ಹಗರಿಬೊಮ್ಮನಹಳ್ಳಿ:
ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯದ ಅಡಿಯಲ್ಲಿ ಇಲ್ಲಿಯ ತಹಸೀಲ್ದಾರ್ ಕೆ.ವಿಜಯಕುಮಾರ್‍ರನ್ನು ಸೇವೆಯಿಂದ ಅಮಾನತುಗೊಳಿಸಿ ಕಂದಾಯ ಇಲಾಖೆಯ ಸರ್ಕಾರ ಅಧೀನಕಾರ್ಯದರ್ಶಿ ವಸಂತ್‍ಕುಮಾರ್ ಶುಕ್ರವಾರ ಆದೇಶ ನೀಡಿದ್ದಾರೆ.
ತಾಲೂಕಿನ ಚಿಂತ್ರಪಳ್ಳಿ ಗ್ರಾಮದ ಶಕುಂತಲಮ್ಮನು ಮಡಿವಾಳ ಸಮುದಾಯಕ್ಕೆ ಸೇರಿದ್ದು, ಅವರಿಗೆ ಪರಿಶಿಷ್ಟ ಪಂಗಡಕ್ಕೆ ಸೇರಿರುತ್ತಾರೆ ಎಂದು, ಅನುಸೂಚಿತ ಬುಡಕಟ್ಟು ಪ್ರಮಾಣಪತ್ರ ವಿತರಿಸುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ ಇದಲ್ಲದೆ, ತಾಲೂಕಿನ ಮಾದೂರು ಗ್ರಾಮದ ಸರ್ವೆ ನಂ.87 ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹೆಸರಿನಲ್ಲಿದ್ದು, ಇದರಲ್ಲಿಯ 13.60 ಎಕರೆ ವಿಸ್ತೀರ್ಣದ ಭೂಮಿಯನ್ನು ದೇವಸ್ಥಾನದ ಪೂಜಾರಿಗಳು ನಕಲಿ ದಾಖಲೆಗಳನ್ನು ಸೃಷ್ಠಿಸುವ ಮೂಲಕ ತಮ್ಮ ಹೆಸರಿಗೆ ನೊಂದಾಯಿಸಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾದೂರು ಗ್ರಾಮಸ್ಥರು ದೇವಸ್ಥಾನದ ಜಮೀನನ್ನು ಪರಭಾರೆ ಮಾಡಬಾರದೆಂದು ತಹಸೀಲ್ದಾರ್‍ಗೆ ಆಕ್ಷೇಪಣೆಪತ್ರ ಸಲ್ಲಿಸಿದ್ದರೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇದುವರೆಗೂ ತಹಸೀಲ್ದಾರ್ ಕೆ.ವಿಜಯಕುಮಾರ್‍ರವರು ಈ ಜಮೀನಿನ ವಿಷಯದಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ದಿವ್ಯ ನಿರ್ಲಕ್ಷ್ಯವಹಿಸಿರುವುದೂ ಸಹ ಅಮಾನತುಗೆ ಕಾರಣವಾಗಿದೆ ಎಂದು ತಿಳಿಸಲಾಗಿದೆ.
ಅಲ್ಲದೆ, ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯ ರೀತಿಯಲ್ಲಿ ವರ್ತಿಸುತ್ತಿರಲಿಲ್ಲವೆಂದು ಸಾರ್ವಜನಿಕರೇ ದೂರು ನೀಡಿದ್ದರು.
ಅದೇ ರೀತಿ ತಾಲೂಕಿನ ಶೀಗೇನಹಳ್ಳಿ ಗ್ರಾಮದ ಸ.ನಂ.182/1ರಲ್ಲಿ 2.55ಎಕರೆ ವಿಸ್ತೀರ್ಣ ಜಮೀನಿನ ವಿಚಾರಕ್ಕೂ ಸಹ ಆಕ್ಷೇಪ ಅರ್ಜಿ ಸಲ್ಲಿಸಿದ್ದರೂ ಪ್ರತಿವಾದಿಗಳು ಸಲ್ಲಿಸಿರುವ ಆಕ್ಷೇಪಣೆಯನ್ನು ಕೂಲಂಕುಶವಾಗಿ ಪರಿಶೀಲಿಸದೇ ಏಕಪಕ್ಷೀಯವಾಗಿ ಹಕ್ಕು ಬದಲಾವಣೆ ಮಾಡಿರುವುದು ಕಂಡುಬಂದಿರುವುದರಿಂದ ತಹಸೀಲ್ದಾರ್ ಕೆ.ವಿಜಯಕುಮಾರ್‍ರವರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
