ಚಿತ್ರದುರ್ಗ:
ಕೊರೋನಾ ವೈರಸ್ ಸೋಂಕು ತಡೆಗಟ್ಟುವ ಸಲುವಾಗಿ ಈಗಾಗಲೆ ಸರ್ಕಾರ ಹಲವು ಬಗೆಯ ಮುಂಜಾಗ್ರತಾ ಕ್ರಮಗಳನ್ನು ಘೋಷಿಸಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ದೇವಸ್ಥಾನ, ಮಂದಿರ, ಮಸೀದಿಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸಬೇಕು. ಜಾತ್ರೆ, ಕಲ್ಯಾಣ ಮಂಟಪ, ಹೋಟೆಲ್, ಪ್ರವಾಸಿಗರು ಸೇರುವ ಯಾತ್ರಾಸ್ಥಳಗಳಲ್ಲಿ ನಿಗವಾಣೆ ತಂಡಗಳನ್ನು ಹಾಕಿ ಪರಿಸ್ಥಿತಿ ಪರಾಮರ್ಶೆ ನಡೆಸಬೇಕು. ಸರ್ಕಾರದ ಆದೇಶ ಪಾಲಿಸಲಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ, ನಿಯಮ ಪಾಲನೆ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊರೋನ ವೈರಸ್ ಮುಂಜಾಗ್ರತೆ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳೊಂದಿಗೆ ನಡೆಸಿದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಪ್ರಮುಖ ನಗರಗಳ ಬಸ್‍ಸ್ಟ್ಯಾಂಡ್, ರೈಲ್ವೆ ಸ್ಟೇಷನ್, ಸಿನಿಮಾ ಮಂದಿರ, ದೇವಸ್ಥಾನ, ಮಂದಿರ, ಮಸೀದಿಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸಬೇಕು. ಜಾತ್ರೆ, ಕಲ್ಯಾಣ ಮಂಟಪ, ಹೋಟೆಲ್, ಪ್ರವಾಸಿಗರು ಸೇರುವ ಯಾತ್ರಾಸ್ಥಳಗಳಿಗೆ ನಿಗವಾಣೆ ತಂಡಗಳನ್ನು ಕಳುಹಿಸಿ ನಿಯಮಗಳ ಪಾಲನೆ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಸರ್ಕಾರದ ಸೂಚನೆಗಳನ್ನು ಪಾಲಿಸದವರ ವಿರುದ್ಧ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಬೇಕು ಎಂದರು
ಪಕ್ಕದ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಗ್ರಾಮಗಳಲ್ಲಿ ಬಸ್ಸುಗಳು ಮೂಲಕ ಸಂಚಾರ ಮಾಡುವ ಅನ್ಯ ರಾಜ್ಯದ ನಾಗರಿಕರ ಬಗ್ಗೆ ಗಮನ ಹರಿಸಿ, ವಿದೇಶಗಳಿಂದ ಬರುವ ಹೋಗುವ, ಸಂಪರ್ಕ ಹೊಂದಿರುವವರ ಮಾಹಿತಿಯನ್ನು ಆಶಾ ಕಾರ್ಯಕರ್ತೆಯ ಮೂಲಕ ಮಾಹಿತಿ ಪಡೆದುಕೊಂಡು ಈಗಾಗಲೆ ನೀಡಿರುವ ನಿರ್ದೇಶನದಂತೆ ಕ್ರಮ ವಹಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಅವರು ಮಾತನಾಡಿ, ಪ್ರತಿ ತಾಲ್ಲೂಕಿಗೊಂದರಂತೆ ಈಗಾಗಲೆ ರ್ಯಾಪಿಡ್ ರೆಸ್ಕ್ಯೂ ಟೀಮ್ ರಚಿಸಲಾಗಿದೆ ಎಂದು ತಿಳಿಸಿದರಲ್ಲದೆ, ಇದುವರೆಗೂ ಜಿಲ್ಲೆಯಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಸಭೆಯಲ್ಲಿ ವಿವರಣೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಎಲ್ಲಾ ತಾಲ್ಲೂಕು ರೋಗ್ಯ ಅಧಿಕಾರಿಗಳು ತಮ್ಮ ತಮ್ಮ ತಾಲ್ಲೂಕಿನಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರತಿನಿತ್ಯ ಡಿ.ಹೆಚ್.ಒ. ಮೂಲಕ ಕೊರೋನ ವೈರಸ್ ನಿಯಂತ್ರಣ ಕುರಿತ ದೈನಂದಿನ ವರದಿಯನ್ನು ಸಲ್ಲಿಸಲು ಸೂಚಿಸಿದರು.
ಉಪ ವಿಭಾಗಾಧಿಕಾರಿ ಪ್ರಸನ್ನ ಅವರು ಮಾತನಾಡಿ, ಹೊರರಾಜ್ಯ ಗಳಿಂದಲೂ ಕೂಲಿ ಕಾರ್ಮಿಕರು ಜಿಲ್ಲೆಗೆ ಆಗಮಿಸುವುದು ಜಿಲ್ಲೆಯಲ್ಲಿ ಸಾಮಾನ್ಯ ಸಂಗತಿಯಾಗಿದೆ. ಹೀಗಾಗಿ ಇವರ ಬಗ್ಗೆಯೂ ಗಮನ ಹರಿಸುವುದು ಅಗತ್ಯವಾಗಿದೆ ಎಂದರು.ಸಭೆಯಲ್ಲಿ ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪಾಲಾಕ್ಷಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ತುಳಸಿರಂಗನಾಥ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸವರಾಜ್, ಸೇರಿದಂತೆ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು, ಜಿಲ್ಲಾ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳು ಜಿಲ್ಲಾ ಮೇಲ್ವಿಚಾರಕರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ