ದೇವಸ್ಥಾನಗಳು ಶಾಂತಿ ನೆಲೆಗಳು : ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ

ಹೊನ್ನಾಳಿ: 

         ದೇವಸ್ಥಾನಗಳು ಶಾಂತಿ ನೆಲೆಗಳು ದೇವಸ್ಥಾನಗಳಲ್ಲಿ ಪೂಜಾ ಕೈಕರ್ಯಗಳು ಪ್ರತಿ ದಿನ ನಡೆಯಬೇಕು ಎಂದು ಹಿರೇಕಲ್ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

          ಪೇಟೆ ವೀರಭದ್ರೇಶ್ವರಸ್ವಾಮಿ 12ನೇ ವಾರ್ಷಿಕ ಗುಗ್ಗಳ, ಮಹಾ ಮೃತ್ಯುಂಜಯ ಹೋಮ ಹಾಗೂ ಕಾರ್ತಿಕೋತ್ಸವದ ಅಂಗವಾಗಿ ಮಂಗಳವಾರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು.

          ಪೇಟೆ ವೀರಭದೇಶ್ವರಸ್ವಾಮಿಯ ಗುಗ್ಗಳ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ಸತತ 12 ವರ್ಷಗಳಿಂದ ಯುವಕರ ಸಹಕಾರದಿಂದ ಇಲ್ಲಿನ ಭಕ್ತರು ಆಚರಣೆ ಮಾಡಿಕೊಂಡು ಬಂದಿರುವುದು ಶ್ಲಾಘನೀಯ ಎಲ್ಲರಲ್ಲು ಧಾರ್ಮಿಕ ಭಾವನೆ ಬೆಳೆದರೆ ನಾಡಿಗೆ ಬೆಳಕಾಗುವುದು ಎಂದು ಹೇಳಿದರು.

          ದಾನ, ಧರ್ಮ ಮತ್ತು ಪರೋಪಕಾರಗಳು ನಮ್ಮ ಪ್ರಮುಖ ಗುರಿಗಳಾಗಿದ್ದರೆ ಜೀವನದಲ್ಲಿ ಕಷ್ಟಗಳು ಕಣ್ಮರೆಯಾಗಿ ಶಾಂತಿ ಬದುಕು ಲಭಿಸುತ್ತದೆ ಎಂದು ಹೇಳಿದರು.

           ಕಷ್ಟ ಬಂದಾಗ ಮಾತ್ರ ದೇವರನ್ನು ನೆನೆಯದೇ ಸದಾ ದೇವರ ಸ್ಮರಣೆ ಮಾಡುವುದನ್ನು ರೂಢಿಗತ ಮಾಡಿಕೊಳ್ಳಬೇಕು ಎಂದು ಹೇಳಿದರು.ನಮ್ಮ ಹಿರಿಯರು ಮಾಡಿದ ಆಚರಣೆಗಳು ವೈಜ್ಞಾನಿಕ ಕಾರಣಗಳಿಂದ ಕೂಡಿದ್ದು ಕಾರ್ತಿಕ ಮಾಸದಲ್ಲಿ ಅಧಿಕ ಚಳಿ ಬೀಳುತ್ತದೆ ಹಾಗೂ ಮನುಷ್ಯರ ಚರ್ಮ ತೇವಾಂಶವಿಲ್ಲದೆ ಒಣಗಿ ಒರಟಾಗುತ್ತದೆ ಇದನ್ನು ತಡೆಯಲು ಎಣ್ಣೆ ದೀಪ ಬೆಳಗುವುದರೊಂದಿಗೆ ಕಾರ್ತಿಕೋತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು.ಮುಖಂಡರಾದ ಪಟ್ಟಣಶೆಟ್ಟಿ ಪರಮೇಶ್, ಗಂಗಾಧರ, ಬಸವರಾಜಯ್ಯ, ಶಿವಕುಮಾರ್, ಪ್ರಕಾಶ್‍ಶಾಸ್ತ್ರಿ, ನಾಗರಾಜಯ್ಯಶಾಶ್ತ್ರಿ ಇತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ