ಚಳ್ಳಕೆರೆ
ಕಳೆದ ಹಲವಾರು ವರ್ಷಗಳಿಂದ ತಾಲ್ಲೂಕಿನಾದ್ಯಂತ ಮಳೆಯಿಲ್ಲದೆ ರೈತರು ಹಾಗೂ ಜಾನುವಾರುಗಳು ಮಳೆ ಮತ್ತು ಮೇವಿಲ್ಲದೆ ಪರಿತಪಿಸುತ್ತಿದ್ದು, ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದ್ದರೂ ಸಹ ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಯೋಜನೆಯನ್ನು ಕೈಗೊಳ್ಳದೇ ಜನರು ನಿರಾಸರಾಗಿದ್ದು, ಕೂಡಲೇ ಜಿಲ್ಲಾ ಆಡಳಿತ ಜಾನುವಾರುಗಳ ಉಳಿವಿಗಾಗಿ ತಕ್ಷಣವೇ ಗೋಶಾಲೆಗಳನ್ನು ಪ್ರಾರಂಭಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ಧಾರೆ.
ಅವರು ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿ, ಪ್ರಸ್ತುತ ವರ್ಷವೂ ಸಹ ಮಳೆಯಿಲ್ಲದೆ ಎಲ್ಲೂ ಸಹ ರೈತರು ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ. ಅಕ್ರಮ ಮರಳು ದಂಧೆ ಹಿನ್ನೆಲೆಯಲ್ಲಿ ತಾಲ್ಲೂಕಿನ ಏಕೈಕ ವೇದಾವತಿ ನದಿ ಪಾತ್ರವೂ ಸಹ ಬತ್ತಿ ಹೋಗಿದ್ದು, ಆ ಭಾಗದ ಎಲ್ಲಾ ತೋಟಗಳು ಒಣಗಿ ತೋಟದಲ್ಲಿದ್ದ ತೆಂಗು, ಅಡಿಕೆ, ಬಾಳೆ ಹಾಗೂ ಇತರೆ ಎಲ್ಲಾ ಆರ್ಥಿಕ ಬೆಳೆಗಳು ನೆಲಕ್ಕಚಿವೆ.
ವಿಶೇಷವಾಗಿ ಜಾನುವಾರುಗಳನ್ನೇ ನಂಬಿಕೊಂಡು ಬದುಕು ರೂಪಿಸಿಕೊಂಡಿರುವ ಸಾವಿರಾರು ರೈತರು ತಮ್ಮ ಜಾನುವಾರುಗಳಿಗೆ ಮೇವು ಹಾಗೂ ನೀರು ಪೂರೈಸಲು ಸಹ ಸಾಧ್ಯವಾಗುತ್ತಿಲ್ಲ. ರೈತರಿಗೆ ತಮ್ಮ ಭೂಮಿಯನ್ನು ಹಸನುಗೊಳಿಸಿಕೊಳ್ಳಲು ಎತ್ತುಗಳೇ ಆಧಾರವಾಗಿದ್ದು, ಅಂತಹ ಎತ್ತುಗಳ ಸಹ ಮೇವು ನೀರಿಲ್ಲದೆ ಸಾವಿನ ದವಡೆಯಲ್ಲಿದ್ದು, ಎತ್ತುಗಳನ್ನು ಕಾಪಾಡಲು ರೈತರಿಗೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ರೈತರ ಜಾನುವಾರುಗಳ ಸಂರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕಿದೆ.
ತಾಲ್ಲೂಕಿನ ಸಾಣೀಕೆರೆ, ಚೌಳೂರು ಗೇಟ್, ದೊಡ್ಡ ಉಳ್ಳಾರ್ತಿ, ಕುದಾಪುರ, ಗೊರ್ಲಕಟ್ಟೆ, ಕಾಲುವೇಹಳ್ಳಿ, ಹಿರೇಹಳ್ಳಿ ಕಾವಲ್ ಮುಂತಾದ ಪ್ರದೇಶಗಳಲ್ಲಿ ಕೂಡಲೇ ಗೋಶಾಲೆಯನ್ನು ಪ್ರಾರಂಭಿಸಬೇಕಿದೆ. ಚಳ್ಳಕೆರೆ ತಾಲ್ಲೂಕಿನ ಪ್ರತಿ ಹೋಬಳಿ ಕೇಂದ್ರಗಳಲ್ಲಿ ಮೇವು ಬ್ಯಾಂಕ್ ಆರಂಭಿಸಬೇಕಿದೆ, ತಾಲ್ಲೂಕಿನಾದ್ಯಂತ ಲಕ್ಷ ಲಕ್ಷ ಸಂಖ್ಯೆಯಲ್ಲಿರುವ ಜಾನುವಾರುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆಯನ್ನು ಜಿಲ್ಲಾ ಆಡಳಿತ ತ್ವರಿತಗತಿಯಲ್ಲಿ ಮಾಡಬೇಕು.
ತಾಲ್ಲೂಕಿನಾದ್ಯಂತ ಜಾನುವಾರುಗಳ ಸಂಕಷ್ಟವನ್ನು ಖುದ್ದಾಗಿ ಪರಿಶೀಲಿಸಲು ಜಿಲ್ಲಾಧಿಕಾರಿಗಳೇ ನೇವರಾಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿಯನ್ನು ನೀಡಿ ಕೂಡಲೇ ಗೋಶಾಲೆ ಪ್ರಾರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಈಗಾಗಲೇ ಲೋಕಸಭಾ ಚುನಾವಣೆ ಕಾರ್ಯ ಮುಗಿದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತ ರೈತರು ಮತ್ತು ಜಾನುವಾರಗಳ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹ ಪಡಿಸಿದ್ದಾರೆ.
ಈಗಾಗಲೇ ಈ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಮುಂಗಾರು ಬಿತ್ತನೆಗೆ ಬೀಜ ಹಾಗೂ ಗೊಬ್ಬರವನ್ನು ಸರ್ಕಾರ ರೈತರಿಗೆ ಉಚಿತವಾಗಿ ವಿತರಿಸಬೇಕು, ರೈತರಿಗೆ ಬ್ಯಾಂಕ್‍ಗಳಿಂದ 2 ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ನೀಡಬೇಕು, ಕಳೆದ ವರ್ಷದ ಬೆಳೆ ನಸ್ಟ ಇನ್‍ಪುಟ್ ಸಬ್ಸಿಡಿ ಮತ್ತು ಬೆಳೆ ವಿಮೆ ಕಂಪನಿಯಿಂದ ರೈತರಿಗೆ ಸಂದಾಯವಾಗಬೇಕಾದ ಹಣವನ್ನು ಕೂಡಲೇ ರೈತರ ಖಾತೆಗೆ ಜಮಾವಾಗುವಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ರೈತರಿಗೆ ನೀಡಿದ ವಾಗ್ದಾನದಂತೆ ಖಾಸಗಿ ಕಂಪನಿಗಳು ಬೆಳೆ ವಿಮೆ ಹಣವನ್ನು ಕೂಡಲೇ ಪಾವತಿಸಬೇಕು, ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದ್ದರೂ ಗ್ರಾಮೀಣ ಭಾಗದಲ್ಲಿ ಇದುವರೆಗೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕಾಮಗಾರಿಗಳು ಇನ್ನೂ ಅನುಷ್ಠಾನಗೊಳಿಸಲಾಗುತ್ತಿಲ್ಲ. ತಾಲ್ಲೂಕಿನ ಬಹುತೇಕ ಕೆರೆಗಳು ಹೂಳು ತುಂಬಿದ್ದು ಅವುಗಳ ಅಭಿವೃದ್ಧಿಗೆ ಜಿಲ್ಲಾಡಳಿತ ಪ್ರಯತ್ನಿಸಿಲ್ಲ. ಈ ಹಿನ್ನೆಲೆಯಲ್ಲಿ ಏ. 30ರೊಳಗೆ ಜಿಲ್ಲಾಧಿಕಾರಿಗಳು ಸಭೆ ಕರೆದು ರೈತರ ಸಂಕಷ್ಟಗಳು ಹಾಗೂ ಗೋಶಾಲೆ ಪ್ರಾರಂಭಕ್ಕೆ ಸೂಕ್ತ ತೀರ್ಮಾನ ಕೈಗೊಳ್ಳದಿದ್ದಲ್ಲಿ ರೈತ ಸಂಘ ಹೋರಾಟ ನಡೆಸುವ ಎಚ್ಚರಿಕೆಯನ್ನು ಭೂತಯ್ಯ ನೀಡಿದ್ಧಾರೆ.