ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ : ತಹಶೀಲ್ದಾರ್ ಖುದ್ದಾಗಿ ಬೇಟಿ ನೀಡಿ ವರದಿ ಸಲ್ಲಿಸಬೇಕು

ಚಿತ್ರದುರ್ಗ :

    ತಹಶೀಲ್ದಾರ್‍ಗಳು ಸಂಬಂಧಪಟ್ಟ ಮತದಾನ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ, ಬಿಎಲ್‍ಓಗಳ ಕಾರ್ಯವೈಖರಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ವೀಕ್ಷಕರು ತಹಶೀಲ್ದಾರ್‍ಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ವಿಧಾನಸಭೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆ’ಯಲ್ಲಿ ಮಾತನಾಡಿದರು.

    ಆಯಾ ತಾಲ್ಲೂಕಿನ ತಹಶೀಲ್ದಾರ್‍ಗಳು ಬಿಎಲ್‍ಓಗಳ ಕಾರ್ಯ ಚಟುವಟಿಕೆಯನ್ನು ನಿರಂತರ ಪರಿಶೀಲಿಸಬೇಕು. ದಿನಕ್ಕೆ ಕನಿಷ್ಠ 40 ಬಿಎಲ್‍ಓಗಳ ಕಾರ್ಯದ ಬಗ್ಗೆ ಗಮನಹರಿಸಬೇಕು. ಹಾಗೂ ಬಿಎಲ್‍ಓ ಅವರಿಂದ ಮತದಾರರ ಮತಪಟ್ಟಿ ಪರಿಷ್ಕರಣೆ ಕುರಿತ ಅಭಿಪ್ರಾಯ ಸಂಗ್ರಹಿಸಬೇಕು. ಒಂದು ವಾರದಲ್ಲಿ ಉಪವಿಭಾಗಾಧಿಕಾರಿಗಳು ಜಿಲ್ಲೆಯ 3 ತಾಲ್ಲೂಕುಗಳಿಗೆ ಹಾಗೂ ಅಪರ ಜಿಲ್ಲಾಧಿಕಾರಿಗಳು 3 ತಾಲ್ಲೂಕುಗಳಿಗೆ ಭೇಟಿ ನೀಡಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಕಾರ್ಯದ ಬಗ್ಗೆ ವರದಿ ತಯಾರಿಸಬೇಕು ಎಂದು ಸೂಚಿಸಿದರು

    ಜಿಲ್ಲೆಯಲ್ಲಿ 30 ರಿಂದ 39 ವಯಸ್ಸಿನ ಶೇ 24.45, 20 ರಿಂದ 29 ವಯಸ್ಸಿನವರು ಶೇ.21.31 ಹಾಗೂ 40 ರಿಂದ 49 ವಯಸ್ಸಿನ ಮತದಾರರು ಶೇ.19.96 ರಷ್ಟಿದ್ದಾರೆ. ಆದರೆ 18 ರಿಂದ 19 ವರ್ಷ ವಯೋಮಾನದ ಮತದಾರರು ಕೇವಲ ಶೇ. 1.16 ರಷ್ಟಿದೆ. ಈ ಕುರಿತು ಆಯಾ ತಾಲ್ಲೂಕಿನ ತಹಶೀಲ್ದಾರ್‍ರು ಪರಿಶೀಲನೆ ನಡೆಸಿ, ತಪ್ಪುಗಳಿದ್ದರೆ ತಿದ್ದಿಕೊಳ್ಳಬೇಕು. 18 ವರ್ಷ ಮೇಲ್ಪಟ್ಟ ಯಾವ ಮತದಾರರು ಮತದಾರರ ಪಟ್ಟಿಯಿಂದ ತಮ್ಮ ಹೆಸರು ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು ಎಂದರು.

    ಮತಗಟ್ಟೆ ಮಟ್ಟದ ಏಜೆಂಟ್‍ಗಳನ್ನಾಗಿ ರಾಜಕೀಯ ಪಕ್ಷದ ಒಬ್ಬರನ್ನು ನೇಮಿಸಲು ಪತ್ರಿಕಾ ಪ್ರಕಟಣೆ ನೀಡಿ. ಶೀಘ್ರವೇ ಈ ಕಾರ್ಯ ಮುಗಿಯಬೇಕು. ಮತದಾನ ಕೇಂದ್ರಗಳಲ್ಲಿ ಶೇ.30 ರಷ್ಟಾದರೂ ಭೇಟಿ ನೀಡಿ, ಬಿಎಲ್‍ಓ ಗಳ ಕಾರ್ಯ ಪರಿಶೀಲಿಸಬೇಕು. ಚುನಾವಣೆಗೆ ಸಂಬಂಧಿಸಿದ ಮತದಾರರ ಪಟ್ಟಿ ಪರಿಶೀಲನೆ ಬಗ್ಗೆ ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ವಾಟ್ಸಾಪ್‍ನಂತಹ ಗ್ರೂಪ್‍ಗಳಲ್ಲಿ ಹೆಚ್ಚು ಪ್ರಚಾರ ಮಾಡಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ವೀಕ್ಷಕರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಹೇಳಿದರು.

  ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಅವರು ಮಾತನಾಡಿ, ಜಿಲ್ಲೆಯಲ್ಲಿ 1343207 ಮತದಾರರಿದ್ದು, ನಗರ ಪ್ರದೇಶದಲ್ಲಿ 276 ಹಾಗೂ ಗ್ರಾಮೀಣ ಪ್ರದೇಶದಲ್ಲಿ 1372 ಮತಗಟ್ಟೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1648 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಬಿಎಲ್‍ಓಗಳಿಗೆ ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದ 1648 ಜನರನ್ನು ಆಯ್ಕೆ ಮಾಡಿದ್ದು, ಮತದಾರರ ಪಟ್ಟಿಗೆ ಮತದಾರರ ಹೆಸರು ನೋಂದಾಯಿಸಲು, ಪಟ್ಟಿಯಿಂದ ಹೆಸರು ತೆಗೆಯುವ ಕುರಿತು ಜಿಲ್ಲೆಯ 06 ತಾಲ್ಲೂಕಿನ ಬಿಎಲ್‍ಓಗಳಿಗೆ ತರಬೇತಿ ನೀಡಲಾಗಿದೆ ಎಂದರು.

   ಇದಕ್ಕೆ ಪ್ರತಿಕ್ರಿಯಿಸಿದ ಮಹೇಶ್ವರ್ ರಾವ್ ಅವರು ತರಬೇತಿ ಸಮಯದಲ್ಲಿ ಬಿಎಲ್‍ಓ ಅವರ ಪ್ರಾಮಾಣಿಕತೆ, ತರಬೇತಿಯಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆ ಕುರಿತಂತೆ ವಿಚಾರಿಸಿದರು. ಜೊತೆಗೆ ತಂತ್ರಾಂಶದಲ್ಲಿನ ತೊಂದರೆ ಅಥವಾ ಮತದಾರರ ಪಟ್ಟಿಗೆ ಮತದಾರರನ ಹೆಸರು ನೋಂದಾಯಿಸುವ ಬಗ್ಗೆ ಯಾವುದಾದರೂ ತೊಂದರೆಗಳಿದ್ದರೆ ಅಥವಾ ಬಿಎಲ್‍ಓ ಅವರಿಂದ ಮತದಾರರ ಪಟ್ಟಿಗೆ ಸಂಬಂಧಿಸಿದ ಯಾವುದಾದರೂ ಗೊಂದಲಗಳಿದ್ದರೆ ತಹಶೀಲ್ದಾರ್‍ಗಳು ಇದನ್ನು ಸಂಗ್ರಹಿಸಿ, ಚುನಾವಣಾ ಶಾಖೆಗೆ ನೀಡುವಂತೆ ಸೂಚಿಸಿದರು. ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿರುವ 2 ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯವೈಖರಿ ಪರಿಶೀಲಿಸುವುದಾಗಿ ಅವರು ತಿಳಿಸಿದರು.

     ಜಿಲ್ಲೆಯಲ್ಲಿ ಮತದಾರರ ನೋಂದಣಿ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಮುಖ್ಯಸ್ಥರಾಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ವರದಿ ಎರಡು ದಿನಗಳ ಒಳಗಾಗಿ ಸಲ್ಲಿಕೆಯಾಗಬೇಕು ಎಂದರು.

   ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿ. ಪ್ರಸನ್ನ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶೀಲ್ದಾರ್‍ಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link