ಬೆಂಗಳೂರು
ಪ್ರಸಕ್ತ ಐಪಿಎಲ್‍ನಲ್ಲಿ ಸೋತ ತಂಡಗಳು ಗುರುವಾರ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್‍ಗೆ ಮಹತ್ವದಾಗಿದೆ. ಉಭಯ ತಂಡಗಳು ಗೆಲುವಿನ ರಣ ತಂತ್ರವನ್ನು ಹೆಣೆದುಕೊಂಡಿವೆ.
ಟೀಮ್ ಇಂಡಿಯಾದ ನಾಯಕ ಹಾಗೂ ಉಪನಾಯಕರ ನಡುವಿನ ಕಾದಾಟವನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ವಿರಾಟ್ ಕೊಹ್ಲಿ ಸೈನ್ಯ ಎರಡನೇ ಪಂದ್ಯದಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡಿ ಗೆಲುವಿನ ಕೇಕೆ ಹಾಕುವ ಪ್ಲಾನ್ ಮಾಡಿಕೊಂಡಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಮುಂಬೈ ಇಂಡಿಯನ್ಸ್ ಬಲಿಷ್ಠವಾಗಿದೆ. ಎರಡೂ ತಂಡಗಳು ಸೋಲಿನ ನೋವನ್ನು ಮರೆಯಲು ಮೈದಾನಕ್ಕೆ ಎಂಟ್ರಿ ನೀಡಲಿವೆ.
ಮೊದಲ ಪಂದ್ಯದಲ್ಲಿ ಮಾಡಿದ ತಪ್ಪನಿಂದ ಪುಟಿದೇಳುವ ಅನಿವಾರ್ಯತೆ ವಿರಾಟ್ ಪಡೆಯದ್ದಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೀನಾಯ ಸೋಲು ಕಂಡಿದ್ದ ಆರ್.ಸಿ.ಬಿ ತಂಡ ಎರಡನೇ ಪಂದ್ಯದಲ್ಲಿ ಗೆಲುವಿನ ಕುದುರೆಯನ್ನು ಕಟ್ಟಿಹಾಕಲು ಪ್ಲಾನ್ ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ ಆರ್.ಸಿ.ಬಿಯ ಬ್ಯಾಟ್ಸ್ ಮನ್ಸ್ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದರು. ಬ್ಯಾಟಿಂಗ್ ಸ್ನೇಹಿ ಟ್ರ್ಯಾಕ್ ನಲ್ಲಿ ವಿರಾಟ್ ಬಾಯ್ಸ್ ಹೇಗೆ ಆಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ.
ಮೇಲ್ನೋಟಕ್ಕೆ ಆರ್.ಸಿ.ಬಿ ಬ್ಯಾಟಿಂಗ್ ಬಲಿಷ್ಠವಾಗಿದೆ. ಆದರೆ ಬ್ಯಾಟ್ಸ್ ಮನ್‍ಗಳು ಪಿಚ್ ನಲ್ಲಿ ಕೆಲ ಹೊತ್ತು ಕಳೆಯುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಬಿಗ್ ಸ್ಕೋರ್ ಕನಸು ನನಸಾಗುತ್ತದೆ. ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಶಿಮ್ರೊನ್ ಹೆಟ್ಮೆಯರ್ ಸಮಯೋಚಿತ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಇದೆ. ಆಲ್ ರೌಂಡರ್ ಗಳಾದ ಮೋಯಿನ್ ಅಲಿ, ಕಾಲಿನ್ ಡಿ ಗ್ರ್ಯಾಂಡ್ ಹೋಮ್ ನೈಜ ಆಟ ಆಡಿದರೂ ಗೆಲುವು ಸನಿಹವಾಗುತ್ತದೆ.
ವೇಗಿಗಳಾದ ನವದೀಪ್ ಸೈನಿ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಬಿಗುವಿನ ದಾಳಿ ನಡೆಸಿ, ಆರಂಭದಲ್ಲಿ ರನ್ ಗಳಿಗೆ ಕಡಿವಾಣ ಹಾಕಬೇಕಿದೆ. ಸ್ಪಿನ್ ಬೌಲರ್ ಗಳಾದ ಯಜುವೇಂದ್ರ ಚಹಾಲ್, ಮೋಯಿನ್ ಅಲಿ ಫಿರ್ಕಿ ಪ್ರದರ್ಶನ ನೀಡಬೇಕಿದೆ.
ಮೂರು ಬಾರಿ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಬಲಾಢ್ಯವಾಗಿದೆ. ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್ ತಂಡಕ್ಕೆ ಉತ್ತಮ ಆರಂಭ ನೀಡಬಲ್ಲರು. ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇವರನ್ನು ಬಿಟ್ಟರೆ ಕಾಣಿಸಿಕೊಳ್ಳುವವರೆ ಆಲ್ ರೌಂಡರ್‍ಗಳು. ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಯುವರಾಜ್ ಸಿಂಗ್, ಕಿರನ್ ಪೋಲಾರ್ಡ್, ಹಾರ್ದಿಕ್, ಕೃನಾಲ್ ಪಾಂಡ್ಯ, ಬೆನ್ ಕಟ್ಟಿಂಗ್ ಬೆಂಗಳೂರು ಯೋಜನೆಯನ್ನು ಬುಡಮೇಲು ಮಾಡಬಲ್ಲರು.
ಮೊದಲ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ರಸೀಕ್ ಸಲಾಮ್ ಈ ಪಂದ್ಯದಲ್ಲಿ ಅಖಾಡಕ್ಕಿಳಿದರೆ, ಶಿಸ್ತು ಬದ್ಧ ದಾಳಿ ನಡೆಸಬೇಕಿದೆ. ಮಿಚೆಲ್ ಮ್ಯಾಕ್ಲೆನ್ ಗನ್, ಜಸ್ಪ್ರಿತ್ ಬೂಮ್ರಾ ರನ್ ಗಳಿಗೆ ಕಡಿವಾಣ ಹಾಕಬೇಕು.