ಚಿತ್ರದುರ್ಗ:
ಜೀವನದಲ್ಲಿ ಎದುರಾಗುವ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವುದೇ ಯುಗಾಗಿ ಹಬ್ಬದ ವಿಶೇಷ ಎಂದು ಲೇಖಕ ಎಚ್.ಆನಂದಕುಮಾರ್ ಹೇಳಿದರು.
ಗಾನಯಾನ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ಅಮಕುಂದಿ ಮೊಳಕಾಲ್ಮುರು ತಾಲೂಕು, ಸಿರಿಸಂಪಿಗೆ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮಠದಕುರುಬರಹಟ್ಟಿಯಲ್ಲಿರುವ ಬಸವೇಶ್ವರ ವಿದ್ಯಾಸಂಸ್ಥೆಯ ಗಾಂಧಿ ಮತ್ತು ಅಂಬೇಡ್ಕರ್ ಅನಾಥಾಶ್ರಮದಲ್ಲಿ ನಡೆದ ಯುಗಾದಿ ಬೇವು-ಬೆಲ್ಲ ಮತ್ತು ಕವಿಗೋಷ್ಟಿ ಉದ್ಘಾಟಿಸಿ ಮಾತನಾಡಿದರು.
ಯುಗಾಗಿ ಹಬ್ಬವು ಪ್ರಾಕೃತಿಕವಾಗಿ ರುಜು ಪಡೆದುಕೊಂಡಿರುವ ಹಬ್ಬವಾಗಿದೆ. ಯುಗಾದಿಯ ಈ ಕಾಲಘಟ್ಟದಲ್ಲಿ ಬೇವು-ಬೆಲ್ಲವನ್ನು ಸವಿದು ಒಳ್ಳೆಯ ಮಾತನಾಡಿ ಪರಸ್ಪರರು ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ. ಅದೇ ರೀತಿ ಚಂದ್ರ ದರ್ಶನ ಮಾಡಿ ಚಿಕ್ಕವರು ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು ಯುಗಾಗಿ ಹಬ್ಬದ ಮತ್ತೊಂದು ವಿಶೇಷ ಎಂದು ತಿಳಿಸಿದರು.
ಸಹಾಯಕ ಪ್ರಾಧ್ಯಾಪಕ ಹಾಗೂ ಸಾಹಿತಿ ಪ್ರೊ.ಬಸವರಾಜ್ ಟಿ.ಬೆಳಗಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಯುಗಾದಿ ಎಂದರೆ ಯುಗ ಮತ್ತು ಆದಿ. ಭೂತಕಾಲ ಮತ್ತು ಭವಿಷ್ಯತ್ ಕಾಲದ ನಡುವೆ ಬುದುಕುವ ನಾವು ಪರಂಪರೆ ಪ್ರಜ್ಞೆ, ಪ್ರಗತಿ ಪ್ರಜ್ಞೆ, ಸಮಕಾಲೀನ ಪ್ರಜ್ಞೆ ಇಲ್ಲದಿದ್ದರೆ ಸಂಸ್ಕೃತಿ, ಸಂಪ್ರದಾಯ ಕಲಿತಿಲ್ಲ ಎಂದರ್ಥ ಎಂದರು.
ಪ್ರಗತಿ ಪ್ರಜ್ಞೆ, ಸಮಕಾಲೀನ ಪ್ರಜ್ಞೆ ಕಲಿತಿಲ್ಲದಿದ್ದರೆ ನಾವು ಈ ಕಾಲದಲ್ಲಿ ಬದುಕಿಲ್ಲ ಎನ್ನುವ ಅರ್ಥವನ್ನು ಸೂಚಿಸುತ್ತದೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಎರಡನ್ನು ಸಮಾನವಾಗಿ ಸ್ವೀಕರಿಸಿ ಬದುಕುವುದೆ ಯುಗಾದಿ ಬೇವು-ಬೆಲ್ಲದ ಮಹತ್ವ ಎಂದು ಹೇಳಿದರು.
ಬಬ್ಬೂರು ತಿಪ್ಪೀರನಾಯ್ಕ, ಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಕೆ.ಶಂಕರಪ್ಪ ಇವರುಗಳು ಮಾತನಾಡಿದರು. ಶಿಕ್ಷಕ ಮತ್ತು ಗಾಯಕ ಕೆ.ಗಂಗಾಧರ್, ಶಿಕ್ಷಕಿ ಮೆಹಬೂಬಿ, ನಾಗೇಂದ್ರಪ್ಪ ವೇದಿಕೆಯಲ್ಲಿದ್ದರು.ಇಂಗಳದಾಳ್ ತಿಮ್ಮಯ್ಯ, ಕೆ.ಹೆಚ್.ಜಯಪ್ರಕಾಶ್, ಟಿ.ಹೇಮಂತರಾಜ್, ಆರ್.ಜಿ.ವಿನಾಯಕ, ವೇದಮೂರ್ತಿ ಮದ್ದೇರು, ಮೋಹಿದ್ದೀನ್‍ಖಾನ್, ಡಿ.ಶ್ರೀಕುಮಾರ್, ಕುಸುಮ ಇವರುಗಳು ಕವನ ವಾಚಿಸಿದರು.