರ್ ರಿಂದ ಪರಿಶೀಲನೆ

ಗುಬ್ಬಿ

    ಕೊರೋನಾ ವೈರಾಣುವಿಂದ ಇಡಿ ದೇಶವೆ ಲಾಕ್ ಔಟ್ ಆಗಿರುವುದರಿಂದ ಜನಸಾಮಾನ್ಯರಿಗೆ ಆಹಾರದ ಕೊರತೆಯಾಗದಂತೆ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ ತಾಲ್ಲೂಕಿನಾದ್ಯಂತ ಪಡಿತರ ವಿತರಣೆ ಸಮರ್ಪಕವಾಗಿ ನಡೆಯುತ್ತಿದೆ.

     ಸಾರ್ವಜನಿಕರಿಗೆ ವಿತರಿಸುತ್ತಿರುವ ಆಹಾರ ಸಾಮಗ್ರಿಗಳು ಸಮರ್ಪಕವಾಗಿ ದೊರೆಯುತ್ತಿವೆಯೆ ಎಂಬುದರ ಬಗ್ಗೆ ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ್ ತಾಲ್ಲೂಕಿನ ಗ್ರಾಮೀಣ ಭಾಗದ ಪಡಿತರ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಎಂ.ಹೆಚ್.ಪಟ್ಟಣ ಗ್ರಾಮದ ಪಡಿತರ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಪಡಿತರ ಪಡೆಯಲು ಬಂದಿದ್ದವರಿಗೆ ಮಾಸ್ಕ್‍ಗಳನ್ನು ವಿತರಿಸಿದ ತಹಸೀಲ್ದಾರ್ ಸಾರ್ವಜನಿಕರೊಂದಿಗೆ ಚರ್ಚಿಸಿ ನಿಯಮಾನುಸಾರ ಎರಡು ತಿಂಗಳ ಪಡಿತರವನ್ನು ವಿತರಿಸುತ್ತಿದೆ.

     ಈ ಸೌಲಭ್ಯವನ್ನು ಗ್ರಾಮೀಣ ಜನತೆ ಸಮರ್ಪಕವಾಗಿ ಬಳಸಿಕೊಳ್ಳುವಂತೆ ತಿಳಿಸಿದ ಅವರು, ಲಾಕ್‍ಔಟ್ ಆಗಿರುವುದರಿಂದ ಸಾರ್ವಜನಿಕರು ಮನೆಯಿಂದ ಹೊರಬರದಂತೆ ಅಗತ್ಯ ಎಚ್ಚರಿಕೆಯಿಂದಿರಬೇಕು. ಪಡಿತರ ಆಹಾರ ಸಾಮಗ್ರಿಗಳನ್ನು ಪಡೆಯುವಾಗ ಸಾಮಾಜಿಕ ಅಂತರ ಕಾಪಾಡುವುದರ ಜೊತೆಗೆ ಕೊರೋನಾ ವೈರಾಣು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

     ಈಗಾಗಲೆ ಪಟ್ಟಣದಲ್ಲಿ ಬೇಕರಿಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಅವಧಿ ಮೀರಿದ ಬೇಕರಿ ಉತ್ಪನ್ನಗಳನ್ನು ಯಾವುದೆ ಕಾರಣಕ್ಕೂ ಮಾರಾಟ ಮಾಡಬಾರದು. ಒಂದು ವೇಳೆ ಫುಡ್ ಪಾಯಿಸನ್ ಆದರೆ ಬೇಕರಿ ಮಾಲೀಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಅಂಗಡಿ ಪರವಾನಗಿಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದರು.

     ಪಡಿತರ ಅಂಗಡಿ ಮಾಲೀಕ ಉಪೇಂದ್ರ ಮಾತನಾಡಿ, ಪಡಿತರ ಆಹಾರ ಸಾಮಗ್ರಿಗಳನ್ನು ಪಡೆಯಲು ಸಾರ್ವಜನಿಕರಿಗೆ ಸಾಮಾಜಿಕ ಅಂತರದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಬಿಸಿಲು ಹೆಚ್ಚಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಮಿಯಾನ ಹಾಕಿ ನೆರಳು ಮತ್ತು ಸಾಮಾಜಿಕ ಅಂತರಕ್ಕನುಗುಣವಾಗಿ ಚೇರ್‍ಗಳನ್ನು ವ್ಯವಸ್ಥೆ ಮಾಡಿ ನಿಯಮಾನುಸಾರ ಪಡಿತರ ವಿತರಿಸಲಾಗುತ್ತಿದೆ. ಸಾರ್ವಜನಿಕರಿಗೆ ಮಾಸ್ಕ್ ವಿತರಿಸುವುದರ ಜೊತೆಗೆ ಸಾನಿಟೈಸರ್‍ನಿಂದ ಕೈ ತೊಳೆಸಿ ನಂತರ ಪಡಿತರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link