ರೈತರಿಂದ ಹೆದ್ದಾರಿ ತಡೆ: 80ಕ್ಕೂ ಹೆಚ್ಚು ರೈತರ ಬಂಧನ, ಬಿಡುಗಡೆ
ದಾವಣಗೆರೆ:
ರೈತರಿಗೆ ಮಾರಕವಾಗಿರುವ ಭೂಸ್ವಾಧೀನ ಕಾಯ್ದೆಯನ್ನು ತಕ್ಷಣವೇ ಹಿಂಪಡೆಯಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ-4ನ್ನು ತಡೆದು ಪ್ರತಿಭಟಿಸುತ್ತಿದ್ದ ಸುಮಾರು 80ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿ, ಕೆಲ ಹೊತ್ತು ವಶದಲ್ಲಿಟ್ಟುಕೊಂಡು ಬಿಡುಗಡೆಗೊಳಿಸಿದರು.
ತಾಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಕಾರ್ಯಾಧ್ಯಕ್ಷ ಹಾಳೂರು ನಾಗರಾಜ, ಪ್ರಧಾನ ಕಾರ್ಯದರ್ಶಿ ಆವರಗೆರೆ ಗೋಶಾಲೆ ಬಸವರಾಜ, ಹುಚ್ಚವ್ವನಹಳ್ಳಿ ಗಣೇಶ್ ಮತ್ತಿತರರ ನೇತೃತ್ವದಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ರೈತರು ಹೆದ್ದಾರಿ ತಡೆ ನಡೆಸಿದರು. ಆದ್ದರಿಂದ ಬೆಂಗಳೂರು-ದಾವಣಗೆರೆ ಕಡೆ ಸಾಗುತ್ತಿದ್ದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿ, ಸುಮಾರು ದೂರದ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ಹಿನ್ನೆಲೆಯಲ್ಲಿ ಪ್ರತಿಭಟನಾನಿರತ ಸುಮಾರು 80ಕ್ಕೂ ಹೆಚ್ಚು ರೈತರನ್ನು ಬಂಧಿಸಿ, ದಾವಣಗೆರೆಯ ಕವಾಯತು ಮೈದಾನದಲ್ಲಿ ಕೆಲಹೊತ್ತು ವಶದಲ್ಲಿಟ್ಟುಕೊಂಡು, ಪ್ರತಿಭಟನಾಕಾರರ ಮಾಹಿತಿ ಪಡೆದು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಬರಗಾಲವಿದ್ದರೂ ರೈತರ ಸಂಕಷ್ಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರ ರೈತರಿಗೆ ಮರಣ ಶಾಸನದಂತಿರುವ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ತಂದಿದೆ. ಈ ಕಾಯ್ದೆಯು ರೈತರಿಗೆ ಮಾರಕವಾಗಿದ್ದು, ತಕ್ಷಣವೇ ಈ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿದರು.
ರೈತರ ಭೂಮಿಯನ್ನು ಮೂರು ಕಾಸಿಗೆ ಕಸಿದುಕೊಳ್ಳುವ ದಂಧೆಯಾಗಿ ಭೂ ಸ್ವಾಧೀನ ಪ್ರಕ್ರಿಯೆ ನಿಲ್ಲಬೇಕು. ರೈತ ಸಂಘಟನೆಗಳು ಹಿಂದೆ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದ ಪರಿಣಾಮ ರೈತರಿಗೆ ಅನುಕೂಲವಾಗುವಂತೆ ಹಿಂದೆ ಇದ್ದ ಯುಪಿಎ ಸರ್ಕಾರವು 1.4.2014ರಂದು ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿತು. ಅದರಲ್ಲಿ ರೈತರ ಒಪ್ಪಿಗೆ ಇಲ್ಲದೇ ಯಾವುದೇ ಕಾರಣಕ್ಕೂ ಭೂ ಸ್ವಾಧೀನಪಡಿಸಿಕೊಳ್ಳುವಂತಿರಲಿಲ್ಲ.
ರೈತರಿಗೆ ಕೊಡುವ ಪರಿಹಾರವು ಮಾರುಕಟ್ಟೆ ದರದ 4 ಪಟ್ಟು ಹೆಚ್ಚಾಗಿರಬೇಕು. ನಗರ ಪ್ರದೇಶಕ್ಕೆ ಒಳಪಟ್ಟಿದ್ದರೆ ಅದರ ದರದ ದುಪ್ಪಟ್ಟು ಪರಿಹಾರ ನೀಡಬೇಕು. ಭೂ ಸ್ವಾಧೀನವು ಸಂಪೂರ್ಣವಾಗಿ ಸಾರ್ವಜನಿಕ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿರಬೇಕು. ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ 5 ವರ್ಷದಲ್ಲೇ ಉದ್ದೇಶಿತ ಯೋಜನೆಗೆ ಬಳಸಬೇಕು. ಅದು ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗದಿದ್ದರೆ ರೈತರಿಗೆ ಭೂಮಿಯನ್ನು ವಾಪಾಸ್ಸು ಮಾಡಬೇಕು.
ಪುನರ್ವಸತಿ ಪರಿಹಾರವೂ ಹಣದ ರೂಪದಲ್ಲೇ ಇರಬೇಕೆಂಬ ಅಂಶಗಳಿದ್ದವು, ಆದರೆ, ಈಗ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿ ತಂದಿರುವ ಕಾಯ್ದೆಯಲ್ಲಿ ಈ ಎಲ್ಲ ಅಂಶಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.
ಭೀಕರ ಬರದಿಂದಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರು ಸಹ ಸಿಗದಾಗಿದೆ. ರಾಸುಗಳು ಮೇವಿಲ್ಲದೇ ಬಡಕಲಾಗುತ್ತಿವೆ. ಗ್ರಾಮೀಣರು, ರೈತರ ಸ್ಥಿತಿ ಶೋಚನೀಯವಾಗಿದೆ. ಈ ಸ್ಥಿತಿಯಲ್ಲಿ ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮ, ಯೋಜನೆಗಳೂ ಯಶಸ್ವಿಯಾಗುತ್ತಿಲ್ಲ. ಸಿಎಂ, ಸಚಿವರು, ಶಾಸಕರು ತಮ್ಮ ಕ್ಷೇತ್ರದ ಜನರ ನೀರಿನ ಸಮಸ್ಯೆ ಆಲಿಸುವ ವ್ಯವದಾನ ಸಹ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬರ ಪರಿಹಾರ ಕಾರ್ಯಕ್ರಮ ಸಮರೋಪಾದಿಯಲ್ಲಿ ಅನುಷ್ಟಾನಗೊಳಿಸುವ ಕೆಲಸ ಮಾಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಗ್ರಾಮಗಳಿಗೆ ವ್ಯವಸ್ಥಿತ ಓವರ್ ಬ್ರಿಡ್ಜ್, ಯು ಟರ್ನ್, ಸರ್ವೀಸ್ ರಸ್ತೆಗಳನ್ನು ನಿರ್ಮಿಸಬೇಕು. ಸುತ್ತಮುತ್ತಲಿನ ಗ್ರಾಮಸ್ಥರಿಂದ ಟೋಲ್ ಶುಲ್ಕ ಪಡೆಯುವುದನ್ನು ತಕ್ಷಣದಿಂದಲೇ ನಿಲ್ಲಿಸಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಬರ ಪರಿಹಾರ ಕಾಮಗಾರಿ ತಕ್ಷಣದಿಂದಲೇ ಆರಂಭಿಸಬೇಕು. ಭತ್ತ ಖರೀದಿ ಕೇಂದ್ರವನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕೆಂದು ಪ್ರತಿಭಟನಾನಿರತ ರೈತರು ಆಗ್ರಹಿಸಿದರು.
ಹೆದ್ದಾರಿ ತಡೆಯಲ್ಲಿ ಸಂಘಟನೆ ಮುಖಂಡರಾದ ಚಿಕ್ಕನಹಳ್ಳಿ ಕೆ.ಮಲ್ಲೇಶಪ್ಪ, ಹೊನ್ನೂರು ರಾಜು, ಮಲ್ಲೇನಹಳ್ಳಿ ಅಜ್ಜಯ್ಯ, ಕಬ್ಬಳ ಸಂತೋಷ ನಾಯ್ಕ, ಕಣವೆಬಿಳಚಿ ಚನ್ನಬಸಪ್ಪ, ಚನ್ನಗಿರಿ ಚಂದ್ರಪ್ಪ, ಹರಿಹರದ ರುದ್ರೇಶ, ಎಚ್.ಶೇಖರಪ್ಪ, ಹೊನ್ನಾಳಿ ಶಿವಾನಂದ, ಹುಚ್ಚವ್ವನಹಳ್ಳಿ ಗಣೇಶ, ಮಲ್ಲಶೆಟ್ಟಿಹಳ್ಳಿ ಹನುಮೇಶ, ಕೊಗ್ಗನೂರು ಶಿಡ್ಲಪ್ಪ, ಕಂದಗಲ್ಲು ತಿಪ್ಪಣ್ಣ, ಕರಿಲಕ್ಕೇನಹಳ್ಳಿ ಪಿ.ಎಚ್.ಚಂದ್ರಪ್ಪ, ಚಿದಾನಂದ, ಅಭಿಷೇಕ, ಅಜ್ಜಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.