ಆರೋಗ್ಯದ ಬಗ್ಗೆ ಅರಿವು ಅವಶ್ಯ;ಡಾ.ಪಾಲಾಕ್ಷ

ಚಿತ್ರದುರ್ಗ:

       ಪ್ರತಿಯೊಂದು ಹಂತದಲ್ಲಿಯೂ ಆರೋಗ್ಯದ ಬಗ್ಗೆ ಅರಿವು ಮೂಡಿಸಿಕೊಂಡು ಅಂಗಹೀನತೆಯನ್ನು ಗುರುತಿಸಿ ಸಕಾಲಕ್ಕೆ ಚಿಕಿತ್ಸೆ ಕೊಡಿಸಿದಾಗ ಮಾತ್ರ ಮಾರಕ ರೋಗಗಳನ್ನು ತಡೆಗಟ್ಟಿ ಅಂಗವಿಕಲತೆಯನ್ನು ತಪ್ಪಿಸಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪಾಲಕ್ಷ ತಿಳಿಸಿದರು.

       ಸಂಯುಕ್ತ ಪ್ರಾದೇಶಿಕ ಕೇಂದ್ರ ದಾವಣಗೆರೆ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಶುಕ್ರವಾರ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತ ಅಂಗವಿಲತೆಯನ್ನು ಗುರುತಿಸಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಅಗತ್ಯ ಸೌಲಭ್ಯಗಳನ್ನು ತಲುಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.

      ಮೂಗತನ, ಕಿವುಡು, ಕುರುಡು ಇವುಗಳೆಲ್ಲಾ ಒಂದು ಬಗೆಯ ಅಂಗವಿಕಲತೆ. ಹಾಗಾಗಿ ಪ್ರತಿಯೊಬ್ಬರಿಗೂ ಆಹಾರ, ಆರೋಗ್ಯ, ಆಶ್ರಯ, ಅರಿವು, ಅರಿವೆ ಅತಿ ಮುಖ್ಯವಾಗಿ ಬೇಕು. ಕೆಲವೊಮ್ಮೆ ದೇಹದಲ್ಲಿ ಸತ್ವಗಳ ಕೊರತೆಯಿಂದ ಅಂಗವಿಕಲರಾಗಬಹುದು. ಜೀವನದಲ್ಲಿ ಎಲ್ಲಾ ಅಂಗಗಳೂ ಸರಿಯಾಗಿದ್ದವರು ಒಮ್ಮೊಮ್ಮೆ ಕಷ್ಟ ಅನುಭವಿಸಬೇಕಾಗುತ್ತದೆ. ಪೋಲಿಯೋದಿಂದ ಬಹಳ ಮಕ್ಕಳು ಅಂಗ ಊನರಾಗುತ್ತಾರೆ.

     ಅದಕ್ಕಾಗಿ ಗರ್ಭಿಣಿ ಮಹಿಳೆಗೆ ಇಂಜೆಕ್ಷನ್‍ಗಳನ್ನು ನೀಡಲಾಗುತ್ತದೆ. ಜೊತೆಗೆ ಮಗು ಜನಿಸಿದ ಕೂಡಲೆ ಏನಾದರೂ ಅಂಗವಿಕಲತೆ ಇದೆಯೇ ಎನ್ನುವುದನ್ನು ಗುರುತಿಸಿ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಕೆಲಸವನ್ನು ಮಾಡಬೇಕು ಎಂದು ಆಶಾ ಕಾರ್ಯಕರ್ತೆಯರಿಗೆ ಕರೆ ನೀಡಿದರು.

      ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೈಶಾಲಿ ಮಾತನಾಡುತ್ತ ಅಂಗವಿಕಲತೆಯನ್ನು ಹೇಗೆ ಗುರುತಿಸಬೇಕು ಎನ್ನುವುದರ ಬಗ್ಗೆ ಈಗಾಗಲೆ ಆಶಾ ಕಾರ್ಯಕರ್ತೆಯರಿಗೆ ಸಾಕಷ್ಟು ತರಬೇತಿಗಳನ್ನು ನೀಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಯಡಿ ಕೆಲಸ ಮಾಡುತ್ತಿರುವ ಸಂಯುಕ್ತ ಪ್ರಾದೇಶಿಕ ಕೇಂದ್ರ ದಾವಣಗೆರೆ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಅಂಗವಿಕಲತೆಯನ್ನು ತಡೆಗಟ್ಟುವ ಕುರಿತು ಒಂದು ದಿನದ ತರಬೇತಿಯನ್ನು ನೀಡಲಾಗುತ್ತಿದೆ.

       ಹುಟ್ಟುವ ಮಗು ಆರೋಗ್ಯಪೂರ್ಣವಾಗಿದ್ದು, ಅಂಗವಿಕಲತೆಯಿಂದ ದೂರವಿರಬೇಕು ಎನ್ನುವ ಉದ್ದೇಶದಿಂದ ಗರ್ಭಿಣಿ ಮಹಿಳೆಯರಿಗೆ ಚುಚ್ಚು ಮದ್ದು ನೀಡಲಾಗುವುದು. ಮಗು ಹುಟ್ಟಿದ ಕೂಡಲೆ ಏನಾದರೂ ಅಂಗ ನೂನ್ಯತೆ ಕಂಡು ಬಂದಲ್ಲಿ ಎಲ್ಲಿ ಹೋಗಿ ಚಿಕಿತ್ಸೆ ಪಡೆಯಬೇಕು ಎನ್ನುವುದು ಗ್ರಾಮೀಣ ಭಾಗದವರಿಗೆ ಈಗಲೂ ಗೊತ್ತಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಆಶಾ ಕಾರ್ಯಕರ್ತೆಯರು ನೂನ್ಯತೆಯುಳ್ಳ ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಸರ್ಕಾರದಿಂದ ದೊರಕುವ ಸವಲತ್ತುಗಳನ್ನು ಕೊಡಿಸುವಂತೆ ತಿಳಿಸಿದರು.
ಡಾ.ಜಯಮ್ಮ ಮಾತನಾಡಿ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ತಳಹದಿ ಭದ್ರವಾಗಿರಬೇಕು.

        ಅದಕ್ಕಾಗಿ ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶಗಳ ಗರ್ಭಿಣಿಯರು ಹಾಗೂ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ನಿಗಾವಹಿಸಬೇಕು. ಅಂಗ ಊನತೆ ಬಗ್ಗೆ ನಿಮ್ಮಲ್ಲಿ ಏನಾದರೂ ಅನುಮಾನಗಳಿದ್ದರೆ ತರಬೇತಿಯಲ್ಲಿ ಕೇಳಿ ತಿಳಿದುಕೊಳ್ಳಿ. ಜನಿಸುವ ಮಗು ಸದೃಢವಾಗಿರಬೇಕಾದರೆ ಗರ್ಭಿಣಿಯ ಆರೋಗ್ಯ ಕಡೆಗೂ ಆಶಾ ಕಾರ್ಯಕರ್ತರು ಗಮನ ಕೊಡಬೇಕು ಎಂದರು.ಸಂಯುಕ್ತ ಪ್ರಾದೇಶಿಕ ಕೇಂದ್ರದ ಅಧಿಕಾರಿ ವಿ.ಕನಗಸಭಾಪತಿ, ಜ್ಯೋತಿ, ರಶ್ಮಿ ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap