ದಾವಣಗೆರೆ:
ಸ್ಮಾರ್ಟ್‍ಸಿಟಿ ಕಾಮಗಾರಿ ವಿಳಂಬ ಆಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇನ್ನೂ ಮುಂದೆ ಹಾಗಾಗದಂತೆ ಎಚ್ಚರ ವಹಿಸಬೇಕೆಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಗರದ ವಿವಿಧ ಭಾಗಗಳಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 2 ವರ್ಷಗಳ ಹಿಂದೆ ಮಂಡಿಪೇಟೆ ಮತ್ತು ಚೌಕಿಪೇಟೆ ರಸ್ತೆಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದರೂ ಸಹ ಇನ್ನೂ ಮುಕ್ತಾಯವಾಗದೇ ಆ ಭಾಗದ ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.
ಈ ಬಗ್ಗೆ ಅನೇಕ ಬಾರಿ ಸೂಚನೆ ನೀಡಿದರೂ ಸಹ ನಿರ್ಲಕ್ಷ್ಯ ವಹಿಸಲಾಗಿದೆ. ಇನ್ನು ಮುಂದೆ ಆ ರೀತಿ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಸ್ಮಾರ್ಟ್‍ಸಿಟಿ ಯೋಜನೆಯಡಿ 5.69 ಕೋಟಿ ರೂ.ಗಳ ವೆಚ್ಚದಲ್ಲಿ ಬಿನ್ನಿ ಕಂಪನಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ, 2.19 ಕೋಟಿ ರೂ.ಗಳ ವೆಚ್ಚದಲ್ಲಿ ದುಗ್ಗಮ್ಮ ಪೇಟೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಎಸ್.ಪಿ.ಎಸ್.ನಗರ ಸರ್ಕಾರಿ ಪ್ರೌಢಶಾಲೆ, ಎಸ್.ಪಿ.ಎಸ್.ನಗರ ಸರ್ಕಾರಿ ಪ್ರಾಥಮಿಕ ಪಾಠಶಾಲೆ, ಬಿ.ಡಿ.ಲೇಔಟ್ ಸರ್ಕಾರಿ ಉರ್ದು ಶಾಲೆ, ಚೌಕಿಪೇಟೆಯ ಜಿ.ಜಿ.ಎಂ.ಎಸ್. ಸರ್ಕಾರಿ ಶಾಲೆ ಇವಗುಳ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ 3.20 ಕೋಟಿ ರೂ.ಗಳ ವೆಚ್ಚದಲ್ಲಿ ಜಗಳೂರು ಬಸ್ ನಿಲ್ದಾಣ ಪುನರಾಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಮುಕ್ತಾಯಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿ ಅಧಿಕಾರಿಗಳು ಸಹ ಗುಣಮಟ್ಟದ ಕೆಲಸವನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದರು.
ರಾಜ್ಯದಲ್ಲಿ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಆಶಯದಂತೆ ಆಶ್ರಯ ಮನೆ ಮತ್ತು 24 ಗಂಟೆ ನೀರು ಸರಬರಾಜಿಗೆ ಬದ್ಧರಾಗಿದ್ದು, ಇವುಗಳನ್ನು ಸಾರ್ವಜನಿಕರಿಗೆ ತಲುಪಿಸಲು ಇನ್ನಷ್ಟು ದಿನ ಬೇಕಾಗಲಿವೆ ಎಂದು ತಿಳಿಸಿದರು.ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಸ್ಮಾರ್ಟ್‍ಸಿಟಿ ಯೋಜನೆಯ ಕಾಮಗಾರಿಗಳು ನಿಧನಾಗತಿಯಲ್ಲಿ ನಡೆಯುತ್ತಿರುವುದಕ್ಕೆ ಬೇಸತ್ತಿದ್ದು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಪಾಲಿಕೆ ಮಾಜಿ ಸದಸ್ಯರುಗಳಾದ ದಿನೇಶ್ ಕೆ.ಶೆಟ್ಟಿ, ಮಂಜಮ್ಮ ಹನುಮಂತಪ್ಪ, ಕೆ.ಚಮನ್‍ಸಾಬ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಬಿಜೆಪಿ ಮುಖಂಡರಾದ ಪಿ.ಸಿ.ಶ್ರೀನಿವಾಸ್ ಭಟ್, ರಾಜನಹಳ್ಳಿ ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಎಸ್.ಮಲ್ಲಿಕಾರ್ಜುನ್, ಉಮೇಶ್, ರಾಜಶೇಖರ್ ಬೆಂಡಿಗೇರಿ, ಸ್ಮಾರ್ಟ್‍ಸಿಟಿ ಯೋಜನೆಯ ಅಧೀಕ್ಷಕ ಅಭಿಯಂತರ ಸತೀಷ್, ಕಾರ್ಯಪಾಲಕ ಅಭಿಯಂತರ ಎಸ್.ರಮೇಶ್, ಗುರುಪಾದಯ್ಯ, ನಿರ್ದೇಶಕ ಎಂ.ನಾರಗರಾಜ್ ಮತ್ತಿತರರು ಹಾಜರಿದ್ದರು..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
