ದಾವಣಗೆರೆ:
ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳೇ ನಡೆಯದಂತೆ ಅಧಿಕಾರಿಗಳು ಆಂದೋಲನದ ರೀತಿಯಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ-2005, ಸ್ವಾಧಾರ ಯೋಜನೆ, ಬಾಲ್ಯ ವಿವಾಹ ನಿಷೇಧ ಯೋಜನೆ, ಸ್ಥೈರ್ಯನಿಧಿ, ಮಹಿಳಾ ವಿಶೇಷ ಘಟಕ, ರಾಜ್ಯ ಮಹಿಳಾ ನಿಲಯ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಲ್ಯ ವಿವಾಹ ಆಗಾಗ್ಗೆ ಸಂಭವಿಸುವಂತಹ ಪ್ರದೇಶಗಳನ್ನು ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಗುರಿತಿಸಿ, ಅಲ್ಲಿ ಬಾಲ್ಯ ವಿವಾಹಗಳು ಆಗದಂತೆ ಹೆಚ್ಚಿನ ಗಮನ ಹರಿಸಬೇಕೆಂದು ತಾಕೀತು ಮಾಡಿದರು.
ಸಂರಕ್ಷಣಾಧಿಕಾರಿ ಪೂರ್ಣಿಮಾ ಮಾತನಾಡಿ, ಜಿಲ್ಲೆಯಲ್ಲಿ 2019ರ ಜೂನ್ ಅಂತ್ಯದ ವರೆಗೆ ಒಟ್ಟು 35 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, 33 ಬಾಲ್ಯ ವಿವಾಹ ತಡೆಗಟ್ಟಲಾಗಿದೆ, 2 ಬಾಲ್ಯ ವಿವಾಹ ನಡೆದಿದ್ದು, ಎರಡೂ ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸ ಲಾಗಿದೆ . 5 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಇಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ಮುಂದುವರೆಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶಿವಮೂರ್ತಿ, ಇಂತಹ ಕಡೆ ಬಾಲ್ಯ ವಿವಾಹ ಜರುಗುತ್ತಿದೆ ಎಂಬ ಮಾಹಿತಿ ಮೇರೆಗೆ ಬಾಲ್ಯ ವಿವಾಹ ತಡೆಯುವುದಕ್ಕಿಂತ ಜಿಲ್ಲೆಯಲ್ಲಿ ಬಾಲ್ಯವಿವಾಹಗಳೇ ಆಗದಂತೆ ಇಲಾಖೆ, ಎನ್‍ಜಿಓ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಾರ್ಯಪ್ರವೃತ್ತರಾಗಬೇಕು. ಜಿಲ್ಲೆಯಲ್ಲಿ ಪ್ರತಿ ಗ್ರಾಮಗಳ ಸಾಕ್ಷರತೆ ಕಡಿಮೆ ಇರುವ, ಬಡತನ ರೇಖೆಗಿಂತ ಕೆಳಗಿರುವ ಹಾಗೂ ಬಾಲ್ಯ ವಿವಾಹಗಳು ಹೆಚ್ಚಾಗಿ ಘಟಿಸುವಂತಹ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು.
ಅಲ್ಲಿನ ಸ್ಥಳೀಯರನ್ನೇ ಒಬ್ಬರನ್ನು ಬಾಲ್ಯ ವಿವಾಹ ಗುರುತಿಸಿ ಮಾಹಿತಿ ನೀಡಲು ಪ್ರೋತ್ಸಾಹಧನದ ಆಧಾರದಲ್ಲಿ ನಿಯೋಜಿಸಿಕೊಳ್ಳಬಹುದು. ಹಾಗೂ ಪ್ರತಿ ಗಾಮದ ಪಂಚಾಯ್ತಿ ಸದಸ್ಯರುಗಳು, ಮುಖ್ಯೋಪಾಧ್ಯಾಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯರನ್ನೊಳಗೊಂಡ ಸಮಿತಿ ರಚಿಸಿ ಜಾಗೃತಿ ಹಾಗೂ ಬಾಲ್ಯ ವಿವಾಹ ನಡೆಯದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಲ್ಲಿ ಬಾಲ್ಯ ವಿವಾಹ ಸಂಪೂರ್ಣ ತಡೆ ಸಾಧ್ಯವಾಗುತ್ತದೆ. ಇದಕ್ಕೆ ಸಾರ್ವಜನಿಕರ ಸಹಕಾರ ಮತ್ತು ಸಹಭಾಗಿತ್ವವೂ ಅತಿ ಮುಖ್ಯವಾಗುತ್ತದೆ ಎಂದರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯ್‍ಕುಮಾರ್ ಮಾತನಾಡಿ, ಬಾಲ್ಯ ವಿವಾಹ ನಿಷೇಧದ ಕುರಿತು ಪ್ರತಿ ತಾಲ್ಲೂಕು, ಗ್ರಾಮೀಣ ಭಾಗದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಜಿಲ್ಲೆಯಲ್ಲಿ ದೌರ್ಜನ್ಯ, ಕೌಟುಂಬಿಕ ಹಿಂಸೆಯಂತಹ ಪ್ರಕರಣಗಳಡಿ ಒಟ್ಟು 24 ಪ್ರಕರಣಗಳು ದಾಖಲಾಗಿದ್ದು, 6 ಪ್ರಕರಣಗಳು ಡಿಎಆರ್ ಕೋರ್ಟಿನಲ್ಲಿವೆ. 8 ಪ್ರಕರಣಗಳನ್ನು ಇಲಾಖೆಯ ಸಂರಕ್ಷಣಾಧಿಕಾರಿಗಳು ಇತ್ಯರ್ಥಪಡಿಸಿದ್ದಾರೆ. ಕಾಯ್ದೆ ಪ್ರಕಾರ ಈ ಪ್ರಕರಣಗಳು ದಾಖಲಾದ 60 ದಿನಗಳಲ್ಲಿ ವಿಲೇವಾರಿ ಆಗಬೇಕಿಂದಿದ್ದು, ನ್ಯಾಯಾಲಯದಿಂದ ತುಂಬಾ ವಿಳಂಬವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್.ಬಡಿಗೇರ್ ಮಾತನಾಡಿ, ನ್ಯಾಯಾಲಯಗಳಲ್ಲಿ ಅತಿ ಹೆಚ್ಚಿನ ಪ್ರಕರಣಗಳಿರುವುದರಿಂದ ಈ ರೀತಿಯ ವಿಳಂಬವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣಗಳ ಶೀಘ್ರ ವಿಲೇವಾರಿಗೆ ಕ್ರಮ ವಹಿಸಲಾಗುವುದು ಎಂದರು.
ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿರುವ ವಿಶೇಷ ಚಿಕಿತ್ಸಾ ಘಟಕದಲ್ಲಿ 2019 ರ ಜೂನ್ ಅಂತ್ಯದವರೆಗೆ ಅತ್ಯಾಚಾರಕ್ಕೊಳಗಾದ 18 ವರ್ಷದೊಳಗಿನ ಮೂರು ಮಕ್ಕಳು ಹಾಗೂ 18 ರಿಂದ 35 ವರ್ಷದೊಳಗಿನವರ ಇಬ್ಬರು ಸೇರಿದಂತೆ ಒಟ್ಟು 5 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇವರಿಗೆ ಕಾನೂನಿನ ನೆರವು, ಸಮಾಲೋಚನೆ ಮತ್ತು ವೈದ್ಯಕೀಯ ನೆರವನ್ನು ನೀಡಲಾಗಿದೆ ಹಾಗೂ ಸ್ಥೈರ್ಯ ನಿಧಿ ಯೋಜನೆಯಡಿ ತುರ್ತು ಪರಿಹಾರ 25 ಸಾವಿರ ರೂ.ಗಳನ್ನು ನೀಡಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು ಅತ್ಯಾಚಾರ ಮತ್ತು ಇತರೆ ದೌರ್ಜನ್ಯಕ್ಕೀಡಾದ ಹೆಣ್ಣುಮಕ್ಕಳಿಗೆ ನೀಡುವ ಸ್ಥೈರ್ಯ ನಿಧಿಯನ್ನು ನಿಗದಿತ ಸಮಯದೊಳಗೆ ನೀಡಲು ಅವಶ್ಯಕವಾದ ಎಫ್‍ಎಸ್‍ಎಲ್ ವರದಿಯನ್ನು ಬೇಗ ತರಿಸಿಕೊಂಡು ಶೀಘ್ರ ಸೌಲಭ್ಯ ನೀಡಬೇಕೆಂದು ಸೂಚಿಸಿದರು.
ಸ್ವಾಧಾರ ಯೋಜನೆ:
ಕೌಟುಂಬಿಕ ದೌರ್ಜನ್ಯದಿಂದ ಮನೆಯಿಂದ ಹೊರಗೆ ಹಾಕಲಾದ ಹಾಗೂ ಇತರೆ ಸಮಸ್ಯೆಗಳಿಂದ ಮನೆಯಿಂದ ಹೊರದೂಡಲ್ಪಟ್ಟ ಮಹಿಳೆ ಮತ್ತು ಅವರ ಮಕ್ಕಳಿಗೆ ಸ್ವಾಧಾರ ಯೋಜನೆಯಡಿ ತಾತ್ಕಾಲಿಕ ವಸತಿ ಮತ್ತು ಅವರ ಜೀವನೋಪಾಯಕ್ಕಾಗಿ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ. ನಗರದಲ್ಲಿ ಜಾಗೃತಿ ಮಹಿಳಾ ಸಂಘ ಮತ್ತು ಶುಭೋದಯ ಸ್ವಯಂ ಸೇವಾ ಸಂಸ್ಥೆಗಳೆಂಬ ಎರಡು ಎನ್‍ಜಿಓಗಳು ಇಲಾಖೆಯಡಿ ಸ್ವಾಧಾರ ಗೃಹಗಳನ್ನು ನಡೆಸುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ವಿಜಯಕುಮಾರ್ ಮಾಹಿತಿ ನೀಡಿದರು.
ಜಾಗೃತಿ ಮಹಿಳಾ ಸಂಘದ ಕಾರ್ಯದರ್ಶಿ ಹಮೀದಾ ಮಾತನಾಡಿ, ಈ ವರ್ಷದ ಪ್ರಾರಂಭದಲ್ಲಿ ತಮ್ಮ ಸ್ವಾಧಾರ ಕೇಂದ್ರದಲ್ಲಿ 28 ಮಹಿಳೆಯರು ಮತ್ತು 12 ಮಕ್ಕಳಿದ್ದರು. ಹೊಸದಾಗಿ 314 ಮಹಿಳೆಯರು ಮತ್ತು 66 ಮಕ್ಕಳು ದಾಖಲಾಗಿದ್ದು ಒಟ್ಟು 342 ಮಹಿಳೆಯರು ಹಾಗೂ 78 ಮಕ್ಕಳು ದಾಖಲಾಗಿದ್ದು. ಇವರಲ್ಲಿ 312 ಮಹಿಳೆಯರು ಪೋಷಕರ, ಪತಿ ಮನೆಯವರ ಮತ್ತು ಸ್ವಾವಲಂಬಿಗಳಾಗಿ ಬಿಡುಗಡೆ ಹೊಂದಿರುತ್ತಾರೆ ಹಾಗೂ 72 ಮಕ್ಕಳು ಪೋಷಕರೊಂದಿಗೆ ಬಿಡುಗಡೆಯಾಗಿರುತ್ತಾರೆ. ಇವರ ವಸತಿ ಸಮಯದಲ್ಲಿ ಪುನರ್ವಸತಿಗಾಗಿ ಟೈಲರಿಂಗ್, ಬ್ಯೂಟಿಷಿಯನ್, ಬ್ಯಾಗ್, ಎಂಬ್ರಾಯಿಡರಿಯಂತಹ ತರಬೇತಿಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಹೆಚ್ ವಿಜಯ್ ಕುಮಾರ್ ಮಾತನಾಡಿ, ವಿಶೇಷ ಪಾಲನಾ ಯೋಜನೆಯಲ್ಲಿ ಒಂದು ಕುಟುಂಬದ ಒಂದು ಮಗುವಿಗೆ ಮಾಸಿಕವಾಗಿ ಒಂದು ಸಾವಿರ ನೀಡಲಾಗುತ್ತಿದೆ. 2018-19ನೇ ಸಾಲಿನಲ್ಲಿ ಮೂರು ಕಂತುಗಳಲ್ಲಿ ಒಟ್ಟು 38,20,368 ರೂ.ಗಳನ್ನು ಬಿಡುಗಡೆಯಾಗಿದ್ದು, 483 ಫಲಾನುಭವಿಗಳಿಗೆ ಆರ್.ಟಿ.ಜಿ.ಎಸ್. ಮೂಲಕ ಅವರ ಖಾತೆಗೆ ಜಮಾ ಮಾಡಲಾಗಿದೆ. 2019-20 ನೇ ಸಾಲಿಗೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಮಾಹಿತಿ ನೀಡಿದರು.
ಪ್ರಾಯೋಜಿತ ಕಾರ್ಯಕ್ರಮದಲ್ಲಿ 6 ರಿಂದ 18 ವರ್ಷದ ಏಕಪೋಷಕ ಮಕ್ಕಳಿಗೆ, ಖೈದಿಗಳ ಮಕ್ಕಳಿಗೆ ಹಾಗೂ ದೇವದಾಸಿಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 2018- 19 ನೇ ಸಾಲಿನಲ್ಲಿ ರೂ. 9,04,146 ಲಕ್ಷ ಅನುದಾನ ಬಿಡುಗಡೆಯಾಗಿದ್ದು, 61 ಮಕ್ಕಳಿಗೆ ಮಾಸಿಕವಾಗಿ ಒಂದು ಸಾವಿರದಂತೆ ವಾರ್ಷಿಕವಾಗಿ ರೂ. 5,70,000 ಗಳನ್ನು ಆರ್.ಟಿ.ಜಿ.ಎಸ್. ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. 2019-20 ನೇ ಸಾಲಿಗೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳದರು.
ದತ್ತು ಕಾರ್ಯಕ್ರಮದಡಿ ದತ್ತು ಕೆಂದ್ರದಿಂದ 6 ವರ್ಷದೊಳಗಿನ ವಿಶೇಷ ಚೇತನ ಮಕ್ಕಳನ್ನು ವಿದೇಶಿಯರು ದತ್ತು ಪಡೆದಿದ್ದಾರೆ. ಯುಎಸ್‍ಎ, ಮಾಲ್ಟಾ ಮತ್ತು ಸ್ಪೇನ್ ದೇಶದವರು ಒಟ್ಟು 7 ವಿಶೇಷ ಮಕ್ಕಳನ್ನು ದತ್ತು ಪಡೆದಿದ್ದಾರೆ. ಪ್ರಸ್ತುತ ವಿಶೇಷ ದತ್ತು ಸಂಸ್ಥೆಯಲ್ಲಿ 2 ಗಂಡು ಹಾಗೂ 6 ಹೆಣ್ಣು ಸೇರಿದಂತೆ ಒಟ್ಟು 8 ಮಕ್ಕಳಿದ್ದಾರೆ ಎಂದರು.
ಸಭೆಯಲ್ಲಿ ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಚಿಗಟೀರಿ ಜಿಲ್ಲಾಸ್ಪತ್ರೆಯ ಅಧೀಕ್ಷಕಿ ಡಾ.ನೀಲಾಂಬಿಕೆ, ಬಾಲಕರ ಸರ್ಕಾರಿ ಬಾಲ ಭವನದ ಅಧೀಕ್ಷಕ ಮಹಾಂತಸ್ವಾಮಿ ವಿ.ಪೂಜಾರ್, ಬಾಲಕಿಯರ ಸರ್ಕಾರಿ ಬಾಲ ಭವನದ ಅಧೀಕ್ಷಕಿ ಯಶೋಧಮ್ಮ ವೈ.ಆರ್, ಎಲ್ಲಾ ತಾಲ್ಲೂಕುಗಳ ಸಿಡಿಪಿಓ ಗಳು, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರಾಮನಾಯ್ಕ, ವಕೀಲೆ ಮಂಜುಳಾ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
