ಸೋಂಕು ಹರಡದಂತೆ ಮುಂಜಾಗ್ರತ ಕ್ರಮಕೈಗೊಳ್ಳಿ : ಶಾಸಕ

ಜಗಳೂರು:

   ತಾಲ್ಲೂಕಿನಲ್ಲಿ ಕೊರೋನಾ ವೈರಸ್ ಶಂಕಿತ ಹಾಗೂ ಸೋಂಕು ಹರಡದಂತೆ ಮುಂಜಾಗ್ರತ ಕ್ರಮಕೈಗೊಳ್ಳಬೇಕು. ಈ ವಿಚಾರದಲ್ಲಿ ನಿರ್ಲಕ್ಷೆ, ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ದ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಎಸ್.ವಿ ರಾಮಚಂದ್ರ ಎಚ್ಚರಿಕೆ ನೀಡಿದರು.

    ತಾಲ್ಲೂಕು ಕಚೇರಿಯಲ್ಲಿ ಶನಿವಾರ ಕೊರೋನಾ ವೈರಸ್ ಜಾಗೃತಿ ಕುರಿತು ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಕೊರೋನಾ ವೈರಸ್ ಬಗ್ಗೆ ಎಲ್ಲರಿಗೂ ಭಯವಿದೆ. ಆದರೆ ಯಾರು ಆತಂಕ ಪಡಬೇಡಿ, ಎಚ್ಚರಿಕೆಯಿಂದ ಮನೆಯಲ್ಲಿಯೇ ಇದ್ದು ರೋಗ ನಿಯಂತ್ರಿಸಿ. ಚಿಕ್ಕ ಮಕ್ಕಳು, ವೃದ್ದರನ್ನು ಎಚ್ಚರಿಕೆಯಿಂದ ಗಮನಿಸಿ, ಎಲ್ಲೂ ಗುಂಪಾಗಿ ಇರಬೇಡಿ, ಊಹಪೋಹಗಳಿಗೆ ಕಿವಿಗೊಡಬೇಡಿ , ವದಂತಿ ಹರಡಿಸುವ ಕಿಡಿಗೇಡಿಗಳನ್ನು ತಕ್ಷಣವೆ ಬಂಧಿಸಿ ಎಂದು ಪೋಲೀಸ್ ಇಲಾಖೆಗೆ ಸೂಚನೆ ನೀಡಿದರು.

    ಬೇಸಿಗೆ ಆರಂಭವಾಗಿದ್ದು ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು, ತೀರಾ ಸಮಸ್ಯೆ ಇರುವ ಕಡೆ ತುರ್ತಾಗಿ ಖಾಸಗಿ ಬೋರ್‍ವೆಲ್ ಮೂಲಕ ಅಥವಾ ಕೊಳವೆಬಾವಿ ಕೊರೆಸಿ, ಈ ಹಿಂದೆ ಕೊರೆದಿರುವ ಕೊಳವೆಬಾವಿಗಳಿಗೆ ತಕ್ಷಣವೇ ಮೋಟರ್‍ಪಂಪ್‍ಸೆಟ್, ಪೈಪ್‍ಲೈನ್ ಅಳವಡಿಸಿ ನೀರು ಸರಬರಾಜು ಮಾಡಬೇಕು ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇಗೆ ಸೂಚನೆ ನೀಡಿದರು.

     ಪ.ಪಂ ಮುಖ್ಯಾಧಿಕಾರಿ ರಾಜು ಡಿ ಬಣಕಾರ್ ಮಾತನಾಡಿ, ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಸಹಾಯದೊಂದಿಗೆ ಕರೋನಾ ವೈರಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಅಗ್ನಿಶಾಮಕ ವಾಹನದದಿಂದ ಪಟ್ಟಣದ ಪ್ರತಿಯೊಂದು ಬೀದಿಯಲ್ಲೂ ಕ್ರಿಮಿನಾಶಕ ದ್ರವ ಸಿಂಪಡಿಸಲಾಗಿದೆ. ವಿದೇಶದಿಂದ ಬಂದವರನ್ನು ಗುರುತಿಸಿ ಆ ವ್ಯಕ್ತಿಗಳಿಗೆ ಚಿಕಿತ್ಸೆ ಕೊಡಿಸಲಾಗುವುದು. ಕೋಳಿ ಮಾಂಸದ ಅಂಗಡಿಗಳನ್ನು ಮುಚ್ಚಿಸಿ ಔಷದಿ ಸಿಂಪಡಿಸಲಾಗಿದೆ.

    ತರಕಾರಿ, ಕಿರಾಣಿ, ಹಾಲು, ಹಣ್ಣು, ಮೆಡಿಕಲ್ ಸ್ಟೋರ್, ಎಟಿಎಂಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಾಕ್ಸ್‍ಗಳನ್ನು ಹಾಕಲಾಗಿದೆ. ವಾರ್ಡ್‍ಗಳು ಹಾಗೂ ಜನಸಂದಣಿ ಜಾಗಗಳಲ್ಲಿ ಕೈ ತೊಳೆಯುವ ಕೇಂದ್ರಗಳನ್ನು ತೆರೆಲಾಗಿದೆ ಎಂದು ಮಾಹಿತಿ ನೀಡಿದರು. ಜಿ.ಪಂ ಸದಸ್ಯ ಎಸ್.ಕೆ ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ಡಾ. ನಾಗರಾಜ್, ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ನೀರಜ್, ಡಾ. ಮಲ್ಲಪ್ಪ, ಸಿಪಿಐ ದುರುಗಪ್ಪ, ಪಿಎಸ್‍ಐ ಉಮೇಶ್‍ಬಾಬು, ಲೋಕೋಪಯೋಗಿ ಇಲಾಖೆ ಎಇಇ ರುದ್ರಪ್ಪ, ಬಿಇಒ ಯುವರಾಜ್‍ನಾಯ್ಕ, ಪ.ವರ್ಗಗಳ ಕಲ್ಯಾಣಾಧಿಕಾರಿ ಮಹೇಶ್, ಕ.ರಾ.ಸ.ನೌ.ಸಂಘದ ಅಧ್ಯಕ್ಷ ಅಜ್ಜಯ್ಯ ಸೇರಿದಂತೆ ಮತ್ತಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link