ಹುಳಿಯಾರು
ಪಟ್ಟಣ ಪಂಚಾಯ್ತಿಯ ಆಡಳಿತಾಧಿಕಾರಿಯಾಗಿ ತಹಶೀಲ್ದಾರ್ ತೇಜಸ್ವಿನಿ ಅವರು ಗಾಂಧೀಜಿ ಪೋಟೋಗೆ ಹೂವಿನ ಹಾರ ಹಾಕಿ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಅಲ್ಲದೆ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಜೀವ ಚೈತನ್ಯ ಕಳೆದುಕೊಂಡಿದ್ದ ಪಪಂ ಆಡಳಿತಕ್ಕೆ ಚುರುಕು ಮುಟ್ಟಿಸಿದರು.
ಹುಳಿಯಾರು ಪಟ್ಟಣ ಪಂಚಾಯ್ತಿಯ ಮಧ್ಯಂತರ ಕೌನ್ಸಿಲ್ ಅವಧಿಯು ಮುಕ್ತಾಯವಾದ ಕಾರಣ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಸೆಕ್ಷನ್ 315 ರನ್ವಯ ಆಡಳಿತಾತ್ಮಕ ಹೊತದೃಷ್ಠಿಯಿಂದ ಮುಂದಿನ ಹೊಸ ಚುನಾಯಿತ ಕೌನ್ಸಿಲ್ ಅಸ್ತಿತ್ವಕ್ಕೆ ಬರುವವರೆವಿಗೂ ಕಾರ್ಯನಿರ್ವಹಣೆಗಾಗಿ ಆಡಳಿತಾಧಿಕಾರಿಯಾಗಿ ತಹಸೀಲ್ದಾರ್ ತೇಜಸ್ವಿನಿ ನೇಮಕ ಮಾಡಲಾದ ಹಿನ್ನೆಲೆಯಲ್ಲಿ ಅವರು ಅಧಿಕಾರ ಸ್ವೀಕರಿಸಿದರು.
ಪಟ್ಟಣ ಪಂಚಾಯ್ತಿಯಾಗಿ ಒಂದೂವರೆ ವರ್ಷವಾದರೂ ನೀವಿನ್ನೂ ಗ್ರಾಪಂ ಮನಸ್ಥಿತಿಯಿಂದ ಬದಲಾಗಿಲ್ಲ. ಪರಿಣಾಮ ತೆರಿಗೆ ಸಂಗ್ರಹ ಸಮರ್ಪಕವಾಗಿ ಆಗಿಲ್ಲ, ನಿವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದೀರಿ. ಹಾಗಾಗಿಯೇ ಪಪಂ ಬಗ್ಗೆ ಸಾರ್ವಜನಿಕರಿಗೆ ಒಳ್ಳೆಯ ಅಭಿಪ್ರಾಯವಿಲ್ಲದಾಗಿದೆ. ಇನ್ನಾದರೂ ತಮ್ಮತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಬೇಕು. ಇಲ್ಲವಾದರೆ ಇಂದೇ ರಜೆ ಬರೆದು ಹೋಗಿ ಇರುವ ಪ್ರಾಮಾಣಿಕ ಕೆಲಸಗಾರರಿಂದಲೇ ಕೆಲಸ ಪಡೆಯುವುದು ಹೇಗೆಂದು ನನಗೆ ಗೊತ್ತಿದೆ ಎಂದು ಪಪಂ ಸಿಬ್ಬಂಧಿಗೆ ಎಚ್ಚರಿಸಿದರು.
ನೀರು, ಬೀದಿದೀಪ, ಚರಂಡಿ ಮತ್ತಿತರ ಸಮಸ್ಯೆಗಳ ಬಗ್ಗೆ ಜನರ ದೂರ ನನ್ನ ಬಳಿಗೆ ಬರದಂತೆ ಕರ್ತವ್ಯ ನಿರ್ವಹಿಸಿ. ಬೋರನಕಣಿವೆ ಜಲಾಶಯದ ನೀರು ಬಿಡುವ ಬ್ಲಾಕ್‍ಗಳಲ್ಲಿ ನೀರು ಬಿಟ್ಟಿರುವ ಬಗ್ಗೆ ಹತ್ತು ಮಂದಿಯ ಸ್ಥಳೀಯ ನಿವಾಸಿಗಳ ಸಹಿ ಪಡೆಯಿರಿ ಎಂದು ಸೂಚಿಸಿದರು. ಈ ಹಿಂದೆ ಸಭೆಯಲ್ಲಿ ತೀರ್ಮಾನ ಮಾಡಿರುವಂತೆ ಕೆಟ್ಟಿರುವ ಬೀದಿ ದೀಪಗಳನ್ನು ಪಪಂ ಎಲೆಕ್ಟ್ರೀಷಿನ್ ಹೋಗಿ ಹೊಸ ಬಲ್ಫ್ ಹಾಕುವಂತೆ ಹೇಳಿದರು.
ಬೋರನಕಣಿವೆ ನಿರು ಶುದ್ಧೀಕರಣ ಘಟಕದ ನೀರು ಶುದ್ಧವಾಗದ ಹಿನ್ನೆಲೆಯಲ್ಲಿ ಶಾಸಕರೊಂದಿಗೆ ಚರ್ಚಿಸಿ ಮರಳು, ಜಲ್ಲಿ ಬದಲಿಸಲು ಪ್ರತ್ಯೇಹ ಹಣ ಮಂಜೂರು ಮಾಡಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಮಂಜುನಾಥ್, ಎಂಜಿನಿಯರ್ ಮಂಜುನಾಥ್, ಉಪತಹಸಲ್ದಾರ್ ಮಲ್ಲಿಕಾರ್ಜುನಯ್ಯ ಸೇರಿದಂತೆ ಪಪಂ ಹಾಗೂ ಕಂದಾಯ ಇಲಾಖೆಯ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
