ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯ

ದಾವಣಗೆರೆ:

         ಆಶ್ರಯ ಮನೆ, ನಿವೇಶನಕ್ಕಾಗಿ ಅನಧಿಕೃತ ಅರ್ಜಿ ನೀಡಿ, ಅಮಾಯಕರನ್ನು ವಂಚಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಬಿಜೆಪಿ ಕಾರ್ಯಕರ್ತರು ಗುರುವಾರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

          ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಕಳೆದ 15 ದಿನಗಳಿಂದಲೂ ನಗರದ ಬಡವರಿಗೆ ಆಶ್ರಯ ಮನೆ, ನಿವೇಶನಗಳನ್ನು ಪಾಲಿಕೆಯಿಂದ ನೀಡುವುದಾಗಿ ಹೇಳಿ, ಯಾವುದೇ ಅಧಿಕೃತ ಆದೇಶವಿಲ್ಲದಿದ್ದರೂ ಪಾಲಿಕೆ ಆವರಣದದಲ್ಲೇ 100-150 ರು.ಗೆ ಅನಧಿಕೃತ ಅರ್ಜಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

         ಆಧಾರ್ ಕಾರ್ಡ್, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಜೆರಾಕ್ಸ್ ಮಾಡಿಸಿ, ಸಲ್ಲಿಸಬೇಕೆಂಬ ಸುದ್ದಿ ಹರಡಿದ್ದರಿಂದ ಸಾವಿರಾರು ಜನರು ನಿತ್ಯವೂ ಜೆರಾಕ್ಸ್ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ. ಪಾಲಿಕೆ ಆವರಣದ ರಂಗ ಮಂಟಪದಲ್ಲೇ ಅರ್ಜಿ ಸ್ವೀಕರಿಸಲು ಪಾಲಿಕೆಯಿಂದ ಮೂವರು ಸಿಬ್ಬಂದಿ ನೇಮಿಸಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳಲ್ಲೂ ಹಾಗೂ ಸಾರ್ವಜನಿಕರಲ್ಲೂ ಗೊಂದಲ ಮನೆ ಮಾಡಿದೆ ಎಂದು ದೂರಿದರು.

      ಪಾಲಿಕೆ ಆಯುಕ್ತರೇ ಹೇಳುವಂತೆ ಆಶ್ರಯ ಮನೆಗಳಿಗಾಗಿ ಪಾಲಿಕೆಯಿಂದ ಯಾವುದೇ ಅರ್ಜಿ ಆಹ್ವಾನಿಸಿಲ್ಲ. ಯಾವುದೇ ಅರ್ಜಿ ಸ್ವೀಕರಿಸುತ್ತಿಲ್ಲ. ಆದರೆ, ಜಿಲ್ಲಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಸ್ವೀಕೃತಿ ಕೇಂದ್ರ ತೆರೆದಿರುವುದಾಗಿ ಪಾಲಿಕೆ ಆಯುಕ್ತರು ಮಾಧ್ಯಮಗಳಿಗೆ ಹೇಳಿದ್ದಾರೆ. ಒಂದು ಪಕ್ಷ ಜಿಲ್ಲಾಧಿಕಾರಿ ಆದೇಶ ಮಾಡಿದ್ದರೆ ಪಾಲಿಕೆಯಿಂದ ಯಾಕೆ ಅರ್ಜಿ ವಿತರಿಸಿಲ್ಲ? ಮಧ್ಯವರ್ತಿಗಳು ವಸತಿ ಹೀನರನ್ನು ಏಕೆ ವಂಚಿಸುತ್ತಿದ್ದಾರೆಂದು ಪ್ರಶ್ನಿಸಿದರು.

        ಆಶ್ರಯ ಮನೆ ಬೇಕಾದವರು ಯಾರೇ ಅರ್ಜಿ ಸಲ್ಲಿಸಿದರೂ ತಕ್ಷಣವೇ ಸ್ವೀಕರಿಸಲು ಸ್ವೀಕೃತಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಮೌಖಿಕ ಆದೇಶ ನೀಡಿದ್ದರೆ ದಾವಣಗೆರೆಯ ಯಾವ ಭಾಗದಲ್ಲಿ ಜಿಲ್ಲಾಡಳಿತ ಜಾಗವನ್ನು ನಿಗದಿಪಡಿಸಿದೆ? ಆ ಎಲ್ಲಾ ವಿಚಾರಗಳ ಬಗ್ಗೆ ತಕ್ಷಣವೇ ಜಿಲ್ಲಾಡಳಿತ ಹಾಗೂ ಮಹಾ ನಗರ ಪಾಲಿಕೆ ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ಬಹಿರಂಗ ಪಡಿಸುವ ಮೂಲಕ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಬೇಕೆಂದು ಆಗ್ರಹಿಸಿದರು.

         ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಜನಹಳ್ಳಿ ಶಿವಕುಮಾರ ಪೈಲ್ವಾನ್, ಪಾಲಿಕೆ ಸದಸ್ಯ ಡಿ.ಕೆ.ಕುಮಾರ, ಪಿ.ಸಿ.ಶ್ರೀನಿವಾಸ, ಎಚ್.ಎನ್.ಶಿವಕುಮಾರ, ಎನ್.ರಾಜಶೇಖರ, ಕಲ್ಲಪ್ಪ, ರಮೇಶ ನಾಯ್ಕ, ಕೆಟಿಜೆ ನಗರ ಲೋಕೇಶ, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap