ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬದಲು ತಾಲ್ಲೂಕು ಸಮ್ಮೇಳನ

ತುರುವೇಕೆರೆ

          ಕಸಾಪ ತಾಲ್ಲೂಕು ಘಟಕದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಕನ್ನಡ ಭವನ ಉದ್ಘಾಟನಾ ಸಮಾರಂಭದ ಜೊತೆ ಜಿಲ್ಲಾ ಸಮ್ಮೇಳನದ ಬದಲು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಿರುವುದಾಗಿ ಶಾಸಕ ಮಸಾಲಾಜಯರಾಂ ತಿಳಿಸಿದರು.

         ಪಟ್ಟಣದ ಜೆ.ಪಿ. ಶಾಲಾ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಸರ್ವಸದಸ್ಯರ ಸಭೆಯಲ್ಲಿ ತೀರ್ಮಾನವಾದ ನಂತರ ಅವರು, ಪತ್ರಿಕಾ ಗೋಷ್ಠಿಯಲ್ಲಿ ಕನ್ನಡ ಭವನದ ಉದ್ಘಾಟನೆಯ ಜೊತೆಗೆ ಈ ಹಿಂದೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಯೋಜಿಸಲಾಗಿತ್ತು. ಆದರೆ ತಾಲ್ಲೂಕಿನಲ್ಲಿ ಬರ, ಸಂಪನ್ಮೂಲಗಳ ಕೊರತೆ ಹಾಗೂ ಸಮಯದ ಅಭಾವದಿಂದ ಜಿಲ್ಲಾ ಸಮ್ಮೇಳನದ ಬದಲು ತಾಲ್ಲೂಕು ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಈ ಹಿಂದೆ ಪ್ರಕಟಿಸಿದ್ದಂತೆ 2019 ರ ಜನವರಿ 30 ಮತ್ತು 31 ರಂದು ಕನ್ನಡ ಭವನದ ಉದ್ಘಾಟನೆಯ ಜೊತೆಗೆ ವೈಭವದಿಂದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದರು.

        ಮಾಯಸಂದ್ರ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಎನ್.ಆರ್.ಜಯರಾಮ್ ಮಾತನಾಡಿ, ಬರದ ಪರಿಸ್ಥಿತಿ ಹಾಗೂ ಶಾಲಾ ಕಾಲೇಜುಗಳ ಪರೀಕ್ಷೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ತಾಲ್ಲೂಕು ಸಮ್ಮೇಳನ ಮಾಡುವುದೇ ಸೂಕ್ತವಾಗಿದೆ. ಜಿಲ್ಲಾ ಪಂಚಾಯಿತ್ ವತಿಯಿಂದ ನಾಲ್ಕೂ ಕ್ಷೇತ್ರಗಳಿಂದ ಒಟ್ಟಾರೆ ರೂ. 6 ಲಕ್ಷ ಅನುದಾನ ಈಗಾಗಲೇ ಬಿಡುಗಡೆಯಾಗಿದೆ. ಅದನ್ನು ತಾಲ್ಲೂಕು ಸಮ್ಮೇಳನಕ್ಕೆ ಬಳಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು

         ಜೆ.ಪಿ.ವಿದ್ಯಾಸಂಸ್ಥೆಯ ಅಧ್ಯಕ್ಷ ಹೊಸಳ್ಳಿ ವಿಶ್ವೇಶ್ವರಯ್ಯ ಮಾತನಾಡಿ, ನೌಕರರ ಜೊತೆಗೆ ಸಾಮಾನ್ಯರೂ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ತಾಲ್ಲೂಕು ಸಮ್ಮೇಳನ ತಾಲ್ಲೂಕಿನ ಸಾಂಸ್ಕøತಿಕ ಹಾಗೂ ಸಾರಸ್ವತ ವೈಭವವನ್ನು ಬಿಂಬಿಸುವಂತಿರಬೇಕು ಎಂಬ ಆಶಯ ವ್ಯಕ್ತಪಡಿಸಿದರು.

           ಸಭೆಯ ಅಧ್ಯಕ್ಷತೆ ವಹಿಸಿದ್ದ ನಂ.ರಾಜು ಕನ್ನಡ ಭವನ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಸಮ್ಮೇಳನವನ್ನೂ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ನಿಕಟಪೂರ್ವ ಅಧ್ಯಕ್ಷ ಸಾ.ಶಿ.ದೇವರಾಜ್ ತಮ್ಮ ಅವಧಿಯಲ್ಲಿ ನಡೆದ ಜಿಲ್ಲಾ ಸಮ್ಮೇಳನದ ಅನುಭವಗಳನ್ನು ಹಂಚಿಕೊಂಡರು. ಗೌರವ ಅಧ್ಯಕ್ಷ ಪ್ರೊ. ಕೆ.ಪುಟ್ಟರಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಭವನದ ಉದ್ಘಾಟನೆಯ ಜೊತೆಗೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಭೆ ಒಕ್ಕೊರಲಿಂದ ಅನುಮೋದನೆ ನೀಡಿತು. ಇದೇ ಸಂದರ್ಭದಲ್ಲಿ ಕಸಾಪ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.

           ಸಭೆಯಲ್ಲಿ ಬಿಜೆಪಿ ತಾ. ಅಧ್ಯಕ್ಷ ದುಂಡ ರೇಣುಕಪ್ಪ, ಮುಖಂಡ ಕೊಂಡಜ್ಜಿ ವಿಶ್ವನಾಥ್, ತಾ.ಪಂ.ಉಪಾಧ್ಯಕ್ಷ ನಂಜೆಗೌಡ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯಕ್, ಸಾಹಿತಿ ತುರುವೇಕೆರೆಪ್ರಸಾದ್, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ, ರಾಮಚಂದ್ರು. ಶಿವಯ್ಯ, ರಂಗಕಲಾವಿದ ಹುಲಿಕಲ್ ನಾಗರಾಜ್, ನಗರ ಕಸಾಪ ಘಟಕದ ಅಧ್ಯಕ್ಷ ಗಂಗಾಧರ ದೇವರ ಮನೆ, ಚಿದಂಬರೇಶ್ವರ ಗ್ರಂಥಾಲಯದ ಸಂಸ್ಥಾಪಕ ರಾಮಚಂದ್ರ, ಹೋಬಳಿವಾರು ಕಸಾಪ ಘಟಕದ ಅಧ್ಯಕ್ಷರುಗಳಾದ ಕಸಬಾದ ಬುಗುಡನಹಳ್ಳಿ ಕೃಷ್ಣಮೂರ್ತಿ, ದಂಡಿನಶಿವರ ಭೋಜರಾಜ್, ಆನಂದ ವಾಡೇಕರ್, ಗಂಗಾಧರ್ ಅಮ್ಮಸಂದ್ರ, ಜಿ.ಪಂ.ಮಾಜಿ ಸದಸ್ಯೆ ಲೀಲಾವತಿ ಗಿಡ್ಡಯ್ಯ, ಪ್ರವೀಣ್ ಕುಮಾರಿ, ಗುರುಸಿದ್ಧಮ್ಮ, ಕಾರ್ಯದರ್ಶಿ ನಟೇಶ್, ಪ್ರಕಾಶ್, ಎಸ್.ಎಂ.ಕುಮಾರಸ್ವಾಮಿ, ಬಸವರಾಜು, ಕಾಂತರಾಜ್ ಇತರರು ಭಾಗವಹಿಸಿದ್ದರು. ಕಾರ್ಯದರ್ಶಿ ಚಂದ್ರಯ್ಯ ಸ್ವಾಗತಿಸಿ, ಅಶೋಕ್ ನಿರೂಪಿಸಿ, ದಿನೇಶ್ ವಂದಿಸಿದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap