ಬೆಂಗಳೂರು
ರಾಜ್ಯದ ವಿವಿಧ ಆನೆ ಶಿಬಿರಗಳಲ್ಲಿ ಆನೆಗಳ ಅಸ್ವಾಭಾವಿಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಚನೆಯಾಗಿದ್ದ ತಜ್ಞರ ಸಮಿತಿ ಹೈಕೋರ್ಟ್ ಗೆ ಮಂಗಳವಾರ ವಸ್ತುಸ್ಥಿತಿ ವರದಿ ಸಲ್ಲಿಸಿದೆ.ಸರ್ಕಾರ ರಚಿಸಿದ್ದ ಕೆ.ಎಂ.ಚಿನ್ನಪ್ಪ, ಎನ್ ವಿ ಕೆ ಅಶ್ರಫ್ ಮತ್ತು ಕಳೈವನ್ನನ್ ಅವರನ್ನೊಳಗೊಂಡ ಸಮಿತಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ನ್ಯಾಯಪೀಠಕ್ಕೆ ಈ ವರದಿ ಸಲ್ಲಿಸಿತು.
ರಾಜ್ಯದಲ್ಲಿ ತಜ್ಞರು, ರಾಜ್ಯದ ಆರು ಆನೆ ಶಿಬಿರಗಳಲ್ಲಿ ಮೂವರು ಪಶು ವೈದ್ಯರಿದ್ದಾರೆ. ಆದರೆ, ಅವರಿಗೆ ತಮ್ಮ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಲು ಅನುಕೂಲಕರವಾದ ಮೂಲ ಸೌಕರ್ಯ ಇಲ್ಲ. ಪ್ರಮುಖವಾಗಿ ಯಾವುದೇ ಶಸ್ತç ಚಿಕಿತ್ಸೆ ಸಾಧನಗಳು, ತುರ್ತು ಚಿಕಿತ್ಸಾ ಔಷಧ ಸಂಗ್ರಹಣಾ ವ್ಯವಸ್ಥೆ, ಔಷಧಿ ಸಂಗ್ರಹಿಸಿಡಲು ಶೈತ್ಯಾಗಾರಗಳು ಇಲ್ಲ ಎಂದು ಆರೋಪಿಸಿದ್ದಾರೆ.
ಬಂಡಿಪುರ ಹೊರತುಪಡಿಸಿ ಬೇರೆ ಆನೆ ಶಿಬಿರಗಳಲ್ಲಿ ಔಷಾಧಾಲಯಗಳಿಲ್ಲ. ವಾರ್ಷಿಕ ಬಜೆಟ್ ನಲ್ಲಿ ಆನೆಗಳ ಆರೋಗ್ಯ ರಕ್ಷಣೆಗೆ ನಿರ್ದಿಷ್ಟ ಅನುದಾನ ನಿಗದಿ ಮಾಡಿಲ್ಲ, ಯಾವುದೇ ವೈದ್ಯರಿಗೆ ಸಹಾಯಕರನ್ನು ನಿಯೋಜಿಸಿಲ್ಲ. ತುರ್ತು ಚಿಕಿತ್ಸೆಗಳಿಗೆ ಆನೆ ಶಿಬಿರಗಳಿಗೆ ಧಾವಿಸುವುದಕ್ಕೆ ವೈದ್ಯರಿಗೆ ಅನುಕೂಲಕರ ಪರಿಸ್ಥಿತಿ ಇಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಈ ವರದಿಯನ್ನು ಅಂಗೀಕರಿಸಿದ ನ್ಯಾಯಪೀಠ, ಸಮಿತಿ ನೀಡಿರುವ ಶಿಫಾರಸುಗಳನ್ನು ನ.21 ರೊಳಗೆ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿ ವಿಚಾರಣೆಯನ್ನು ಮುಂದೂಡಿದೆ.ರಾಜ್ಯದ ಅನೇಕ ಆನೆ ಶಿಬಿರಗಳಲ್ಲಿ ಆನೆಗಳು ಅಸ್ವಾಭಾವಿಕ ವಾಗಿ ಸಾವನ್ನಪ್ಪುತ್ತಿವೆ, ಅವುಗಳಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಿಲ್ಲ ಎಂದು ಆರೋಪಿಸಿ ವಕೀಲರಾದ ಅಮೃತೇಶ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
