ತುಮಕೂರು
ಕೊರಟಗೆರೆ, ಮಧುಗಿರಿ, ಶಿರಾ ಹಾಗೂ ಪಾವಗಡ ತಾಲೂಕುಗಳ ಪ್ರತಿ ಹಳ್ಳಿಗಳಲ್ಲಿ ನೀರಿನಲ್ಲಿರುವ ಪ್ಲೋರೈಡ್ ಅಂಶವನ್ನು ಪರೀಕ್ಷೆ ಮಾಡಿ ವರದಿ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ, ಎಸ್‍ಸಿಪಿ/ಟಿಎಸ್‍ಪಿ ಯೋಜನೆಯ ಐಇಸಿ ಅನುದಾನ ಹಾಗೂ ಪ್ಲೋರೈಡ್ ಕುರಿತ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಜನವರಿ 31ರ ಅಂತ್ಯಕ್ಕೆ ಪ್ಲೋರೈಡ್ ಅಂಶವಿರುವ ನೀರಿನ ಮಾದರಿಗಳನ್ನು ಪರೀಕ್ಷಿಸಬೇಕಿತ್ತು. ಆದರೆ ಈ ವರೆಗೂ ಯಾರು ಸಹ ಮಾಹಿತಿ ನೀಡಿಲ್ಲ. ಕೂಡಲೇ ನೀರಿನ ಮಾಹಿತಿ ಸಂಗ್ರಹಿಸಿ ಎಂದರು.
ಪ್ರತಿಯೊಂದು ಶಾಲೆಗಳಲ್ಲಿ ಬಳಸುವ ನೀರಿನ್ನು ಪರೀಕ್ಷಿಸಿ, ಪ್ಲೋರೈಡ್ ಅಂಶವಿದ್ದರೆ ಆ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರ ಗಮನಕ್ಕೆ ತಂದು ಒಂದು ಸಣ್ಣ ಶುದ್ಧ ನೀರಿನ ಘಟಕದ ವ್ಯವಸ್ಥೆ ಮಾಡುವಂತೆ ತಿಳಿಸಬೇಕು. ಏಕೆಂದರೆ ಮಕ್ಕಳ ಭವಿಷ್ಯದಲ್ಲಿ ಬರುವ ಅನಾರೋಗ್ಯ ತಡೆಯಲು ಪ್ಲೋರೈಡ್ ಅಂಶವಿರುವ ನೀರಿನ ದುಷ್ಪರಿಣಾಮದ ಬಗ್ಗೆ ಬಿತ್ತಿಚಿತ್ರಗಳನ್ನು ಪ್ರತಿ ಹಳ್ಳಿಗಳಲ್ಲೂ ಅಂಟಿಸುವುದರ ಮುಖಾಂತರ ಜನರಿಗೆ ಅರಿವು ಮೂಡಿಸಿ ಎಂದರು.
ಮಧುಗಿರಿ, ಪಾವಗಡ, ಕೊರಟಗೆರೆ ತಾಲ್ಲೂಕುಗಳಲ್ಲಿ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿದ್ದೀರಾ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಆರ್‍ಸಿಹೆಚ್ ಅಧಿಕಾರಿ ಡಾ. ಕೇಶವರಾಜ್ ಅಂಗನವಾಡಿ ಹತ್ತಿರದ ಶುದ್ಧ ನೀರಿನ ಘಟಕದಿಂದ ಉಚಿತವಾಗಿ ನೀರನ್ನು ಒದಗಿಸುತ್ತಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಜನರು ಪ್ಲೋರೈಡ್ ಅಂಶ ಇರುವ ನೀರನ್ನು ಕುಡಿಯಲು ಉಪಯೋಗಿಸದೆ ಮಳೆ ನೀರಿನ ಕೊಯ್ಲು ಮಾಡಿಸಿಕೊಳ್ಳುವಂತೆ ಜನರಿಗೆ ಅರಿವು ಮೂಡಿಸಬೇಕೆಂದರು. ಐಇಸಿ ಕಾರ್ಯಕ್ರಮಗಳನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರು ಹೆಚ್ಚಿರುವ ಹಳ್ಳಿಗಳಲ್ಲಿ ನಡೆಸಬೇಕು. ಕಾರ್ಯಕ್ರಮ ಮಾಡುವುದಕ್ಕೂ ಎರಡು ದಿನಗಳ ಮೊದಲೇ ಟಾಂ ಟಾಂ ಮಾಡಿಸಬೇಕು. ಶಾಲೆಗಳಲ್ಲಿ ಹಾಗೂ ಸಂತೆ ನಡೆಯುವ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಯೋಜನೆಯ ಪೂರ್ಣ ಮಾಹಿತಿ ನೀಡಬೇಕು. ಕಾರ್ಯಕ್ರಮ ಮುಗಿದ ನಂತರ ಭಾಗವಹಿಸಿದ ಜನರ ಸಹಿ ಹಾಗೂ ಒಂದು ವೀಡಿಯೋ ತುಣುಕನ್ನು ನನಗೆ ಒದಗಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ, ಸರ್ವೆಲೆನ್ಸ್ ಅಧಿಕಾರಿ ಡಾ||ಅರವಿಂದ ಮೋಹನ್‍ದಾಸ್, ಡಾ||ಮಹಿಮಾ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.