ಮಧುಗಿರಿ
ಶಿಕ್ಷಕ ದಂಪತಿ ಹಾಗೂ ಮಕ್ಕಳು ಕುಟುಂಬ ಸಮೇತ ಶಾಲೆ ಮುಗಿದ ಬಳಿಕ ಹಿಂದೂಪುರ ಹಾಗೂ ಮಧುಗಿರಿ ಮುಖ್ಯ ರಸ್ತೆಯಲ್ಲಿದ್ದಂತಹ ಗುಂಡಿಗಳನ್ನು ರಸ್ತೆ ಬದಿಯಲ್ಲಿದ್ದ ಮಣ್ಣು ಹಾಗೂ ಜಲ್ಲಿಯನ್ನು ಬಳಸಿ ರಸ್ತೆಯನ್ನು ಮುಚ್ಚಿ ಸಾರ್ವಜನಿಕ ಕಳಕಳಿ ತೋರಿದ್ದಾರೆ.
ತಾಲ್ಲೂಕಿನ ಪುರವರದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ದಂಪತಿ ತಮ್ಮ ಕುಟುಂಬ ಸಮೇತ ರಸ್ತೆಯಲ್ಲಿದ್ದ ಗುಂಡಿಗಳಿಗೆ ಮಣ್ಣು ಹಾಗೂ ಜಲ್ಲಿ ಹಾಕಿ ಮುಚ್ಚಿ ವಾಟ್ಸ್ ಆ್ಯಪ್ ಗ್ರೂಪ್‍ನಲ್ಲಿ ಹಂಚಿಕೊಂಡಿದ್ದಾರೆ. “ಆತ್ಮೀಯ ಸ್ನೇಹಿತರೆ ಈ ದಿನ ಶನಿವಾರ ಅರ್ಧ ಶಾಲೆ ಮುಗಿದ ನಂತರ ಫಣೀಂದ್ರನಾಥ್ ಹಾಗೂ ಇಂದ್ರಮ್ಮ ಶಿಕ್ಷಕ ದಂಪತಿ ಹಾಗೂ ನಮ್ಮ ಮಕ್ಕಳು ಸಿರಿ, ಕಲ್ಯಾಣ್ ಮಧ್ಯಾಹ್ನ ರಜೆ ಪ್ರಯುಕ್ತ ಮಧುಗಿರಿಯಿಂದ ಹಿಂದೂಪುರ ರಸ್ತೆಯ ದೊಡ್ಡ ದೊಡ್ಡ ಗುಂಡಿಗಳನ್ನು ಮುಚ್ಚುವ ಕಾರ್ಯದಲ್ಲಿ ತೊಡಗಿರುವುದು.
ಕಾರಣ ನೂರಾರು ಜನ ಓಡಾಡುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ಹಲವಾರು ಜನ ಕೈ ಕಾಲು ಮುರಿದು ಕೊಂಡಿರುತ್ತಾರೆ. ಆದರೂ ಸಹ ಕೆಲವರು ನೋಡಿಕೊಂಡು ಹಾಗೆ ಹೋಗುತ್ತಾರೆ. ಸರಿಪಡಿಸುವ ಕೆಲಸಕ್ಕೆ ಮುಂದಾಗಲ್ಲ. ಸರ್ಕಾರದ ಅನುದಾನವನ್ನು ಕಾಯದೆ ನಮ್ಮ ಕೈಲಾದ ಸಮಾಜ ಮುಖಿ ಕಾರ್ಯ ಮಾಡಬೇಕೆಂಬ ಹಂಬಲ ನನ್ನದು.
ಇದಕ್ಕೆ ಸಾಥ್ ನೀಡಿದ ನನ್ನ ಧರ್ಮ ಪತ್ನಿ ಹಾಗೂ ಮಕ್ಕಳು ಹಾಗೂ ಸ್ನೇಹಿತರಿಗೆ ಧನ್ಯವಾದಗಳು. ದಯಮಾಡಿ ನಮ್ಮ ಕೈಲಾದ ಸಮಾಜ ಮುಖಿ ಕಿರು ಸಹಕಾರ ಸಹಾಯ ಮಾಡಲು ಸಿದ್ಧ. ಇದೇ ರೀತಿಯ ರಸ್ತೆ ಗುಂಡಿ ಸಮಸ್ಯೆಗಳು ಮಧುಗಿರಿ ತಾಲ್ಲೂಕಿನಲ್ಲಿ ಇದ್ದರೆ, ದಯಮಾಡಿ ತಿಳಿಸಿ ರಜಾ ದಿನಗಳಂದು ಬಂದು ಅಲ್ಲೇ ಇರುವ ಮಣ್ಣು ಮತ್ತು ಜಲ್ಲಿ ಸೇರಿಸಿ ಸರಿಪಡಿಸುವ ಕೆಲಸ ಮಾಡಲಾಗುವುದು. ಇಂತಿ ತಮ್ಮವ ಫಣೀಂದ್ರನಾಥ್’’ ಎಂದು ತಮ್ಮದೇ ಸಾಮಾಜಿಕ ಜಾಲತಾಣದÀಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಫಣೀಂದ್ರನಾಥ್ ದೂರವಾಣಿಯಲ್ಲಿ ಮಾತನಾಡಿ, ಕೆಲ ದಿನಗಳ ಹಿಂದೆ ಶಿಕ್ಷಕರಾದ ಹೊನ್ನೇಶ್ ಎನ್ನುವವರು ನನ್ನ ಕಣ್ಣು ಮುಂದೆಯೇ ಇದೇ ರಸ್ತೆಯಲ್ಲಿನ ಗುಂಡಿಗೆ ಬಿದ್ದು ಘಾಯಗೊಂಡಿದ್ದಾರೆ. ಮನಸ್ಸಿಗೆ ಬೇಸರವಾದ್ದರಿಂದ ನಾನು ಮತ್ತು ನಮ್ಮ ಕುಟುಂಬದವರು ಗುಂಡಿ ಮುಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
