ಆದಾಯಕ್ಕಿಂತ ಹೆಚ್ಚು ಗಮನ ಮಕ್ಕಳ ಮೇಲಿರಲಿ

ದಾವಣಗೆರೆ

     ಪೋಷಕರು ಮಕ್ಕಳಿಗಿಂತ ಹೆಚ್ಚು ಆದಾಯದ ಕಡೆಗೆ ಗಮನ ಹರಿಸುವುದರಿಂದ ಮಕ್ಕಳು ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ ಇದೆ. ಹೀಗಾಗಿ ಪಾಲಕರು ಮನೆಯಲ್ಲಿ ಸ್ನೇಹಮಯ ವಾತಾವರಣ ನಿರ್ಮಿಸಬೇಕೆಂದು 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಬಾಲ ನ್ಯಾಯಮಂಡಳಿಯ ಅಧ್ಯಕ್ಷೆ ಈ.ಚಂದ್ರಕಲಾ ಕರೆ ನೀಡಿದರು.

    ನಗರದ ಬಾಲ ನ್ಯಾಯ ಮಂಡಳಿಯಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ಯಾವ ಮಕ್ಕಳಿಗೆ ಕಾನೂನಿನ ರಕ್ಷಣೆ ಮತ್ತು ಕಾಳಜಿ ಅಗತ್ಯವಿರುತ್ತದೆಯೋ ಹಾಗೂ ಯಾವ ಮಕ್ಕಳು ಕಾನೂನಿನ ಸಂಘರ್ಷಣೆಗೆ ಒಳಗಾಗಿರುತ್ತಾರೋ ಅಂತಹವರ’ ಕುರಿತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಪೋಷಕರು ಮಕ್ಕಳ ಕಡೆ ಗಮನಹರಿಸದೇ ಆದಾಯದ ಕಡೆ ಹೆಚ್ಚು ಗಮನಹರಿಸುವುದರಿಂದ ಮಕ್ಕಳ ಗಮನ ಬೇರೆಡೆ ಹರಿದು ಕೆಟ್ಟವರ ಸಹವಾಸ, ದುಶ್ಚಟದಂತಹ ಚಟುವಟಿಕೆಳಿಗೆ ಬಲಿಯಾಗಿ ಮಕ್ಕಳು ಕೊಲೆ, ಸುಲಿಗೆÉಯಂತಹ ಘೋರ ಪ್ರಕರಣಗಳಲ್ಲಿಯೂ ಭಾಗಿಯಾಗಿ ಕಾನೂನಿನ ಸಂಘರ್ಷಕ್ಕೊಳಗಾಗುತ್ತಿದ್ದಾರೆ. ಆದ್ದರಿಂದ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪೋಷಕರು ಮನೆಯಲ್ಲಿ ಸ್ನೇಹಮಯ ವಾತಾವರಣವನ್ನು ನಿರ್ಮಾಣ ಮಾಡಿ, ಉತ್ತಮ ಮಾರ್ಗದಲ್ಲಿ ಬೆಳೆಸಬೇಕು ಹಾಗೂ ಮಕ್ಕಳನ್ನು ಸಂರಕ್ಷಣೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

    ಯಾರೂ ಹುಟ್ಟಿನಿಂದ ಕೆಟ್ಟವರಾಗಿರುವುದಿಲ್ಲ. ಸಮಾಜದಲ್ಲಿ ಬೆಳೆಯುವಾಗ ಅವರು ಆಯ್ದುಕೊಳ್ಳುವ ದಾರಿಗಳಿಂದ ಒಳ್ಳೆಯವರು ಅಥವಾ ಕೆಟ್ಟವರಾಗುತ್ತಾರೆ. ಆದ್ದರಿಂದ ಪೋಷಕರು ಮಕ್ಕಳನ್ನು ಜವಾಬ್ದಾರಿಯಿಂದ ಸಮಾಜಮುಖಿಯಾಗಿ ಬೆಳೆಸಬೇಕೆಂದು ಸಲಹೆ ನೀಡಿದರು.

     ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಹಾಗೂ ವಕೀಲ ಎಲ್.ಹೆಚ್ ಅರುಣಕುಮಾರ್ ಮಾತನಾಡಿ, ಸಮಾಜದಲ್ಲಿ ಜಾತಿ, ಧರ್ಮ, ಸಂಪತ್ತು ಇವುಗಳಲ್ಲಿರುವ ಅಸಮಾನತೆಯಿಂದಾಗಿ ಮಕ್ಕಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ. 1989 ರಲ್ಲಿ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳು ಹಾಗೂ ಹಲವಾರು ಕಾನೂನುಗಳನ್ನು ಜಾರಿ ಮಾಡಲಾಗಿದ್ದು, ಪೋಷಕರು ಮಕ್ಕಳನ್ನು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು. ಕಾನೂನಿನೊಡನೆ ಸಂಘರ್ಷಕ್ಕೆ ಒಳಪಟ್ಟ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಿರಂತರವಾಗಿ ಕಾನೂನು ಅರಿವು ಹಾಗೂ ನೆರವು ನೀಡಲಾಗುತ್ತಿದೆ ಎಂದರು.

     ವಕೀಲೆ ಅನಿತ ಸಿ.ಪಿ ಮಾತನಾಡಿ, ಮಕ್ಕಳು ಸಂಸ್ಕಾರದ ಕೊರತೆಯಿಂದಾಗಿ ದಾರಿ ತಪ್ಪುತ್ತಾರೆ. ಮಕ್ಕಳು ಅವಿಭಕ್ತ ಕುಟುಂಬಗಳಲ್ಲಿ ಬೆಳೆಯುತ್ತಿದ್ದಾಗ ಎಲ್ಲಾ ಬಗೆಯ ಸಂಸ್ಕಾರವನ್ನು ಕುಟುಂಬದ ಸದಸ್ಯರಿಂದ ಕಲಿಯುತ್ತಿದ್ದರು. ಆದರೆ, ಇಂದಿನ ವಿಭಕ್ತ ಕುಟುಂಬಗಳಲ್ಲಿ ತಂದೆ-ತಾಯಿಗಳು ಹಣದ ಹಿಂದೆ ಓಡುತ್ತಿರುವುದರಿಂದ ಮಕ್ಕಳು ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ. ಪೋಷಕರು ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

    ಬಾಲ ನ್ಯಾಯ ಮಂಡಳಿಯ ಹಿರಿಯ ಸಹಾಯಕ ಅಭಿಯೋಜಕ ಮುರುಗೇಶ್ ಅಂಕದ್ ಮಾತನಾಡಿ, ಬಾಲ ನ್ಯಾಯ ಮಂಡಳಿಯು ಮಕ್ಕಳು ತಪ್ಪು ಮಾಡಿದಾಗ ಅವರನ್ನು ಶಿಕ್ಷಿಸುತ್ತದೆ ಎಂಬುದು ಎಲ್ಲ ಪೋಷಕರ ಭಾವನೆಯಾಗಿದೆ. ಆದರೆ, ಬಾಲನ್ಯಾಯ ಮಂಡಳಿಯು ಮಕ್ಕಳ ತಪ್ಪುಗಳನ್ನು ತಿದ್ದಿ ಅವರನ್ನು ಹೊಸ ಮನುಷ್ಯರನ್ನಾಗಿ ಪರಿವರ್ತಿಸುತ್ತದೆ. ಪೋಷಕರು ಮಕ್ಕಳನ್ನು ಜವಾಬ್ದಾರಿಯಿಂದ ಯಾವುದೇ ತಪ್ಪುಗಳಲ್ಲಿ ಭಾಗಿಯಾಗದಂತೆ ನೋಡಿಕೊಂಡರೆ ಬಾಲ ನ್ಯಾಯಮಂಡಳಿಗೆ ಬರುವ ಅವಶ್ಯಕತೆ ಇರುವುದಿಲ್ಲ ಎಂದರು.

   ಹಿರಿಯ ಪ್ಯಾನಲ್ ವಕೀಲ ಎನ್.ಎಂ.ಆಂಜನೇಯ ಮಾತನಾಡಿ, ಕಾನೂನಿನೊಡನೆ ಸಂಘರ್ಷಕ್ಕೆ ಒಳಪಟ್ಟ ಮಕ್ಕಳು ಜೀವನದಲ್ಲಿ ಪರಿವರ್ತನೆಯಾಗಬೇಕು. ತಂದೆ ತಾಯಿಗಳಿಗೆ ಗೌರವ ತರಬೇಕು. ಈ ಮಕ್ಕಳು ಜಿಲ್ಲೆಗೆ ಮಾದರಿಯಾಗಿ, ಇತರೆ ಮಕ್ಕಳು ಕೂಡ ಯಾವುದೇ ರೀತಿಯ ಅಪರಾಧಗಳಲ್ಲಿ ಭಾಗಿಯಾಗದಂತೆ ಎಲ್ಲರಲ್ಲಿ ಜಾಗೃತಿ ಮೂಡಿಸುವ ಅಶವ್ಯಕತೆ ಇದೆ ಎಂದರು.

   ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ ಮಂಜುನಾಥ್ ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣದಿಂದ ಪರಿವರ್ತನೆಯಾಗಬೇಕು. ಪೋಷಕರು ಮಕ್ಕಳಿಗೆ ಸಂಸ್ಕಾರ ನೀಡಬೇಕು. ಇಲ್ಲದಿದ್ದರೆ ಸಮಾಜಕ್ಕೆ ಮಾರಕವಾಗುತ್ತಾರೆ. ಪಾಲಕರು ಮಕ್ಕಳಿಗೆ ಆಸೆಗಳನ್ನು ಹಚ್ಚದೇ ತಮ್ಮ ಇತಿಮಿತಿಗಳನ್ನು ತಿಳಿಸಿ ಬೆಳೆಸಬೇಕು. ಮಕ್ಕಳನ್ನು ಬೆಳೆಸುವಲ್ಲಿ ಪೋಷಕರು ನಿರ್ಲಕ್ಷ್ಯ ತೋರಿದರೆ ಮಕ್ಕಳ ತಪ್ಪುಗಳಿಗೆ ಅವರೇ ಹೊಣೆಯಾಗುತ್ತಾರೆ ಎಂದು ಸೂಚ್ಯವಾಗಿ ಎಚ್ಚರಿಸಿದರು.

     ಕಾರ್ಯಕ್ರಮದಲ್ಲಿ ನ್ಯಾಯಮಂಡಳಿಯ ಸದಸ್ಯರುಗಳಾದ ಶಶಿಧರ್, ವಿಜಯಮಾಲ ಸೇರಿದಂತೆ ಪ್ಯಾನಲ್ ವಕೀಲರುಗಳು, ಕಾನೂನಿನೊಡನೆ ಸಂಘರ್ಷಕ್ಕೆ ಒಳಪಟ್ಟ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap