ಆರೋಪಿಗಳು ಯಾರೇ ಆಗಲಿ ಅವರ ವಿರುದ್ಧ ಕ್ರಮ ಕೈಗೊಳ್ಳಿ : ಎಂ ಬಿ ಪಾಟೀಲ್

ಬೆಂಗಳೂರು

    ಡ್ರಗ್ಸ್ ಮಾಫಿಯಾದಲ್ಲಿ ಯಾರೇ ಶ್ರೀಮಂತರು, ರಾಜಕಾರಣಿಗಳ ಮಕ್ಕಳು ಇರಬಹುದು ಅವರ ವಿರುದ್ಧ ಕ್ರಮ ಅನಿವಾರ್ಯ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

   ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಶ್ರೀಮಂತರು, ರಾಜಕಾರಣಿಗಳ ಮಕ್ಕಳು ಇರಬಹುದು. ಹಾಗಂತ ಅವರಿಗೇನು ವಿಶೇಷ ರಿಯಾಯ್ತಿ ಇದ್ಯಾ?. ಕಾನೂನು ಎಲ್ಲರಿಗೂ ಒಂದೇ. ಯಾರೇ ಇರಲಿ ಕ್ರಮ ಅನಿವಾರ್ಯವಾಗಬೇಕು. ಅವರು,ಇವರು ಅಂತ ಯಾವುದೇ ಭೇದಭಾವ ಮಾಡಬಾರದು ಎಂದು ಆಗ್ರಹಿಸಿದರು.

    ತಾವು ಗೃಹ ಸಚಿವನಾಗಿದ್ದಾಗ ಸಿನಿಮಾ ಇಂಡಸ್ಟ್ರಿ ಬಗ್ಗೆ ದೂರು ಬಂದಿರಲಿಲ್ಲ. ಆದರೆ ಸಿನಿಮಾ, ಮಾಡೆಲ್ ಇಂಡಸ್ಟ್ರಿ ಯಲ್ಲಿ ಡ್ರಗ್ಸ್ ಸ್ವಲ್ಪ ಸಾಮಾನ್ಯ. ಇದರ ಬಗ್ಗೆ ಸರ್ಕಾರ ಕಡಿವಾಣ ಹಾಕಬೇಕು. ಡಾರ್ಕ್ ನೆಸ್ಟ್ ಬೇರೆ ಬೇರೆ ಆನ್ ಲೈನ್ ವ್ಯವಸ್ಥೆಯಿದೆ. ಡ್ರಗ್ಸ್ ಮಾರಾಟ ಇಲ್ಲೇ ನಡೆಯುತ್ತದೆ. ಇದರ ಬಗ್ಗೆ ಸೈಬರ್ ಕ್ರೈಂ ನವರು ಒತ್ತು ಕೊಡಬೇಕು ಎಂದು ಒತ್ತಾಯಿಸಿದರು.

    ದೆಹಲಿ, ಮುಂಬೈ, ಪಂಜಾಬ್ ನಲ್ಲಿ ಇದರ ಹಾವಳಿ ಹೆಚ್ಚು. ಇತ್ತೀಚೆಗೆ ಬೆಂಗಳೂರಿನಲ್ಲೂ ಕೂಡ ಹೆಚ್ಚಿದೆ. ನಾರ್ಕೋಟಿಕ್ಸ್ ವಿಂಗ್ ಗೆ ಇದರ ಮಾಹಿತಿ ಇರುತ್ತದೆ. ಎಲ್ಲಿಂದ ಬರುತ್ತದೆ, ಹೇಗೆ ಬರುತ್ತದೆ ಎಂದು ಅವರಿಗೆ ಗೊತ್ತಿರುತ್ತದೆ. ಆದರೆ ಎಲ್ಲಿ ಮಾರಾಟ ಮಾಡಲಾಗುತ್ತದೆ ಎಂಬುದು ಸ್ಥಳೀಯ ಪೊಲೀಸರಿಗೆ ಗೊತ್ತಿರುತ್ತದೆ. ಹೀಗಾಗಿ ಎರಡೂ ಕಡೆ ಹೆಚ್ಚು ಗಮನಹರಿಸಿದ್ದೆವು. ಮಣಿಪಾಲ್ ನಲ್ಲೂ ನಾವಿದ್ದಾಗ ಹೆಚ್ಚು ಆರೋಪ ಕೇಳಿ ಬಂದಿತ್ತು. ಡ್ರಗ್ಸ್ ಹಾವಳಿ ಅಲ್ಲಿ ಹೆಚ್ಚಿತ್ತು. ಅಲ್ಲಿ ಭೇಟಿ ಕೊಟ್ಟು ನಿಯಂತ್ರಣಕ್ಕೆ ಮುಂದಾಗಿದ್ದೆ. ಮಣಿಪಾಲ್ ನಲ್ಲಿ ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕಿದ್ದೆ.

   ಇವತ್ತು ಆನ್ ಲೈನ್ ನಲ್ಲೂ ಡ್ರಗ್ಸ್ ಮಾರಾಟ ನಡೆಯುತ್ತಿದೆ. ಸೈಬರ್ ಕ್ರೈಂ ಕೂಡ ಇದರ ಬಗ್ಗೆ ಗಮನಹರಿಸಬೇಕು. ಇದರ ಕಡಿವಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಇದನ್ನು ಇಲ್ಲಿಗೇ ಬಿಡಬಾರದು, ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂದು ಆಗ್ರಹಿಸಿದರು. ಉತ್ತರಕರ್ನಾಟಕದಲ್ಲಿ ನೆರೆ ವಿಚಾರವಾಗಿ ಮಾತನಾಡಿದ ಅವರು, ಕಳೆದ ಬಾರಿ 34 ಸಾವಿರ ಕೋಟಿ ನಷ್ಟ ಆಗಿತ್ತು. ಅದರಲ್ಲಿ ಎಷ್ಟು ನೆರವು ರಾಜ್ಯಕ್ಕೆ ಸಿಕ್ಕಿದೆ?. ಪ್ರವಾಹ ಬರುತ್ತದೆ, ಹೋಗುತ್ತದೆ. ಜನರು ಸಂತ್ರಸ್ತರಾಗುತ್ತಾರೆ, ಈಗಲೂ ಆಗುತ್ತಲೇ ಇದ್ದಾರೆ. ಜನರಿಗೆ ಎಷ್ಟು ಪರಿಹಾರ ಕೊಟ್ಟಿದ್ದಾರೆ. ಕೊರೊನಾ ಒಂದು ನೆಪ ಮಾಡಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.

   ರಾಜ್ಯದ ಸಂಸದರು, ಸರ್ಕಾರ ಏನು ಮಾಡುತ್ತಿದೆ. ಸರ್ಕಾರವನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ. ಅಲ್ಲಿನ ಜನ ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ. ಜನರ ಬದುಕು ಕಟ್ಟಿಕೊಡುವವರು ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap