ಬೆಂಗಳೂರು:
ಕಲಬುರಗಿ ಜಿಲ್ಲೆಯ ಪ್ರವಾಸದಲ್ಲಿರುವ ಸಚಿವ ಎಚ್ ಡಿ. ರೇವಣ್ಣ ಟೆಂಪಲ್‍ರನ್ ಮುಂದುವರೆಸಿದ್ದು, ಐತಿಹಾಸಿಕ ಶ್ರೀ ಶರಣಬಸವೇಶ್ವರ ಸಂಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ನಂತರ ಸಂಸ್ಥಾನದ ಪೀಠಾಧಿಪತಿ ಶ್ರೀ ಶರಣಬಸವಪ್ಪ ಅಪ್ಪ ಅವರ ಆಶೀರ್ವಾದ ಪಡೆದರು. ಶರಣಬಸವಪ್ಪ ಅಪ್ಪ ಸಚಿವ ರೇವಣ್ಣಾಗೆ ಶಾಲು ಹೊದಿಸಿ ಸನ್ಮಾನಿಸಿ, ಸಿಎಂ ಆಗಲಿ ಅಂತ ಹರಿಸಿದರು. ಸಚಿವ ರೇವಣ್ಣಗೆ ಮಾಜಿ ಸಚಿವ ರೇವುನಾಯ್ಕ್ ಬೆಳಮಗಿ ಸೇರಿದಂತೆ ಜೆಡಿಎಸ್ ನಾಯಕರು ಸಾಥ್ ನೀಡಿದರು.
ಬಳಿಕ ಸುದ್ದಿಗೋಷ್ಠಿ ವೇಳೆ ಟೆಂಪಲ್ ರನ್ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ರೇವಣ್ಣ, ನಾನು ಶಿವನ ಭಕ್ತ. ಹಾಗಾಗಿ ಇಂದು ಸೋಮವಾರ ಆಗಿದ್ದರಿಂದ ಶ್ರೀ ಶರಣಬಸವೇಶ್ವರರ ದರ್ಶನ ಪಡೆದಿದ್ದೇನೆ. ಬೇರೆಯವರ ತರ ಕೇರಳಕ್ಕೆ ಹೋಗುವುದಿಲ್ಲ ಅಂತ ಮಾಜಿ ಸಿಎಂ ಯಡಿಯೂರಪ್ಪ ಹೆಸರು ಹೇಳದೇ ಟಾಂಗ್ ಕೊಟ್ಟರು. ರಾಜ್ಯದ ಜನತೆಗೆ ಒಳ್ಳೇದಾಗಲಿ, ಕಲಬುರಗಿ ಜಿಲ್ಲೆಯಲ್ಲಿರುವ ಬರಗಾಲ ದೂರವಾಗಲಿ ಅಂತ ದೇವರಲ್ಲಿ ಕೇಳಿಕೊಂಡಿದ್ದಾಗಿ ರೇವಣ್ಣ ಇದೇ ವೇಳೆ ಹೇಳಿದರು.