ದೇಶದ್ರೋಹಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹ

ಚಿತ್ರದುರ್ಗ:

      ಸಂವಿಧಾನವನ್ನು ಸುಟ್ಟ ದೇಶದ್ರೋಹಿಗಳಿಗೆ ಉಗ್ರವಾದ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಸಂವಿಧಾನ ಉಳಿಸಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಗಾಂಧಿವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮೆರವಣಿಗೆ ಮೂಲಕ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು ಸಂವಿಧಾನವಿರೋಧಿಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದರು.

      ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಜಗತ್ತಿನಲ್ಲಿ ಅತ್ಯಂತ ಸರ್ವಶ್ರೇಷ್ಟವಾದ ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡುವವರನ್ನು ಉಗ್ರ ಶಿಕ್ಷೆಗೆ ಗುರಿಪಡಿಸಬೇಕು. ರೈತರು, ದಲಿತರು, ಬಡವರ ಪರವಾಗಿ ಧ್ವನಿ ಎತ್ತುವವರನ್ನು ದೇಶದ್ರೋಹಿಗಳೆಂದು ಬಿಂಬಿಸುವವರು ಸಂವಿಧಾನದ ವಿರೋಧಿಗಳ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ತುರ್ತು ಪರಿಸ್ಥಿತಿ ಏರಿದ್ದರಿಂದ ಪಕ್ಷದ ಗತಿ ಏನಾಯಿತು ಎಂಬುದನ್ನು ಈಗಿನ ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.

     ಬುದ್ದಿಜೀವಿಗಳನ್ನು ಮುಗಿಸಬೇಕೆಂದು ಒಬ್ಬ ಮಂತ್ರಿ ಹೇಳಿದರೆ ಮತ್ತೊಬ್ಬ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಹೇಳುತ್ತಿದ್ದಾರೆ. ದೇಶದ ಮೊಟ್ಟಮೊದಲ ಪವಿತ್ರ ಗ್ರಂಥ ಸಂವಿಧಾನದ ಆಚೆಗೆ ಬೇರೆ ಯಾವುದು ಇಲ್ಲ ಎನ್ನುವುದನ್ನು ಆಳುವ ಸರ್ಕಾರಗಳಿಗೆ ಮನವರಿಕೆ ಮಾಡಿಕೊಡಬೇಕಾದರೆ ಹೋರಾಟ ಚಳುವಳಿಗಳು ಇನ್ನು ಹೆಚ್ಚಾಗಬೇಕು ಎಂದರು.

     ಸಂವಿಧಾನ ಉಳಿಸಿ ಹೋರಾಟ ಸಮಿತಿ ಸಂಘಟಕ ಪ್ರೊ.ಸಿ.ಕೆ.ಮಹೇಶ್ವರಪ್ಪ ಮಾತನಾಡಿ ಸಂವಿಧಾನವನ್ನು ಸುಟ್ಟವರು ಧರ್ಮದ್ರೋಹಿ, ದೇಶದ್ರೋಹಿಗಳೆಂದು ಪರಿಗಣಿಸಿ ಭಾರತದಿಂದ ಹೊರಗೆ ತಳ್ಳಬೇಕು .

     ಸಂವಿಧಾನಕ್ಕೆ ಸಮನಾದ ಯಾವುದೇ ಪವಿತ್ರ ಗ್ರಂಥವಿಲ್ಲ. ಅಂಬೇಡ್ಕರ್‍ರವರ ಸಂವಿಧಾನದಲ್ಲಿ ಕುರಾನ್, ಬೈಬಲ್, ಬಸವಣ್ಣನವರ ಕಾಯಕ ಪ್ರಜ್ಞೆ, ಸಾಮಾಜಿಕ ನ್ಯಾಯ, ವೈದಿಕ ಧರ್ಮದ ಸಾರಾಂಶಗಳು ಅಡಗಿವೆ ಎಂಬುದನ್ನು ಮೊದಲು ಸಂವಿಧಾನ ವಿರೋಧಿಗಳು ತಿಳಿದುಕೊಳ್ಳಲಿ. ಇಲ್ಲವೇ ಪ್ರತಿಭಟನೆ ಮೂಲಕ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎದುರೇಟು ನೀಡಿದರು.

      ಆರ್.ಎಸ್.ಎಸ್.ಪ್ರೇರಿತ ಸರ್ಕಾರ ಸಂವಿಧಾನ ಸುಡುವವರಿಗೆ ಕುಮ್ಮಕ್ಕು ನೀಡುತ್ತಿದೆ. ಬುದ್ದ ಧರ್ಮ, ಬಸವಧರ್ಮವನ್ನು ಉಳಿಸಿಕೊಳ್ಳಬೇಕಾಗಿದೆ. ಸಂವಿಧಾನ ಸುಡುವವರು ದೇಶವನ್ನು ಸುಡದೆ ಇರಲಾರರು ಅದಕ್ಕಾಗಿ ಕೂಡಲೆ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

       ಅಹಿಂದ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್ ಸಂವಿಧಾನವನ್ನು ಸುಡುವವರು ಭಯೋತ್ಪಾದಕರು, ಉಗ್ರಗಾಮಿಗಳಿಗಿಂತ ಅಪಾಯಕಾರಿಯಾದವರು. ದೇಶಭಕ್ತಿಯ ಹೆಸರಿನಲ್ಲಿರುವ ಕೆಲವು ಗುಂಪುಗಳು ದೇಶದಲ್ಲಿ ಶಾಂತಿಯನ್ನು ಕದಡುವ ಕೆಲಸಕ್ಕೆ ಕೈಹಾಕುತ್ತಿರುವುದರ ವಿರುದ್ದ ಎಲ್ಲರೂ ಮೊದಲು ಎಚ್ಚೆತ್ತುಕೊಳ್ಳಬೇಕು ಎಂದರು.

       ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ಕುಮಾರ್, ಚಿಕ್ಕಣ್ಣ, ಕುಮಾರ್, ನಗರಸಭೆ ಸದಸ್ಯರುಗಳಾದ ನಸ್ರುಲ್ಲಾ, ಜೈನುಲ್ಲಾಬ್ದಿನ್, ಮೆಹಬೂಬ್‍ಖಾತೂನ್, ಕೋಡಿಹಳ್ಳಿ ಆದಿಜಾಂಬವ ಮಠದ ಷಡಕ್ಷರಮುನಿಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮೀಜಿ ಇನ್ನು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap