ಬೆಂಗಳೂರು:
ತೀರ್ಥಯಾತ್ರ ಮುಂದುವರೆಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ತಮಿಳುನಾಡಿನ ಪ್ರಸಿದ್ಧ ತಿರುಚೆಂದೂರು ಮುರುಗನ್ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಮುಖ್ಯಮಂತ್ರಿ ಆದ ನಂತರ ಹಾಗೂ ಮುಖ್ಯಮಂತ್ರಿ ಆಗುವ ಮೊದಲು ಸಹ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಇತಿಹಾಸ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಕುಮಾರಸ್ವಾಮಿ, ಇಂದು ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿರುವ ತಿರುಚೆಂದೂರ್ ಮುರುಗನ್ ದೇವಾಲಯಕ್ಕೆ ಇಂದು ಬೆಳಗ್ಗೆಯೇ ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಮುಖ್ಯಮಂತ್ರಿಗಳ ಆರೋಗ್ಯ ಅಷ್ಟೇನು ಉತ್ತಮವಾಗಿಲ್ಲದ ಹಿನ್ನೆಲೆಯಲ್ಲಿ ಅವರ ಕುಟುಂಬ ಕಳೆದ ದಿನಗಳಿಂದ ವಿವಿಧ ದೇವಾಲಯಗಳಲ್ಲಿ ಪೂಜೆ, ಹೋಮ, ಹವನ ನಡೆಸುತ್ತಲೇ ಬಂದಿದೆ. ಕಳೆದ ವಾರವಷ್ಟೇ ಶೃಂಗೇರಿ ಶಾರದಾಂಬ ದೇವಾಲಯದಲ್ಲಿ ವಿಶೇಷ ಹೋಮ-ಹವನಗಳನ್ನು ನಡೆಸಲಾಗಿತ್ತು.
ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿತಿನ್ ಜತೆ ತಿರುಚೆಂಡೂರು ದೇವಾಲಯಕ್ಕೆ ತೆರಳಿ ಮುರುಗನ್ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ದೇಗುಲ ಯಾತ್ರೆಯಿಂದ ಇಂದು ಅವರ ಯಾವುದೇ ಅಧಿಕೃತ ಕಾರ್ಯಕ್ರಮಗಳು ನಿಗದಿಯಾಗಿಲ್ಲ. ತಮಿಳುನಾಡಿನ ದೇವಾಲಯಕ್ಕೆ ತೆರಳುವ ಬಗ್ಗೆಯೂ ಯಾವುದೇ ಮಾಹಿತಿಗಳಿಲ್ಲ. ಅವರು ಗುಟ್ಟಾಗಿಯೇ ಈ ದೇಗುಲ ಯಾತ್ರೆಯನ್ನು ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








