ಸಮೀಕ್ಷೆಯಲ್ಲಿ ಭಾಗವಹಿಸಿ ಜೀವನ ಮಟ್ಟ ಹೆಚ್ಚಿಸಿಕೊಳ್ಳಿ:ರವೀಂದ್ರ .ಬಿ ಮಲ್ಲಾಪುರ

ದಾವಣಗೆರೆ :

    ನಾಗರೀಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ಮೂಲಕ ಸುಲಲಿತ ಜೀವನ ಕಟ್ಟಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಫೆ.29ರ ವರೆಗೆ ಆನ್‍ಲೈನ್ ಸಮೀಕ್ಷೆ ನಡೆಸುತ್ತಿದ್ದು, ಸಾರ್ವಜನಿಕರು ತಮ್ಮ ಜೀವನ ಮಟ್ಟವನ್ನು ಉತ್ತಮ ಗೊಳಿಸಿಕೊಳ್ಳಲಿಕ್ಕಾಗಿ ಈ ಸಮೀಕ್ಷೆಯಲ್ಲಿ ಭಾಗವಹಿಸಬೇಕೆಂದು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ .ಬಿ ಮಲ್ಲಾಪುರ ಮನವಿ ಮಾಡಿದರು.

ಉತ್ತಮ ಸೇವೆ ಪಡೆಯಿರಿ:

   ಈ ಕುರಿತು ನಗರದ ಸ್ಮಾರ್ಟ್ ಸಿಟಿ ಲಿಮಿಡೆಟ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಫೆ.1ರಿಂದ ಆರಂಭವಾಗಿರುವ ಸಮೀಕ್ಷೆಯಲ್ಲಿ 7,852 ಮಂದಿ ಭಾಗವಹಿಸಿದ್ದು, ರಾಜ್ಯದಲ್ಲಿಯೇ ದಾವಣಗೆರೆ ಮೊದಲ ಸ್ಥಾನದಲ್ಲಿದೆ. ಇನ್ನೂ ನಾಲ್ಕು ದಿನ ಅಂದರೆ, ಫೆ.29ರ ವರೆಗೆ ಸರ್ವೇ ಕಾರ್ಯ ನಡೆಯಲಿದೆ. ಹೀಗಾಗಿ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಸರ್ವೇಯಲ್ಲಿ ಪಾಲ್ಗೊಳ್ಳುವ ಮೂಲಕ ಅಭಿಪ್ರಾಯವನ್ನು ಸರ್ಕಾರಕ್ಕೆ ತಲುಪಿಸಿ, ಗುಣಮಟ್ಟದ ಸೇವೆಗಳನ್ನು ಪಡೆಯಬೇಕೆಂದು ಕಿವಿಮಾತು ಹೇಳಿದರು.

ಭಾಗವಹಿಸುವುದು ಹೇಗೆ?:

      ಸಾರ್ವಜನಿಕರು https://eol121019.org/citizenFeedback ಲಿಂಕ್ ಹಾಗೂ ಕ್ಯೂ.ಆರ್ ಕೋಡ್ ಅನ್ನು ಸ್ಕಾನ್ ಮಾಡುವುದರ ಮೂಲಕ ತಮ್ಮ ಅಭಿಪ್ರಾಯ ತಿಳಿಸಬಹುದಾಗಿದೆ. ಇದರಲ್ಲಿ ಶಿಕ್ಷಣ, ಆರೋಗ್ಯ, ಒಳಚರಂಡಿ, ವಿದ್ಯುತ್, ಕುಡಿಯುವ ನೀರು, ಸುರಕ್ಷತೆ, ಘನ ತ್ಯಾಜ್ಯ ನಿರ್ವಹಣೆ ಸೇರಿದಂತೆ ಒಟ್ಟು 24 ವಿಷಯಗಳ ಕುರಿತು ಪ್ರಶ್ನೆಗಳಿರಲಿವೆ. ದಾವಣಗೆರೆ ನಗರದ ಭವಿಷ್ಯವನ್ನು ಉನ್ನತಕ್ಕೇರಿಸಲು ಸಾರ್ವಜನಿಕರು ಸಮೀಕ್ಷೆಯಲ್ಲಿ ಅಭಿಪ್ರಾಯವನ್ನು ಮುಕ್ತವಾಗಿ ದಾಖಿಲಿಸಲು ಅವಕಾಶ ಕಲ್ಪಿಸಲಾಗಿದೆ.

      ನಿಮ್ಮ ಮೊಬೈಲ್‍ನ ಸ್ಕ್ರೀನ್ ಮೇಲೆ ಮೂಡಿ ಬರುವ ಪ್ರಶ್ನೆಗಳಿಗೆ ಧನಾತ್ಮಕ ಅಥವಾ ಋಣಾತ್ಮಕವಾಗಿ ಉತ್ತರಿಸಲು ಅವಕಾಶ ದೊರೆಯಲಿದೆ. ಸಮಸ್ಯೆಯ ಮೂಲ ಎಲ್ಲಿ ಎಂಬುದರ ಅಧ್ಯಯನ ನಡೆಸುವ ಮೂಲಕ ಮುಂಬರುವ ದಿನಗಳಲ್ಲಿ ಸರಿಯಾದ ಯೋಜನೆ ರೂಪಿಸಲು ಈ ಸಮೀಕ್ಷೆ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.

ದಾವಣಗೆರೆಗೆ ಮೊದಲ ಸ್ಥಾನ:

      ಕಳೆದ 25 ದಿನಗಳಿಂದ ಆರಂಭವಾಗಿರುವ ಈ ಸಮೀಕ್ಷೆಯಲ್ಲಿ ಭಾರತ ಸರ್ಕಾರವು ಜನಸಂಖ್ಯೆ ಆಧಾರದ ಮೇಲೆ ನೀಡಿರುವ ಗುರಿಗೆ ಫೆ.26 ರಂತೆ 114 ಸ್ಮಾರ್ಟ್ ನಗರಗಳಲ್ಲಿ ದಾವಣಗೆರೆ ನಗರವು 40 ನೇ ಸ್ಥಾನದಲ್ಲಿದ್ದು, ರಾಜ್ಯವಾರು ಕರ್ನಾಟಕ ರಾಜ್ಯವು 26 ನೇ ಸ್ಥಾನದಲ್ಲಿ ಹಾಗೂ ಕರ್ನಾಟಕದಲ್ಲಿ ಜಿಲ್ಲಾವಾರು ದಾವಣಗೆರೆ ನಗರವು 1ನೇ ಸ್ಥಾನದಲ್ಲಿದೆ. ದಾವಣಗೆರೆ ನಗರಕ್ಕೆ 4,615 ಜನರು ಸಮೀಕ್ಷೆಯಲ್ಲಿ ಭಾಗವಹಿಸುವ ಗುರಿ ನಿಗದಿ ಪಡಿಸಲಾಗಿತ್ತು. ಆದರೆ, ದಾವಣಗೆರೆ ನಗರದಲ್ಲಿ 7,852 ಮಂದಿ ಸಮೀಕ್ಷೆಯಲ್ಲಿ ಭಾಗವಹಿಸಿರುವುದರಿಂದ ನಮ್ಮ ನಗರವು ಶೇ.170.14 ರಷ್ಟು ಗುರಿ ಸಾಧಿಸುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಅವರು ವಿವರಿಸಿದರು.

5 ಇ-ಲೈಬ್ರರಿ:

     ಈಗಾಗಲೇ ನಿಜಲಿಂಗಪ್ಪ ಬಡಾವಣೆಯಲ್ಲಿ ನಮ್ಮ ಸ್ಮಾರ್ಟ್ ಸಿಟಿ ಯೋಜನೆಯಡಿ ಇ-ಲೈಬ್ರರಿ ಆರಂಭಿಸಿದ್ದು, ಇನ್ನೂ ಸಿಲ್ವರ್ ಜೂಬ್ಲಿ ಗ್ರಂಥಾಲಯ, ಆಂಜನೇಯ ಬಡಾವಣೆ, ಡಿಸಿಎಂ ಟೌನ್‍ಶಿಪ್ ಸೇರಿದಂತೆ ನಾಲ್ಕು ಕಡೆಗಳಲ್ಲಿ ಇ-ಲೈಬ್ರರಿ ಆರಂಭಿಸಲಾಗುವುದು ಎಂದು ಹೇಳಿದರು.

2022ಕ್ಕೆ 24*7 ನೀರು:

    ದಾವಣಗೆರೆಯ ನಾಗರೀಕರಿಗೆ 24*7 (ದಿನದ 24 ಗಂಟೆಗಳ ಕಾಲ) ನೀರು ಪೂರೈಸುವ ಜಲಸಿರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, 2022ರ ಆಗಸ್ಟ್ ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಅ ನಂತರ ನಾಗರೀಕರಿಗೆ ದಿನದ 24 ಗಂಟೆಯು ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು.

ಪೊಲೀಸ್ ಇಲಾಖೆಗೆ 74.84 ಕೋಟಿ:

    ಸ್ಮಾರ್ಟ್ ಸಿಟಿ ಯೋಜನೆಯಡಿ ಪೊಲೀಸ್ ಇಲಾಖೆಗೆ ಸಿಸಿ ಟಿವಿ ಕ್ಯಾಮೇರಾ ಅಳವಡಿಕೆ, ಬ್ಯಾರಿಕೆಡ್, ಶೈನಿಂಗ್ ಬೋರ್ಡ್, ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಲು ಮೂರು ಕಮಾಂಡೋ ವಾಹನ ಖರೀದಿ ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ 74.84 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಮೊನ್ನೆ ಖರೀದಿಸಿರುವ ಮೂರು ಕಮಾಂಡೋ ವಾಹನಗಳಿಗೆ ಪ್ರತ್ಯೇಕ ಡ್ರೋನ್ ಕ್ಯಾಮೆರಾ ಸೇರಿದಂತೆ ಇತರೆ ಉಪಕರಣ ಅಳವಡಿಸುವುದು ಸೇರಿ ಒಟ್ಟು 1.13 ಕೋಟಿ ರೂ.ಗಳಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸುದ್ದಿಗೋಷ್ಠಿಯಲ್ಲಿ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಕಾರ್ಯಪಾಲಕ ಅಭಿಯಂತರ ಸತೀಶ್ ಕುಮಾರ್, ಚಂದ್ರಶೇಖರ್, ವಾರ್ತಾಧಿಕಾರಿ ಡಿ.ಅಶೋಕಕುಮಾರ್ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap