ನವೆಂಬರ್ 29 ರಿಂದ ತಾಂತ್ರಿಕ ಸಮ್ಮೇಳನ

ಬೆಂಗಳೂರು

           ರೋಬೋಟ್ ತಂತ್ರಜ್ಞಾನವೂ ಸೇರಿದಂತೆ ಜಗತ್ತಿನಲ್ಲಿ ಆಗಿರುವ ವಿವಿಧ ಅವಿಷ್ಕಾರಗಳ ಪ್ರಯೋಜನ ರಾಜ್ಯಕ್ಕೂ ಲಭ್ಯವಾಗಬೇಕು ಎಂಬ ಕಾರಣದಿಂದ ಸರ್ಕಾರ ನವೆಂಬರ್ 29 ರಿಂದ ತಾಂತ್ರಿಕ ಸಮ್ಮೇಳನ ನಡೆಸಲಿದೆ.

           ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 29 ರಂದು ಆರಂಭವಾಗಲಿರುವ ತಾಂತ್ರಿಕ ಸಮ್ಮೇಳನ ಡಿಸೆಂಬರ್ 1 ರವರೆಗೆ ನಡೆಯಲಿದ್ದು ಜಪಾನ್, ಫ್ರಾನ್ಸ್, ಚೆಕೊಸ್ಲೋವಾಕಿಯಾ, ಜರ್ಮನಿ, ಫಿನ್‍ಲ್ಯಾಂಡ್ ಸೇರಿದಂತೆ ಜಗತ್ತಿನ ವಿವಿಧ ದೇಶಗಳು ಈ ತಾಂತ್ರಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿವೆ ಎಂದು ಭಾರೀ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

        ಸುದ್ದಿಗೋಷ್ಟಿಯ ಮಾತನಾಡಿದ ಅವರು, ಎಲೆಕ್ಟ್ರಿಕಲ್ ವಾಹನಗಳು, ರೋಬೋಟ್‍ಗಳು ಸೇರಿದಂತೆ ವಿವಿಧ ಅವಿಷ್ಕಾರಗಳು ಈಗಾಗಲೇ ಜಗತ್ತಿನ ವಿವಿದೆಡೆ ಆಗಿದ್ದು ಅದರ ಪ್ರಯೋಜನ ರಾಜ್ಯಕ್ಕೂ ಆಗಲಿ ಎಂಬುದು ಸರ್ಕಾರದ ಉದ್ದೇಶ ಎಂದರು.

         ಈ ನೂತನ ಅವಿಷ್ಕಾರಗಳ ಮೂಲಕ ನಡೆಯುತ್ತಿರುವ ಉತ್ಪನ್ನಗಳ ಘಟಕಗಳು ರಾಜ್ಯದಲ್ಲೂ ಆರಂಭವಾಗಬೇಕು. ಆ ಮೂಲಕ ಜನರಿಗೆ ಅನುಕೂಲವಾಗಬೇಕು ಎಂಬುದು ತಮ್ಮ ಉದ್ದೇಶ ಎಂದರು.

         ಸಮಾವೇಶದಲ್ಲಿ ಮೂರು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದು ಅದೇ ಕಾಲಕ್ಕೆ ಇನ್ನೂರಕ್ಕೂ ಹೆಚ್ಚು ಸ್ಟಾರ್ಟ್ ಅಪ್‍ಗಳು ಪಾಲ್ಗೊಳ್ಳಲಿವೆ. ಸ್ಟಾರ್ಟ್ ಅಪ್‍ಗಳು ಮತ್ತಷ್ಟು ಆಧುನೀಕರಣಗೊಳ್ಳುವುದರ ಜತೆಗೆ ಬಂಡವಾಳದಲ್ಲಿ ಪಾಲುದಾರಿಕೆಯನ್ನು ಪಡೆಯಲು ಸಾಧ್ಯವಾಗಬೇಕು ಎಂಬುದು ಸಮ್ಮೇಳನದ ಮುಖ್ಯ ಉದ್ದೇಶಗಳಲ್ಲೊಂದು ಎಂದರು.

        ತಾಂತ್ರಿಕ ಸಮ್ಮೇಳನದ ಸಂದರ್ಭದಲ್ಲಿ ಅತ್ಯಾಧುನಿಕ ಡ್ರೋನ್ ರೇಸಿಂಗ್ ನಡೆಯಲಿದ್ದು ಇದರಲ್ಲಿ ಭಾಗವಹಿಸಲು ಡ್ರೋನ್ ಪೈಲಟ್‍ಗಳು ಅಪಾರ ಉತ್ಸಾಹ ತೋರಿಸಿದ್ದಾರೆ ಎಂದು ಹೇಳಿದರು.ಐಟಿ ವಲಯದಲ್ಲಿ ಮರು ಅನ್ವೇಷಣೆ ಎಂಬುದು ನಿರಂತರ ಕ್ರಿಯೆಯಾಗಿದ್ದು ಈ ವಿಷಯದಲ್ಲಿ ಈಗಿರುವ ಜಾಲ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿವರ ನೀಡಿದರು.

          ಈ ಮಧ್ಯೆ ಮೈಸೂರಿನಲ್ಲಿ ಏಷ್ಯನ್ ಪೇಂಟ್ಸ್ ಘಟಕ ಸಧ್ಯದಲ್ಲೇ ಪ್ರಾರಂಭವಾಗಲಿದ್ದು ಇದೇ ರೀತಿ ರಾಜ್ಯದ ಹಲವು ಕಡೆ ವಿವಿಧ ಕೈಗಾರಿಕೆಗಳು ಆರಂಭವಾಗಲಿವೆ.ಆ ಮೂಲಕ ರಾಜ್ಯದ ಆರ್ಥಿಕ ಚಿತ್ರಣ ಬದಲಾಗಲಿದೆ ಎಂದು ಹೇಳಿದರು.ಕಬ್ಬು ಬೆಳೆಗಾರರ ಬಾಕಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ತಮಗೆ ಇರುವ ಮಾಹಿತಿಯಂತೆ ಕಳೆದ ವರ್ಷದ ಮೂವತ್ತೆಂಟು ಕೋಟಿ ರೂ ಬಾಕಿ ಸೇರಿದಂತೆ ಒಟ್ಟು ಐವತ್ತೆಂಟು ಕೋಟಿ ರೂಪಾಯಿಗಳನ್ನು ರೈತರಿಗೆ ಕೊಡಿಸಬೇಕಿದೆ.ಎರಡು ಸಾವಿರ ಕೋಟಿ ರೂಗಳಷ್ಟು ಬಾಕಿ ಇದೆ ಎಂಬುದು ಸುಳ್ಳು.ಆದರೂ ಆ ಕುರಿತು ಸೂಕ್ತ ಮಾಹಿತಿ ಇದ್ದರೆ ಸರ್ಕಾರಕ್ಕೆ ಆ ಕುರಿತ ವಿವರವನ್ನು ರೈತರು ಕೊಡಲಿ.ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದರು.ಸುದ್ದಿಗೋಷ್ಟಿಯಲ್ಲಿ ಹಿರಿಯ ಅಧಿಕಾರಿಗಳು,ವಿವಿಧ ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ಹಲ ಪ್ರಮುಖರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link