ಬೆಂಗಳೂರು :
ಲಾಕ್ ಡೌನ್ ನಿಂದ ಬಡವರು ಹಾಗೂ ಮಧ್ಯಮ ವರ್ಗದ ಜನತೆ ತೊಂದರೆಯಲ್ಲಿದ್ದಾರೆ. ಈ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಂಡು ಕೆಲ ವ್ಯಾಪಾರಸ್ತರು ಅಗತ್ಯ ವಸ್ತುಗಳ ಬೆಲೆಯನ್ನು ದಿಢೀರ್ ಏರಿಕೆ ಮಾಡಿದ್ದಾರೆ. ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆಯ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಅಗತ್ಯ ವಸ್ತುಗಳ ಬೆಲೆಯನ್ನು ಶೇ. 20-30ರಷ್ಟು ಏರಿಕೆ ಮಾಡಿದರೆ ಈಗಾಗಲೇ ಕಷ್ಟದಲ್ಲಿರುವ ಬಡವರಿಗೆ ಇನ್ನಷ್ಟು ತೊಂದರೆಯಾಗುತ್ತದೆ. ಅಕ್ಕಿ, ಬೇಳೆ ಬೆಲೆ ಹೆಚ್ಚಾದರೆ ಖರೀದಿ ಮಾಡುವುದಾದರೂ ಹೇಗೆ ? ಈಗಲೇ ಅವರಿಗೆ ದುಡಿಮೆ ಇಲ್ಲ, ಹಣವೂ ಇಲ್ಲ. ಈ ಕುರಿತು ಗಮನ ಹರಿಸಿ, ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಯವರು ಆಹಾರ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದಿದ್ದಾರೆ.
ಹಣ್ಣು, ತರಕಾರಿ ಸೇರಿದಂತೆ ತಾವು ಬೆಳೆದಿರುವ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವವರೇ ಇಲ್ಲ ಎಂದು ಅನೇಕ ರೈತರು ದೂರವಾಣಿ ಕರೆ ಮಾಡಿ ಹೇಳೂತ್ತಿದ್ದಾರೆ. ಅದೇ ರೀತಿ ಭತ್ತ, ರಾಗಿಯನ್ನೂ ಖರೀದಿಸುತ್ತಿಲ್ಲ ಎನ್ನುತ್ತಿದ್ದಾರೆ. ಈ ಕುರಿತೂ ಸರ್ಕಾರ ಗಮನ ಹರಿಸಬೇಕು.
ಬೆಳೆ ಹಾನಿ-ಪರಿಹಾರಕ್ಕೆ ಆಗ್ರಹ
ರಾಜ್ಯದ ವಿವಿಧೆಡೆ ಇತ್ತೀಚೆಗೆ ಭಾರಿ ಮಳೆಯಾಗಿದೆ ಇದರಿಂದ ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತಿತರ ಜಿಲ್ಲೆಗಳಲ್ಲಿ ಭತ್ತ, ಕಬ್ಬು, ಬಾಳೆ ಬೆಳೆಗೆ ಹಾನಿಯಾಗಿದೆ. ಎಲ್ಲೆಲ್ಲಿ ಹಾನಿಯಾಗಿದೆ. ಅಲ್ಲಿ ಪರಿಹಾರ ಕೊಡಬೇಕು. ಬೆಳೆ ನಷ್ಟ ಕುರಿತು ಸಮೀಕ್ಷೆ ನಡೆಸಬೇಕು.
ವೇತನ ಕಡಿತಕ್ಕೆ ಸಹಮತ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿನ್ನೆ ದೂರವಾಣಿ ಕರೆ ಮಾಡಿ, ಶಾಸಕರು, ಸಂಸದರ ವೇತನ ಕಡಿತ ಮಾಡುವುದಾಗಿ ಹೇಳಿದ್ದಾರೆ. ಅದಕ್ಕೆ ನಮ್ಮ ಸಹಮತವೂ ಇದೆ. ಸಂಕಷ್ಟದ ಸಂದಭೃದಲ್ಲಿ ಸರ್ಕಾರದ ಕ್ರಮಕ್ಕೆ ಪ್ರತಿಪಕ್ಷಗಳು ಸಹಕರಿಸಬೇಕಾಗುತ್ತದೆ. ಇದಕ್ಕೆ ನಮ್ಮ ಒಪ್ಪಿಗೆಯೂ ಇದೆ.
ಶಾಸಕರ ವಿರುದ್ಧ ಕ್ರಮಿನಲ್ ಕೇಸಿಗೆ ಆಗ್ರಹ
ಇತ್ತೀಚೆಗೆ ಇಡೀ ಅಲ್ಪ ಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಕೆಲವರು ಮಾತನಾಡುತ್ತಿದ್ದಾರೆ. ನಿಜಾಮುದ್ದೀನ್‍ಗೆ ಹೋಗಿ ಬಂದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಿ. ಇದಕ್ಕೆ ನಮ್ಮ ತಕರಾರು ಇಲ್ಲ. ಒಂದು ವೇಳೆ ನಿಜಾಮುದ್ದೀನ್‍ಗೆ ಹೋಗಿ ಬಂದವರ ಪೈಕಿ ಯಾರಾದರೂ ದುರುದ್ದೇಶಪೂರ್ವಕವಾಗಿ ಮಾಹಿತಿ ನೀಡದ್ದೇ ಇದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಿ. ಆದರೆ, ಆ ವರ್ಗದವರನ್ನೇ ಗುರಿಯಾಗಿಟ್ಟುಕೊಂಡು ಆರೋಪ ಮಾಡುವುದು ಸರಿಯಲ್ಲ.
ಇಡೀ ಸಮುದಾಯದವರನ್ನು ತಪ್ಪಿತಸ್ತರಂತೆ ಕಾಣವುದುದು ದುರುದ್ದೇಶಪೂರ್ವಕವಾದ ನಡವಳಿಕೆ. ಈ ಸಂಬಂಧ ಶಾಸಕರಾದ ರೇಣುಕಾಚಾರ್ಯ ಮತ್ತು ಯತ್ನಾಳ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ನಿಜಾಮುದ್ದೀನ್‍ಗೆ ಹೋಗಿ ಬಂದವರನ್ನು ಗುಂಡಿಟ್ಟು ಕೊಲ್ಲಿ ಎಂದಿದ್ದಾರೆ. ಈ ಇಬ್ಬರ ಮೇಲೂ ಕ್ರಿಮಿನಲ್ ಕೇಸು ದಾಖಲಿಸಬೇಕು. ಬಂಧಿಸಬೇಕು.
ರೇಣುಕಾಚಾರ್ಯ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಬೇಕು. ಅವರು ಏನೇ ಹೇಳಿಕೆ ಕೊಟ್ಟರೂ ಸಿಎಂ ಕೊಟ್ಟಂತೆ ಆಗುತ್ತದೆ. ಹೀಗಾಗಿ ಅವರು ಆ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ.ಶಾಸಕರಾದವರು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಗುಂಡಿಟ್ಟು ಕೊಲ್ಲಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ. ಗುಂಡಿಟ್ಟು ಕೊಲ್ಲಲು ಯಾವ ಕಾನೂನಿನಲ್ಲಿ ಅವಕಾಶವಿದೆ. ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಾನು ಖಂಡಿಸುತ್ತೇನೆ.
ಸರ್ಕಾರಿ ನೌಕರರ ವೇತನ ಕಡಿತ ಬೇಡ
ಸಕಾರಿ ನೌಕರರ ವೇತನ ನಿಲ್ಲಿಸುವ ಅಥವಾ ಕಡಿತ ಮಾಡುವ ನಿರ್ಧಾರ ಸರಿಯಲ್ಲ. ಈಗಾಗಲೇ ಅವರು ಒಂದು ದಿನದ ವೇತನವನ್ನು ದೇಣಿಯಾಗಿ ನೀಡಿದ್ದಾಗೆ. ಅದು ಸಾಕು ಎಂಬುದು ನನ್ನ ಭಾವನೆ. ಬೇಕಾದರೆ ಸಂಸದರು, ಶಾಸಕರ ವೇತನವನ್ನು ಇನ್ನಷ್ಟು ವೇತನ ಕಡಿತ ಮಾಡಲಿ. ಅದಕ್ಕೆ ನಮ್ಮ ವಿರೋಧ ಇಲ್ಲ.
ಲಾಕ್‍ಡೌನ್ ಮುಂದುವರಿದರೆ ಸಹಕಾರ
ಒಂದು ವೇಳೆ ಲಾಕ್‍ಡೌನ್ ಮುಂದುವರಿಸುವ ಅನಿವಾರ್ಹ ಪರಿಸ್ಥಿತಿ ಎದುರಾದರೆ ರಾಜ್ಯದ ಜನತೆ ಅದಕ್ಕೆ ಸಹಕಾರ ನೀಡಬೇಕು. ನಾವೂ ಸಹಕಾರ ನೀಡುತ್ತೇವೆ. ಅಗತ್ಯ ವಸ್ತುಗಳನ್ನು ಖರೀದಿ ಮಾಡುವುದು ಹಾಗೂ ಮಾರಾಟ ಮಾಡುವುದನ್ನು ಹೊರತುಪಡಿಸಿ ಲಾಕ್ ಡೌನ್ ಬಿಗಿ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ