ಫೋನ್ ಕದ್ದಾಲಿಕೆ ಸಿಬಿಐ ತನಿಖೆಗೆ: ಸಿಎಂ

ಬೆಂಗಳೂರು

    ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಾಗಿ ಭಾನುವಾರ ಘೋಷಿಸಿದ್ದಾರೆ. ಇದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ದೂರವಾಣಿ ಕದ್ದಾಲಿಕೆ ಪ್ರಕರಣಕ್ಕೆ ಇದೀಗ ಹೊಸ ಆಯಾಮ ದೊರೆತಂತಾಗಿದೆ.

    ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಅವರು, ದೂರವಾಣಿ ಕದ್ದಾಲಿಕೆ ಒಂದು ಗಂಭೀರ ವಿಷಯ. ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಈ ಸಂಬಂಧ ತನಿಖೆಗೆ ಆಗ್ರಹಿಸಿದ್ದಾರೆ. ರಾಜಕೀಯ ಎದುರಾಳಿಗಳನ್ನು ಹಣಿಯಲು ದೂರವಾಣಿ ಕದ್ದಾಲಿಕೆ ಮಾಡುವುದು ಕಾನೂನುಬಾಹಿರವಾಗಿದ್ದು, ಇದರಲ್ಲಿ ಭಾಗಿಯಾದವರನ್ನು ಬಯಲಿಗೆಳೆದು ಶಿಕ್ಷೆ ವಿಧಿಸುವ ಅಗತ್ಯವಿದೆ.

    ಇದಕ್ಕಾಗಿ, ಪ್ರಕರಣವನ್ನು ಸಿಬಿಐಗೆ ವಹಿಸಲು ನಿರ್ಧರಿಸಿದ್ದು, ಈ ಸಂಬಂಧ ಸೋಮವಾರ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದರು. ಮುಖ್ಯಮಂತ್ರಿಗಳ ಈ ನಿರ್ಧಾರವನ್ನು ಬಿಜೆಪಿ ನಾಯಕರು ಸೇರಿದಂತೆ ಅನರ್ಹ ಶಾಸಕ ವಿಶ್ವನಾಥ್ ಸ್ವಾಗತಿಸಿದ್ದರೆ, ಕಾಂಗ್ರೆಸ್ ಪಕ್ಷದೊಳಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಮುಖ್ಯಮಂತ್ರಿಗಳ ಹೇಳಿಕೆಯನ್ನು ಕೆಪಿಸಿಸಿ ಟೀಕಿಸಿದರೆ, ಪಕ್ಷದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಈ ಬೆಳವಣಿಗೆಗೆ ಜೆಡಿಎಸ್ ಪಾಳಯದಲ್ಲಿ ಅತೃಪ್ತಿ ಮೂಡಿಸಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

     ಸರ್ಕಾರದ ತೀರ್ಮಾನ ಉತ್ತಮವಾಗಿದೆ ಎಂದಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಟೆಲಿಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧಾರ ಸ್ವಾಗತಾರ್ಹ. ಫೋನ್ ಕದ್ದಾಲಿಕೆ ಅಕ್ಷಮ್ಯ ಅಪರಾಧ. ಇದರಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು. ಇದರಲ್ಲಿ ಸೇಡಿನ ರಾಜಕಾರಣ ದ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ನಾಯಕರು ಸಹ ಸೂಕ್ತ ತನಿಖೆಗೆ ಒತ್ತಾಯಿಸಿದ್ದರು.

     ಇದೊಂದು ಗಂಭೀರ ಪ್ರಕರಣವಾಗಿರುವ ಕಾರಣ ಸಿಬಿಐ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲಿದೆ ಎಂದಿದ್ದಾರೆ. ಬಿಜೆಪಿ ಶಾಸಕ ಸಿ.ಟಿ.ರವಿ ಸರ್ಕಾರದ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿದ್ದು, ದೂರವಾಣಿ ಟ್ಯಾಪಿಂಗ್ ಮಹಾಪರಾಧ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅಧಿಕಾರಿಗಳು ಆಡಳಿತದಲ್ಲಿರುವವರ ಬಕೆಟ್ ಹಿಡಿಯುವ ಕೆಲಸ ಮಾಡುವ ಪ್ರವೃತ್ತಿಗೆ ಕಡಿವಾಣ ಬೀಳಬೇಕು ಎಂದು ಹೇಳಿದ್ದಾರೆ.

       ಮಾಜಿ ಸಚಿವ ಹಾಗೂ ಅನರ್ಹ ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಕೂಡ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದೂರವಾಣಿ ಕದ್ದಾಲಿಕೆಯಂತಹ ನೀಚ ಕೆಲಸ ಮಾಡಿದ್ದಾರೆ. ಫೋನ್ ಟ್ಯಾಪಿಂಗ್ ಮಾಡಿ ಬ್ಲಾಕ್ ಮೇಲ್ ಮಾಡುವ ತಂತ್ರ ರೂಪಿಸಿದ್ದರು. ಭಯೋತ್ಪಾದಕರಿಗೂ ಇಂತಹವರಿಗೂ ಏನು ವ್ಯತ್ಯಾಸವಿದೆ. ಇವರೂ ಒಂದು ರೀತಿಯ ಭಯೋತ್ಪಾದಕರಿದ್ದಂತೆ. ಈ ಬಗ್ಗೆ ತನಿಖೆಗೆ ಆದೇಶಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

       ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ರಾಜ್ಯ ಸರ್ಕಾರದ ನಿರ್ಧಾರದ ಹಿಂದೆ ಯಾವುದೇ ಸೇಡಿನ ರಾಜಕಾರಣವಿಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ಟೆಲಿಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯಾಗಬೇಕು ಎಂದು ಎಲ್ಲ ಪಕ್ಷದ ನಾಯಕರು ಒತ್ತಾಯ ಮಾಡಿದ್ದರು. ವಿಶೇಷವಾಗಿ ಹಿರಿಯ ನಾಯಕರಾದ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದರು. ಈಗ ಸಿಎಂ ಯಡಿಯೂರಪ್ಪ ಸಿಬಿಐ ತನಿಖೆಗೆ ಆದೇಶ ನೀಡಿದ್ದಾರೆ. ಸತ್ಯಾಂಶ ಹೊರಬರಬೇಕೆಂಬುದು ಎಂಬುದು ಎಲ್ಲರ ಉದ್ದೇಶ. ಇದರಲ್ಲಿ ಯಾವುದೇ ಸೇಡಿನ ರಾಜಕೀಯದ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

       ವಿಧಾನಪರಿಷತ್ ಸದಸ್ಯರ ಬಸವರಾಜ್ ಹೊರಟ್ಟಿ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವುದು ಸ್ವಾಗತಾರ್ಹ. ಆದರೆ, ಸಿಬಿಐ ಬದಲಿಗೆ ರಾಜ್ಯದ ಯಾವುದಾದರೂ ತನಿಖಾ ಸಂಸ್ಥೆಗೆ ವಹಿಸಬಹುದಿತ್ತು. ಸಿಬಿಐ ಕೇಂದ್ರ ಸರ್ಕಾರದ ಮುಖ ನೋಡಿ ತನಿಖೆ ಮಾಡಬಾರದು. ಆದರೆ, ಇದು ತೋಳ ಬಂತು ತೋಳ ಎಂಬಂತಹ ಕಥೆಯಾಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     ಆದರೆ, ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿ ಆರಂಭದಲ್ಲಿ ಟ್ವೀಟ್ ಮಾಡಿದ್ದ ಕೆಪಿಸಿಸಿ, ತಾನು ಕಳ್ಳ, ಪರರನ್ನು ನಂಬ ಎಂಬಂತಿದೆ ಮುಖ್ಯಮಂತ್ರಿಗಳ ವರ್ತನೆ. ಆಪರೇಷನ್ ಕಮಲ ಮೂಲಕ ಸರ್ಕಾರ ಬೀಳಿಸಿ, ಹಿಂಬಾಗಿಲ ಮೂಲಕ ಗದ್ದುಗೆ ಏರಿರುವ ತಾವು ಭೂಗತ ಪಾತಕಿಗಳ ರೀತಿ ವರ್ತಿಸುತ್ತಿದ್ದಾರೆ. ಮೋದಿ ಆಳ್ವಿಕೆಯಲ್ಲಿ ಸಿಬಿಐ ಬಿಜೆಪಿಯ ಮುಂಚೂಣಿ ಘಟಕವಾಗಿ ಕೆಲಸ ಮಾಡುತ್ತಿದೆ.

    ಫೆÇೀನ್ ಕದ್ದಾಲಿಕೆ ಎಂಬುದು ಒಂದು ಸುಳ್ಳು, ದ್ವೇಷ ರಾಜಕಾರಣದ ಸಂಚು ಎಂದು ಆರೋಪಿಸಿತ್ತು. ಬಳಿಕ ಈ ಟ್ವೀಟ್ ಅನ್ನು ಡಿಲೀಟ್ ಮಾಡಿದೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಆರ್.ಅಶೋಕ್, ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಗೆ ಸ್ವತಃ ಸಿದ್ದರಾಮಯ್ಯ ಒತ್ತಾಯ ಮಾಡಿದ್ದರು. ಆದರೆ ಇದೀಗ ಕಾಂಗ್ರೆಸ್ ಉಲ್ಟಾ ಹೊಡೆದಿದೆ ಎಂದು ಆರೋಪಿಸಿದ್ದರು.

    ಇನ್ನೊಂದೆಡೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕೂಡ ಈ ಟ್ವೀಟ್ ಗೆ ತೀಕ್ಷ್ಮ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್, ನಾಲಿಗೆಗೂ ಮೆದುಳಿಗೂ ಸಂಪರ್ಕ ಕಳೆದುಕೊಂಡು ಮತಿಭ್ರಮಣಗೊಂಡಿದೆ. ದೇಶವನ್ನು ಲೂಟಿ ಹೊಡೆದ ಭೂಗತ ಪಾತಕಿಗಳು ಯಾರೆಂದು ಜನ ನೋಡಿದ್ದಾರೆ. ಕದ್ದಾಲಿಕೆ ಬಗ್ಗೆ ತನಿಖೆಗೆ ಒತ್ತಾಯಿಸಿದ ನಿಮ್ಮ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಏನೆಂದು ಕರೆಯುತ್ತೀರಿ ಎಂದು ಪ್ರಶ್ನಿಸಿದ್ದರು.

    ಆದರೆ, ಕೆಪಿಸಿಸಿ ನಿಲುವಿಗೆ ಭಿನ್ನವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಫೋನ್ ಕದ್ದಾಲಿಕೆ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಮುಖ್ಯಮಂತ್ರಿ ನಿರ್ಧಾರ ಸ್ವಾಗತಾರ್ಹ. ಆದರೆ ಬಿಜೆಪಿ ಸಿಬಿಐಯನ್ನು ಕೈಗೊಂಬೆ ಮಾಡಿಕೊಂಡು ರಾಜಕೀಯ ಸೇಡಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿರುವುದನ್ನು ದೇಶ ಕಂಡಿದೆ. ಇಂತಹ ದುಷ್ಟ ಆಲೋಚನೆ ಬಿಜೆಪಿ ನಾಯಕರಿಗಿಲ್ಲ ಎಂದು ನಂಬಿದ್ದೇನೆ? ಎಂದು ಟ್ವೀಟ್ ಮಾಡಿದ್ದರು.

      ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಪ್ರಕರಣವನ್ನು ರಾಜ್ಯ ತನಿಖಾ ಸಂಸ್ಥೆಗಳೇ ತನಿಖೆ ನಡೆಸಬಹುದಿತ್ತು. ಕದ್ದಾಲಿಕೆಯಿಂದ ಬಹಿರಂಗಗೊಳ್ಳುವ ಗಂಭೀರ ಪ್ರಕರಣಗಳು, ರಾಜ್ಯದ್ರೋಹದ ಕೆಲಸಗಳು, ಅದರಲ್ಲಿ ಭಾಗಿಯಾದವರ ಕುರಿತು ಕೂಡ ತನಿಖೆ ನಡೆಯಬೇಕು ಎಂದಿದ್ದಾರೆ. ಇನ್ನೊಂದೆಡೆ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ, ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ಅಲ್ಲದಿದ್ದರೇ, ಅಮೆರಿಕ ಅಧ್ಯಕ್ಷ ಟ್ರಂಪ್ ನೆರವು ಪಡೆದು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಯಿಂದಲೇ ತನಿಖೆ ಮಾಡಿಸಲಿ. ಜೆಡಿಎಸ್ ಪಕ್ಷ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ ಎಂದಿದ್ದಾರೆ.

     ಇದಕ್ಕೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ ಶ್ರೀರಾಮುಲು, ಸಿಬಿಐ ತನಿಖೆ ಬಗ್ಗೆ ಕುಮಾರ ಸ್ವಾಮಿ ಅವರು ಅಪಸ್ವರ ಎತ್ತುತ್ತಿರುವುದು ಸರಿಯಲ್ಲ. ದೂರವಾಣಿ ಕದ್ದಾಲಿಕೆ ಮತ್ತು ದುರುಪಯೋಗ ವಿಚಾರದಲ್ಲಿ ಅನೇಕ ಸರ್ಕಾರಗಳು ಬಿದ್ದುಹೋಗಿವೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಕುಮಾರ ಸ್ವಾಮಿ ದೂರವಾಣಿ ಕದ್ದಾಲಿಕೆ ಮಾಡಿದ್ದಾರೆ ಎಂಬ ಆರೋಪವಿದೆ. ರಾಜ್ಯವಷ್ಟೇ ಅಲ್ಲದೇ ರಾಷ್ಟ್ರ ಮಟ್ಟದ ನಾಯಕರ ದೂರವಾಣಿಯನ್ನೂ ಸಹ ಕದ್ದಾಲಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಲೋಕಸಭಾ ನಾವಣೆಯಲ್ಲಿ ಕೇಂದ್ರ ಸರ್ಕಾರ ಕೂಡ ದೂರವಾಣಿ ಕದ್ದಾಲಿಕೆ ಮಾಡಿದೆ.

    ಅದನ್ನು ಸಿಬಿಐ ತನಿಖೆಗೆ ಒಪ್ಪಿಸಲಿ. ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ.ಆದರೆ, ಅದೇ ರೀತಿ ಎಲ್ಲಾ ಕದ್ದಾಲಿಕೆಯ ತನಿಖೆಯಾಗಲಿ ಎಂದಿದ್ದಾರೆ. ಈ ನಡುವೆ, ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಭಾನುವಾರ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದು, ದೂರವಾಣಿ ಕದ್ದಾಲಿಕೆ ಪ್ರಕರಣ ಕುರಿತು ಚರ್ಚಿಸಿದ್ದಾರೆ. ಸಿಬಿಐ ತನಿಖೆಗೆ ಅಗತ್ಯ ಸಹಕಾರ ನೀಡಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ