ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆದಾಯ ಬರುವ ಕಾಮಗಾರಿ ಕೈಗೆತ್ತಿಕೊಳ್ಳಿ : ಸಚಿವರು

ತುಮಕೂರು
    ತುಮಕೂರು ನಗರ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆಗಾಗಿ ಭೂಸ್ವಾಧೀನಪಡಿಸಿಕೊಂಡಿರುವ ಪ್ರದೇಶಗಳ ಅಭಿವೃದ್ಧಿ ಮಾಡಿ ಈಗಾಗಲೇ ಅಭಿವೃದ್ಧಿಗೊಂಡಿರುವ ಪ್ರದೇಶಗಳ ನಿವೇಶನಗಳನ್ನು ಸೂಕ್ತ ಬೆಲೆಗೆ ಮಾರಾಟ ಮಾಡುವ ಮೂಲಕ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆದಾಯ ಬರುವಂತಹ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ಪೂರ್ಣಗೊಳಿಸುವಂತೆ ನಗರಾಭಿವೃದ್ಧಿ ಸಚಿವರಾಗಿರುವ ಬಿ.ಎ. ಬಸವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು. 
     ಅವರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿಂದು ನಗರಾಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು. ಭೂಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲಿ ರೈತರ 50-50ರ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿ ನಿವೇಶನ ಹಂಚುವ ವ್ಯವಸ್ಥೆಯಾಗಬೇಕು. ಅನುಮತಿ ಪಡೆಯದೇ ಮನೆಗಳನ್ನು ಕಟ್ಟಿಕೊಂಡಿರುವ ಸಾರ್ವಜನಿಕರಿಗೆ ಪ್ರಾಧಿಕಾರದ ನಿಯಮದಂತೆ ದಂಡ, ತೆರಿಗೆ ವಿಧಿಸಿ ಸಕ್ರಮಗೊಳಿಸುವ ಕಾರ್ಯವನ್ನು ಸರ್ಕಾರದ ಮಟ್ಟದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದೆಂದು ಸಚಿವರು ತಿಳಿಸಿದರು. 
      ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೈಗೊಂಡಿರುವ ಕೆರೆಗಳ ಅಭಿವೃದ್ಧಿ, ಮುತ್ಸಂದ್ರ ವಸತಿ ಬಡಾವಣೆ, ಮೇಳೇಕೋಟೆ-ವೀರಸಾಗರ ವಸತಿ ಯೋಜನೆ, ಕ್ಯಾತ್ಸಂದ್ರ ವಸತಿ ಯೋಜನೆ, ಶೆಟ್ಟಿಹಳ್ಳಿ ವಸತಿ ಯೋಜನೆ, ಗುಬ್ಬಿಗೇಟ್‍ನಿಂದ ಕನಕವೃತ್ತದವರೆಗೆ ರಿಂಗ್‍ರಸ್ತೆ ಅಭಿವೃದ್ಧಿ, ಶೆಟ್ಟಿಹಳ್ಳಿ ವಾಣಿಜ್ಯ ಮಳಿಗೆ, ಕ್ಯಾತ್ಸಂದ್ರ ಕ್ರೀಡಾ  ಸಮುಚ್ಛಯ, ಸಮುದಾಯ ಭವನ, ನಾಗರಿಕ ಸೌಕರ್ಯ ನಿವೇಶನಗಳ ಬಗ್ಗೆ ಸಚಿವರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಯೋಗಾನಂದ ಅವರಿಂದ ಮಾಹಿತಿ ಪಡೆದರು.
     ಬುಗುಡನಹಳ್ಳಿ ಕೆರೆಯಿಂದ ಅಮಾನಿಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಏಪ್ರಿಲ್ ಮಾಹೆಯೊಳಗಾಗಿ ಪೂರ್ಣಗೊಳಿಸುವಂತೆ, ಈ ಮಹತ್ವದ ಯೋಜನೆಯಿಂದ ತುಮಕೂರು ಒಂದು ಪ್ರವಾಸಿತಾಣವಾಗಿ ಪರಿವರ್ತನೆಗೊಳ್ಳಲಿದೆ ಹಾಗೂ ನಗರದ ಸೌಂದರ್ಯ ಹೆಚ್ಚಲಿದೆ ಎಂದು ಸಚಿವರು ನುಡಿದರು. 
     ಸಚಿವರು ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ, ಅಮಾನಿಕೆರೆ ಅಭಿವೃದ್ಧಿ ಕಾಮಗಾರಿಯನ್ನು ಸ್ಥಳಕ್ಕೆ ಭೇಟಿನೀಡಿ ವೀಕ್ಷಿಸಿ ನಿಗದಿತ ಅವಧಿಯೊಳಗೆ ಕ್ರೀಡಾಂಗಣ ಮತ್ತು ಅಮಾನಿಕೆರೆ ಅಭಿವೃದ್ದಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಮತ್ತು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಂತರ ಸಚಿವರು ಕನಕವೃತ್ತಕ್ಕೆ ಭೇಟಿನೀಡಿ ಅಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಪೌರಾಯುಕ್ತ ಟಿ. ಭೂಬಾಲನ್, ಮುಖ್ಯ ಇಂಜಿನಿಯರ್ ಸಿದ್ಧಗಂಗಪ್ಪ ಹಾಗೂ ಗಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹಾಜರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap