ಅಕ್ರಮ ಮದ್ಯಮಾರಾಟ ಮತ್ತು ರಸ್ತೆ ಅಪಘಾತ ತಡೆಗೆ ಕ್ರಮಕ್ಕೆ ಆಗ್ರಹ..!

ಕುಣಿಗಲ್

      ತಾಲ್ಲೂಕಿನಾದ್ಯಂತ ಹೆಚ್ಚುತ್ತಿರುವ ಅಕ್ರಮ ಮದ್ಯಮಾರಾಟ, ಅಸಮರ್ಪಕ ಹೆದ್ದಾರಿಗಳ ನಿರ್ಮಾಣದಿಂದ ಹೆಚ್ಚುತ್ತಿರುವ ಸಾವು-ನೋವುಗಳು ಹಾಗೂ ಟ್ರಾಫಿಕ್ ಕಿರಿಕಿರಿ ಮತ್ತು ಆಟೋಚಾಲಕರ ಸಮಸ್ಯೆಗಳ ಸರಮಾಲೆಯಿಂದ ಮುಕ್ತಿಗೊಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ನಾಗರಿಕರು ಪರಿಪರಿಯಾಗಿ ಮನವಿ ಮಾಡಿಕೊಂಡ ಪ್ರಸಂಗ ನಡೆಯಿತು.

       ಪಟ್ಟಣದ ದಿವ್ಯಾ ಚೌಟರಿಯಲ್ಲಿ ತಾಲ್ಲೂಕು ಪೊಲೀಸರು ಪ್ರಥಮ ಬಾರಿಗೆ ಏರ್ಪಡಿಸಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನ ವಂಶಿಕೃಷ್ಣ ಅವರನ್ನ ಪಟ್ಟಣದ ಆಟೋಚಾಲಕರು ಸೇರಿದಂತೆ ಅಮೃತೂರು ಭಾಗದ ಕೆಲವು ನಾಗರಿಕರು, ಹುಲಿಯೂರುದುರ್ಗ ಹುತ್ರಿದುರ್ಗ, ಕೊತ್ತಗೆರೆ ಕಡೆಯಿಂದ ಆಗಮಿಸಿದ್ದ ನಾಗರಿಕರು ತಾಲ್ಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟವಾಗುತ್ತಿರುವ ಮೂಲಕ ಬಡಜನರ ಜೀವನದ ಜೊತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ.

     ಇದನ್ನು ದಯಮಾಡಿ ತಪ್ಪಿಸಿ ಸ್ವಾಮಿ ಕೂಲಿ ಮಾಡಿ ಜೀವಿಸುವ ಜನ ಬದುಕುತ್ತಾರೆ. ಇಂದು ಪ್ರತಿ ಹಳ್ಳಿಯ ಟೀ ಕಾಫಿ ಅಂಗಡಿಗಳು ಚಿಲ್ಲರೆ ಅಂಗಡಿಗಳು ನಡೆಯುತ್ತಿರುವುದೆ ಈ ಅಕ್ರಮ ಮದ್ಯ ಮಾರಾಟದಿಂದ ಎಂದು ಆರೋಪಿಸಿದ ನಾಗರಿಕರು, ಪೊಲೀಸರು ನಿಸ್ಸಹಾಯಕರಾಗಿದ್ದಾರೆ. ಸಂಬಂಧಪಟ್ಟ ಅಬಕಾರಿ ಇಲಾಖೆಯೇ ಅಕ್ರಮ ಮದ್ಯ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತಿದೆ. ಕೂಡಲೇ ಇದನ್ನು ಸಂಪೂರ್ಣ ನಿಲ್ಲಿಸಬೇಕೆಂದು ವಿವಿಧ ಗ್ರಾಮಗಳಿಂದ ಬಂದಿದ್ದ ಗ್ರಾಮಸ್ಥರು ಸೇರಿದಂತೆ ಜಿಲ್ಲಾ ದಲಿತ ಸಂಘಟನೆಯ ಅಧ್ಯಕ್ಷ ಈರಣ್ಣ ತಾಲ್ಲೂಕು ದಲಿತ ಮುಖಂಡರುಗಳಾದ ಶಿವಶಂಕರ್, ರಾಮಚಂದ್ರಯ್ಯ ಗಂಗರಾಜು ಒತ್ತಾಯಿಸಿದರು. ನಿಡಸಾಲೆ ಶಂಕರ ಎಂಬಾತ ದೂರಿ ಕುಡುಕರಿಂದ ಅವಾಚ್ಯಶಬ್ದ ಕೇಳಲಾಗುತ್ತಿಲ್ಲ, ಅವರ ಹೆಂಗಸರು ಮಕ್ಕಳು ಬೀದಿಪಾಲಾದರೆ ಯಾರು ಹೊಣೆ ಎಣ್ಣೆ ಮಾರಾಟ ತಪ್ಪಿಸಿ ಎಂದರು.

      ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಪ್ಪಿಸುವಂತೆ ಅಮೃತೂರು ಹೋಬಳಿಯ ಕಂಪ್ಲಾಪುರ ಗ್ರಾಮದವರು ಆ ಭಾಗದಲ್ಲಿ ಆದು ಹೋಗಿರುವ ಹೆದ್ದಾರಿ ರಸ್ತೆಯ ಇಕ್ಕೆಲಗಳಲ್ಲಿ ಅಂಗನವಾಡಿ ಹಾಗೂ ಸರ್ಕಾರಿ ಹಿರಿ ಪ್ರಾಥಮಿಕ ಶಾಲೆಗಳಿದ್ದು ರಸ್ತೆ ದಾಟುವ ವೇಳೆ ಮಕ್ಕಳಿಗೆ ಅಪಘಾತವಾಗಿ ಸಾವು ನೋವು ಉಂಟಾಗುತ್ತಿವೆ ಅಲ್ಲಿ ಮೇಲು ಸೇತುವೆ ಅಥವಾ ಪರಿಯಾಯ ವ್ಯವಸ್ಥೆ ನಿರ್ಮಿಸಲು ಮನವಿ ಮಾಡಿದರು.
ಪಟ್ಟಣದ ತುಮಕೂರು ರಸ್ತೆಯಲ್ಲಿ ಆಟೋ ನಿಲ್ಲಿಸಲು ಅಂಗಡಿಯವರು ಆಟೋ ಚಾಲಕರಿಗೆ ಧಮಖಿ ಹಾಕುತ್ತಿದ್ದಾರೆ. ನಾವು ಎಲ್ಲಿ ನಿಲ್ಲಿಸಲಿ? ಹೇಗೆ ಜೀವನ ಮಾಡಲಿ ಎಂದು ಗದ್ಗದಿತರಾದ ಆಟೋ ಚಾಲಕರಾದ ಮೂರ್ತಿ , ಅಶ್ವಥ್ ಹೀಗೆ ಹಲವರು ವಿವಿಧ ಸಮಸ್ಯೆಗಳನ್ನ ತೋಡಿಕೊಂಡರು.

ಪೊಲೀಸರಿಗೆ ಎಚ್ಚರಿಕೆ ನೀಡಿದ ಎಸ್.ಪಿ. :-

     ನಂತರ ಸಾರ್ವಜನಿಕರನ್ನು ಕುರಿತು ಮಾತನಾಡಿದ ಎಸ್.ಪಿ. ವಂಶಿಕೃಷ್ಣ ಅವರು ಆಯಾಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿತ್ಯ ಬೀಟ್ ವ್ಯವಸ್ಥೆ ಇದ್ದು ಕೆಲವೇ ಹಳ್ಳಿಗಳಿಗೆ ಒಬ್ಬರಂತೆ ಪೊಲೀಸರನ್ನು ನೇಮಕ ಮಾಡಲಾಗಿದೆ. ಬೀಟ್ ಮಾಡುವಾಗ ಆ ಭಾಗದ ಮೂಲ ಸಮಸ್ಯೆಗಳೇನು? ಪರಿಸ್ಥಿತಿ ಹೇಗಿದೆ ಎಂಬವು ಎಲ್ಲಾ ವಿಚಾರಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದು ಅವರ ಕರ್ತವ್ಯವಾಗಿದೆ.

     ಇದನ್ನು ಪರಿಪಾಲಿಸದೆ ಹೋದರೆ ಅಂತಹವರ ಮೇಲೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಅವರು, ದೂರು ಬಂದಾಗ ಸ್ಥಳಕ್ಕೆ ಹೋಗುವ ಪೊಲೀಸ್ ಅಧಿಕಾರಿಯಾಗಲಿ, ಪೊಲೀಸರಾಗಲಿ ಸಮಸ್ಯೆಯನ್ನ ಸಂಪೂರ್ಣವಾಗಿ ಅರಿತು ಬಗೆಹರಿಸುವ ಕೆಲಸ ಮಾಡಿ ಬರೀ ಸಬೂಬೂ ಹೇಳಿದರೆ ಪ್ರಯೋಜನವಿಲ್ಲಾ ಎಂದು ಎಚ್ಚರಿಕೆ ನೀಡಿದರು.

ಅಪಘಾತ ತಡೆಗೆ ವೇಗ ಮಿತಿಗೊಳಿಸಿ :

        ಅತಿ ವೇಗವಾಗಿ ಚಲಿಸುವುದೆ ಅಪಘಾತಕ್ಕೆ ಮೂಲ ಕಾರಣವಾಗಿದೆ. ಇನ್ನೂ ಬೈಕ್ ಸವಾರರು ಹೆಲ್ಮೆಟ್ ಧರಿಸಿದರೆ ಜೀವ ಉಳಿಯುತ್ತದೆ ಎಂಬುದನ್ನ ತಿಳಿಯಿರಿ. ವಾಹನ ಚಲಿಸುವಾಗ ಚಾಲಕರುಗಳು ಮೊಬೈಲ್ ಬಳಸಬಾರದು, ಇಂತಹ ವಿಚಾರಗಳಿಗೆ ಪೊಲೀಸರೊಂದಿಗೆ ಸಹಕರಿಸಿ ಎಂದರು.

ಪೊಲೀಸ್ ಇರೋದೆ ಜನರಿಗಾಗಿ :

        ಪೊಲೀಸರು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯವನ್ನ ಬೆಳೆಸಿಕೊಳ್ಳುವ ಮೂಲಕ ಸದಾ ಒಳಿತನ್ನ ಮಾಡಬೇಕು. ಜನರು ಇದ್ದರೆ ತಾನೇ ಪೊಲೀಸರು, ಜನರೆ ಇಲ್ಲದಿದ್ದರೆ ಪೊಲೀಸರ ಅವಶ್ಯಕತೆ ಇಲ್ಲ. ಸಮಸ್ಯೆಗಳನ್ನ ತಿಳಿಯಬೇಕಾದರೆ ಜನರೊಂದಿಗೆ ಪೊಲೀಸರು ಉತ್ತಮ ಸಂಪರ್ಕವನ್ನ ಇಟ್ಟುಕೊಳ್ಳುವ ಮೂಲಕ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನ ನಿರ್ಮಾಣ ಮಾಡಲು ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರ ಸಹಕಾರವೂ ಮುಖ್ಯ ಎಂದು ನಾಗರೀಕರಲ್ಲಿ ಮನವಿ ಮಾಡಿದರು.

        ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ. ರಾಮಲಿಂಗೇಗೌಡ ಸೇರಿದಂತೆ ಅಬಕಾರಿ ಇಲಾಖೆಯ ಇನ್ಸ್ ಪೆಕ್ಟರ್, ಕುಣಿಗಲ್, ಅಮೃತೂರು ಹಾಗೂ ಹುಲಿಯೂರುದುರ್ಗದ ಪಿಎಸ್‍ಐ ಗಳಾದ ಕಾರ್ತಿಕ್‍ಗೌಡ, ಮಂಜುನಾಥ್, ಪುಟ್ಟೇಗೌಡ, ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಅನುಪಮಾ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link