ಚಳ್ಳಕೆರೆ
ಲೋಕಸಭಾ ಚುನಾವಣೆಗೆ ನಿಯೋಜನೆಗೊಂಡಿರುವ ಎಲ್ಲಾ ಅಧಿಕಾರಿಗಳು ಚುನಾವಣೆಯ ಎಲ್ಲಾ ಪೂರ್ವಯೋಜಿತ ಸಭೆಗಳಲ್ಲಿ ತಪ್ಪದೆ ಭಾಗವಹಿಸಬೇಕು. ಚುನಾವಣಾ ಆಯೋಗ ನೀಡಿರುವ ನಿಯಮಗಳ ಪಾಲನೆಗೆ ಆದ್ಯತೆ ನೀಡಬೇಕು. ಯಾವುದೇ ಹಂತದಲ್ಲೂ ಲೋಪವಾಗದಂತೆ ಜಾಗೃತೆ ವಹಿಸಬೇಕೆಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ, ಜಿಲ್ಲಾ ಯೋಜನಾಧಿಕಾರಿ ರಾಜಶೇಖರ್ ತಿಳಿಸಿದರು.
ಅವರು, ಗುರುವಾರ ಮಧ್ಯಾಹ್ನ ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆಗಾಗಿ ಈಗಾಗಲೇ ನಿಯೋಜಿಸಿದ ಸೆಕ್ಟರ್ ಅಧಿಕಾರಿ ಮತ್ತು ಚುನಾವಣಾ ಶಾಖಾ ಸಿಬ್ಬಂದಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಲೋಕಸಭಾ ಚುನಾವಣೆ ಕುರಿತಂತೆ ಈಗಾಗಲೇ ರಾಜ್ಯ ಚುನಾವಣಾಧಿಕಾರಿಗಳು ಯಶಸ್ಸಿ ಚುನಾವಣೆ ನಡೆಸುವ ಹಿನ್ನೆಲ್ಲೆಯಲ್ಲಿ ಅನೇಕ ಸುತ್ತೋಲೆಗಳನ್ನು ರವಾನಿಸಿದ್ದು, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ನಡೆಸುವ ಕುರಿತು ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ.
ಯಾವುದೇ ಗಳಿಗೆಯಲ್ಲಾದರೂ ಚುನಾವಣೆ ದಿನಾಂಕ ಮತ್ತು ನೀತಿ ಸಂಹಿತೆ ಪ್ರಕಟವಾಗಬಹುದು. ಈ ಹಿನ್ನೆಲೆಯಲ್ಲಿ ಚುನಾವಣೆ ಕರ್ತವ್ಯಕ್ಕೆ ಈಗಾಗಲೇ ನಿಯೋಜನೆಗೊಂಡ ಎಲ್ಲಾ ಅಧಿಕಾರಿಗಳು ಸೂಚನೆಗಳನ್ನು ಪಾಲಿಸುವಲ್ಲಿ ಹೆಚ್ಚು ಗಮನಹರಿಸಬೇಕು. ಚುನಾವಣೆಯ ಕರ್ತವ್ಯದಲ್ಲಿ ನಿರ್ಲಕ್ಷತೋರುವುದು ಸರಿಯಲ್ಲವೆಂದರು.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾತನಾಡಿ, ಈಗಾಗಲೇ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 259 ಭೂತ್‍ಗಳನ್ನು ನಿಗದಿಗೊಳಿಸಲಾಗಿದೆ. ಕಳೆದ ಬಾರಿ 251ಇದ್ದು ಈ ಬಾರಿ 8 ಕಡೆ ಸಾರ್ವಜನಿಕ ಮನವಿ ಮೇರೆಗೆ ಹೆಚ್ಚುವರಿ ಭೂತ್‍ಗಳನ್ನು ತೆರೆಯಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1000ಕ್ಕೂ ಹೆಚ್ಚು ಭೂತ್‍ಗಳನ್ನು ವಿಂಗಡಿಸಲಾಗಿದೆ. ಅಂಗವಿಕಲ ಮತ್ತು ಮಹಿಳಾ ಮತದಾರರಿಗೆ ಪತ್ಯೇಕ ವ್ಯವಸ್ಥೆ ಮಾಡುವ ಯೋಜನೆ ಇದೆ ಎಂದರು.
ಸಭೆಯಲ್ಲಿ ಉಪ ಕೃಷಿ ನಿರ್ದೇಶಕಿ ಡಾ.ಸುಜಾತರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ಕೃಷಿ ಅಧಿಕಾರಿ ಮಾರುತಿ, ಸಿಡಿಪಿಒ ಗಿರಿಜಾಂಬ, ಎಸ್ಟಿ ಕಲ್ಯಾಣಾಧಿಕಾರಿ ಮಾಲತಿ, ಬಿಸಿಎಂ ಅಧಿಕಾರಿ ಜಗನ್ನಾಥ, ಸಮಾಜ ಕಲ್ಯಾಣಾಧಿಕಾರಿ ಮಂಜಪ್ಪ, ಕೃಷಿ ಅಧಿಕಾರಿ ಮಾರುತಿ, ಪರಿಸರ ಮತ್ತು ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು, ವಿನಯ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
