ಬೆಂಗಳೂರು
ದೇಶದಲ್ಲಿ ಅತ್ಯಂತ ವೇಗವಾದ ಖಾಸಗಿ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತೇಜಸ್ ರೈಲು ಇನ್ನು ಕರ್ನಾಟಕದಲ್ಲಿಯೂ ಸಂಚಾರ ನಡೆಸಲು ಒಪ್ಪಿಗೆ ಸಿಕ್ಕಿದ್ದು, ಮಾರ್ಗವನ್ನು ಸಹ ಅಂತಿಮಗೊಳಿಸಲಾಗಿದೆ. ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಒಂದು ತೇಜಸ್ ರೈಲನ್ನು ಘೋಷಣೆ ಮಾಡಲಾಗಿತ್ತು.
ಈ ಬಗ್ಗೆ ಭಾರತೀಯ ರೈಲ್ವೆ ಅಧಿಕೃತ ಪ್ರಕಟಣೆ ಹೊರಡಿಸಿದೆ ಮತ್ತು ಇಲಾಖೆಯ ವೆಬ್ ಸೈಟ್‌ನಲ್ಲಿ ತೇಜಸ್ ರೈಲು ಸಂಚಾರ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ, ರೈಲು ಸೇವೆ ಯಾವಾಗ ಆರಂಭವಾಗಲಿದೆ? ಎಂಬುದನ್ನು ತಿಳಿಸಿಲ್ಲ.
ಖಾಸಗಿ ಸಹಭಾಗಿತ್ವದಲ್ಲಿ ರೈಲುಗಳ ಸಂಚಾರವನ್ನು ನಡೆಸಲು ಕೇಂದ್ರ ಸರ್ಕಾರ ತೇಜಸ್ ರೈಲುಗಳನ್ನು ಪರಿಚಯಿಸಿತ್ತು. ದೇಶದ ಮೊದಲ ತೇಜಸ್ ರೈಲು ದೆಹಲಿ-ಲಕ್ನೋ ಮಾರ್ಗದಲ್ಲಿ ಸಂಚಾರ ನಡೆಸುತ್ತಿದೆ. ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಇನ್ನು ಕರ್ನಾಟಕದ ಯಾವ ಮಾರ್ಗ ಎಂದು ನೋಡುವುದಾದರೆ ತೇಜಸ್ ಎಕ್ಸ್‌ಪ್ರೆಸ್ ರೈಲು ಮಂಗಳೂರು ಮತ್ತು ಕೊಯಮತ್ತೂರು ನಡುವೆ ಸಂಚಾರ ನಡೆಸಲಿದೆ. ರಾಜ್ಯದ ಕರಾವಳಿ ಭಾಗದ ಮಂಗಳೂರು ಮತ್ತು ತಮಿಳುನಾಡಿನ ಕೊಯಮತ್ತೂರು ನಡುವಿನ ದೂರ ಸುಮಾರು 414 ಕಿ. ಮೀ.ಗಳಷ್ಟಿದೆ.
ಮಂಗಳೂರು-ಕೊಯಮತ್ತೂರು ನಡುವಿನ ತೇಜಸ್ ಎಕ್ಸ್‌ಪ್ರೆಸ್ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ .ಮಂಗಳೂರಿನಿಂದ ಬೆಳಗ್ಗೆ 6ಗಂಟೆಗೆ ಹೊರಡಲಿರುವ ರೈಲು ಮಧ್ಯಾಹ್ನ 12.10ಕ್ಕೆ ಕೊಯಮತ್ತೂರು ತಲುಪಲಿದೆ. ಕೊಯಮತ್ತೂರುನಿಂದ 2.30ಕ್ಕೆ ಹೊರಡುವ ರೈಲು ರಾತ್ರಿ 8.40ಕ್ಕೆ ಮಂಗಳೂರಿಗೆ ಆಗಮಿಸಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ