ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಉತ್ತಮ ಫಲಿತಾಂಶಕ್ಕಾಗಿ ವಿಶೇಷ ತರಗತಿ ಆರಂಭಿಸಿ : ಸಿಇಓ

ತುಮಕೂರು
     ಜಿಲ್ಲೆಯಲ್ಲಿ ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶವನ್ನು ಉತ್ತಮಗೊಳಿಸುವ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸದಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಸಂಜೆ ಸಮಯದಲ್ಲಿ ವಿಶೇಷ ತರಗತಿ ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.
     ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಂದು ತಾಲೂಕು ಮಟ್ಟದ   ಅಧಿಕಾರಿಗಳೊಂದಿಗೆ ವಿವಿಧ ಯೋಜನೆಗಳ  ಪ್ರಗತಿ ಪರಿಶೀಲನಾ ಸಭೆ ನಡೆಸಿ  ಮಾತನಾಡಿದ ಅವರು, ಎಸ್‍ಎಸ್‍ಎಲ್‍ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದ್ದು, ಈಗಿನಿಂದಲೇ ಮಕ್ಕಳಿಗೆ ಪರೀಕ್ಷಾ ಸಿದ್ಧತೆ ಕೈಗೊಳ್ಳುವ ಬಗ್ಗೆ  ತಯಾರು ಮಾಡಬೇಕೆಂದು ಶಿಕ್ಷಕರಿಗೆ ನಿರ್ದೇಶನ ನೀಡಿದರು. ನಂತರ ತಾಲ್ಲೂಕಿನಲ್ಲಿ ಕೈಗೆತ್ತಿಕೊಂಡಿರುವ 21 ಸರ್ಕಾರಿ ಶಾಲಾ ಕಟ್ಟಡಗಳ ಮರು ನಿರ್ಮಾಣ ಕಾಮಗಾರಿ ಹಾಗೂ ಸ್ವಚ್ಚ ಭಾರತ್ ಮಿಷನ್ ಕಾರ್ಯಕ್ರಮದಡಿ 09 ಶಾಲೆಗಳಲ್ಲಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿ ಕೂಡಲೇ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅನುಷ್ಠಾನ ಇಲಾಖೆ ಅಧಿಕಾರಿಗಳಿಗೆ (ಪಿ.ಆರ್.ಇ.ಡಿ.)   ಸೂಚಿಸಿದರು. 
    ತಾಲೂಕಿನಲ್ಲಿ    ಸಮಗ್ರ ಕೃಷಿ ಪದ್ಧತಿ ಕಾರ್ಯಕ್ರಮದಡಿ ಈಗಾಗಲೇ ಕೈಗೊಳ್ಳಲಾದ ವಿಶೇಷ ಗ್ರಾಮ ಸಭೆಗಳಲ್ಲಿ ಗುರುತಿಸಲಾದ ರೈತರ ವಿವರಗಳೊಂದಿಗೆ ಕ್ರಿಯಾಯೋಜನೆಯ ಪಟ್ಟಿಯನುಸಾರ ಕ್ರಮವಹಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ತಾಲೂಕಿನಲ್ಲಿ ಉತ್ತಮ ಮಳೆ ಬರುತ್ತಿದ್ದು, ಈಗಾಗಲೇ ತುಂಬಿರುವ ಕೆರೆಗಳಿಗೆ ಮೀನಿನ ಮರಿಗಳನ್ನು ನಿಯಮಾನುಸಾರ ಬಿಡಲು ಅಗತ್ಯ ಕ್ರಮವಹಿಸುವಂತೆ ಮೀನುಗಾರಿಕಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. 
 
    ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ  ಶೇ.68ರಷ್ಟು ಪ್ರಗತಿ ಸಾಧಿಸಿದ್ದು, ಮಾರ್ಚ್ ಅಂತ್ಯದೊಳಗೆ ಶೇಕಡಾ 100% ಭೌತಿಕ ಗುರಿಯನ್ನು ನಿಯಮಾನುಸಾರ ಸಾಧಿಸಲು ಕ್ರಮವಹಿಸುವಂತೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು,  ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.  
    ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 2012ರ ಬೇಸ್‍ಲೈನ್ ಸರ್ವೇಯಲ್ಲಿ ಹೊರಗುಳಿದ 1316 ಕುಟುಂಬಗಳ ಪೈಕಿ ಇನ್ನು 472 ಕುಟುಂಬಗಳಿಗೆ ಶೌಚಾಲಯ ನಿರ್ಮಿಸದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಮಾಹೆಯ ಅಂತ್ಯದೊಳಗೆ ಬಾಕಿ ಇರುವ ಎಲ್ಲಾ   ಕುಟುಂಬಗಳ ವೈಯುಕ್ತಿಕ ಶೌಚಾಲಯಗಳನ್ನು ನಿರ್ಮಿಸಲು ಸೂಕ್ತ ಕ್ರಮವಹಿಸಬೇಕೆಂದರು.
 
    ಚಿ.ನಾ. ಹಳ್ಳಿಯ 5 ಗ್ರಾಮ ಪಂಚಾಯಿತಿಗಳನ್ನು ಘನ-ದ್ರವ ತ್ಯಾಜ್ಯ ವಿಲೇವಾರಿಗೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಸರ್ಕಾರದಿಂದ ಅನುಮೋದನೆಯಾಗಿರುವ ಕ್ರಿಯಾಯೋಜನೆಯಂತೆ ಡಿ.ಪಿ.ಆರ್. ತಯಾರಿಸಿ ಪ್ರಸ್ತಾವನೆಯನ್ನು ನಿಯಮಾನುಸಾರ   ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಅನುಮೋದನೆ ಪಡೆಯಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಹೊಸದಾಗಿ ಶೌಚಾಲಯ ನಿರ್ಮಿಸಲು ಗುರಿ ನಿಗಧಿಯಾಗಿದ್ದು, ಇದುವರೆಗೂ ಯಾವುದೇ ಶೌಚಾಲಯದ ಕಾಮಗಾರಿಯನ್ನು ಪ್ರಾರಂಭಿಸದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು   ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಪಿ.ಡಿ.ಒ. ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ