ಚಳ್ಳಕೆರೆ
ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಶಿಕ್ಷಣವನ್ನೇ ಅವಲಂಬಿಸಬೇಕಿದೆ. ನಾವು ಪಡೆಯುವ ಶಿಕ್ಷಣ ನಮ್ಮ ಉತ್ತಮ ಬದುಕನ್ನು ರೂಪಿಸಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ತನ್ನದೇಯಾದ ಗುರಿಯನ್ನು ಹೊಂದಿದ್ದು, ಈ ಗುರಿ ಸಾಧನೆಗೆ ಗುರುವನ್ನೇ ಅಲಂಬಿಸುತ್ತಾನೆ. ಆದ್ದರಿಂದ ಶಿಕ್ಷಣ ನೀಡುವ ಕಾರ್ಯ ಮತ್ತು ಶಿಕ್ಷಕ ವೃತ್ತ ಪವಿತ್ರ ಕಾರ್ಯಗಳಾಗಿವೆ ಎಂದು ಬಿಎಂಜಿಎಚ್‍ಎಸ್ ಮುಖ್ಯೋಪಾಧ್ಯಾಯ ಇ.ಸಂಪತ್‍ಕುಮಾರ್ ತಿಳಿಸಿದರು.
ಅವರು, ಶುಕ್ರವಾರ ಇಲ್ಲಿನ ಎನ್.ಜಯಣ್ಣ ಬಿಇಡಿ ಕಾಲೇಜಿನಲ್ಲಿ ದ್ವಿತೀಯ ಪ್ರಶಿಕ್ಷಣಾರ್ಧಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡಿಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಶಿಕ್ಷಣಾರ್ಧಿಗಳು ತಮ್ಮ ಶಿಕ್ಷಣವನ್ನು ಪೂರೈಸಿ ಹೊಸ ಬದುಕನ್ನು ಅರಿಸುವತ್ತ ಗಮನ ನೀಡುತ್ತಿದ್ಧಾರೆ. ನೀವು ಇಲ್ಲಿ ಕಲಿತ ಗುಣಾತ್ಮಕ ಶಿಕ್ಷಣದಿಂದ ನಿಮ್ಮ ವೈಭವದ ಬದುಕು ಪ್ರಾರಂಭವಾಗುತ್ತದೆ. ನಮ್ಮ ಎಲ್ಲಾ ರೀತಿಯ ಅಭಿವೃದ್ಧಿ ಪರ ಹೆಜ್ಜೆಗಳಿಗೆ ನಾವು ಪಡೆದ ಶಿಕ್ಷಣವೇ ಕಾರಣ. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಗುರಿಯ ಈಡೇರಿಕೆಗೆ ಗುರುವಿನ ಬಲವಿದ್ದರೆ ಮಾತ್ರ ಸಾಧ್ಯ.
ಅದ್ದರಿಂದ ಪ್ರತಿಯೊಬ್ಬರೂ ತಮಗೆ ಜ್ಞಾನವನ್ನು ನೀಡಿದ ಗುರುಗಳನ್ನು ಗೌರವಿಸುವತ್ತ ಮುನ್ನಡೆಯಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲ ಕೆ.ಟೀಪು, ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಅಂಕಗಳನ್ನು ಗಳಿಸುವತ್ತ ಗಮನ ನೀಡಬೇಕು.
ಶಿಕ್ಷಣ ನೀಡುವಾಗ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಹ ಅರ್ಥವಾಗುವ ರೀತಿಯಲ್ಲಿ ಬೋಧನೆಯನ್ನು ಕೈಗೊಳ್ಳಲಾಗುತ್ತದೆ. ಶಿಕ್ಷಣ ನೀಡುವ ಹಂತದಲ್ಲಿ ಯಾವುದೇ ರೀತಿಯ ಭೇದಭಾವವನ್ನು ಯಾವ ಶಿಕ್ಷಕನೂ ಮಾಡುವುದಿಲ್ಲ. ವಿದ್ಯಾರ್ಥಿ ಪರೀಕ್ಷೆಯಲ್ಲಿ ಅನುತೀರ್ಣನಾಗುತ್ತಾನೆಂದರೆ ಅದು ಅವನ ನಿರಾಸಕ್ತಿಯನ್ನು ತೋರಿಸುತ್ತದೆ. ವಿದ್ಯಾರ್ಥಿಯ ಪ್ರಗತಿಯಲ್ಲಿ ಶಿಕ್ಷಕನೇ ಪ್ರಮುಖ ಪಾತ್ರವಹಿಸುತ್ತಾನೆಂದರು. ಕಾರ್ಯಕ್ರಮವನ್ನು ಉದ್ದೇಶಿಸಿ ಕಾರ್ಯದರ್ಶಿ ಎಂ.ಆರ್.ನಾರಾಯಣಪ್ಪ, ಮುಖ್ಯ ಶಿಕ್ಷಕಿ ಡಿ.ಆರ್.ಪ್ರಮೀಳಾ ಮಾತನಾಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಚ್.ಮಂಜುನಾಥ್, ಜಿ.ಆರ್.ಸತೀಶ್, ದೊರೆಸ್ವಾಮಿ, ರವಿಕುಮಾರ್, ಹೆಮಂತ್‍ರಾಜು, ರೂಪ, ವಿಜಯಲಕ್ಷ್ಮೀ, ವಾಣಿ, ತಿಪ್ಪಾರೆಡ್ಡಿ, ವಿಶ್ವನಾಥ್, ರಾಘವೇಂದ್ರನಾಯಕ ಮುಂತಾದವರು ಉಪಸ್ಥಿತರಿದ್ದರು.