ದಾವಣಗೆರೆ:
ಕಳೆದ ಒಂದು ವರ್ಷದಿಂದ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಭೋದಕ ವೃಂದದ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪನವರ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ, ಅಕ್ರಮವಾಗಿ ನಡೆದಿರುವ ನೇಮಕಾತಿ ಪ್ರಕ್ರಿಯೆಲ್ಲಿ ಭಾಗಿಯಾಗಿರುವ ಕುಲಪತಿ ಹಾಗೂ ಕುಲಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಬಳಿಕ ಬೈಕ್ ರ್ಯಾಲಿಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ, ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ಜಿ.ಯಲ್ಲಪ್ಪ, ದಾವಣಗೆರೆ ವಿವಿಯಲ್ಲಿ ಕಳೆದೊಂದು ವರ್ಷದಿಂದ ಬೋಧಕ ವೃಂದದ ಕನ್ನಡ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಸಮಾಜ ಕಾರ್ಯ, ಶೈಕ್ಷಣಿಕ ಶಾಸ್ತ್ರ ಹೀಗೆ ಬಹುತೇಕ ಎಲ್ಲಾ ವಿಭಾಗಗಳ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ.
ವಿವಿಧ ವಿಭಾಗಗಳಿಗೆ 2 ಹಂತದ ಹುದ್ದೆ ಭರ್ತಿ ಮಾಡಿ, ನೇಮಕಾತಿ ಆದೇಶ ನೀಡಲಾಗಿದೆ. ಮಾರ್ಗಸೂಚಿ, ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ. 371 ಜೆ ಮೀಸಲು ಹುದ್ದೆ ಹಾಗೂ ಪತ್ರಿಕೋದ್ಯಮ, ಎಂಬಿಎ, ಭೌತಶಾಸ್ತ್ರ, ಎಂ.ಎಡ್ ವಿಭಾಗಗಳಿಗೆ ಈಗಾಗಲೇ ಹೈದ್ರಾಬಾದ್ ಕರ್ನಾಟಕದ ಕೋಟಾದ 11 ಹುದ್ದೆಗಳು ಸೇರಿ ಒಟ್ಟು 37 ಹುದ್ದೆಗಳಿಗೆ ನೇಮಕಾತಿ ನಡೆದಿದ್ದು, ಈ ಎಲ್ಲ ಹುದ್ದೆಗಳಲ್ಲೂ ಅಕ್ರಮ ನಡೆದಿದೆ ಎಂದು ಆಪಾದಿಸಿದರು.
ನೇಮಕಾತಿಗಾಗಿ ವಿವಿ ಎಲ್ಲಾ ವಿಭಾಗಗಳಿಗೆ ನಡೆಸಿರುವ ಲಿಖಿತ ಪರೀಕ್ಷೆಯು ಪಾರದರ್ಶಕತೆಯಿಂದ ಕೂಡಿಲ್ಲ. ತರಗತಿ ಪರೀಕ್ಷೆಯಲ್ಲಿ ಪರೀಕ್ಷೆಯ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸರಿ, ತಪ್ಪು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಈಚೆಗೆ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಓಎಂಆರ್ ಶೀಟ್ ಮಾದರಿ ಪರೀಕ್ಷೆ ನಡೆಯುತ್ತದೆ. ಆದರೆ, ಕಾರ್ಬನ್ ಕಾಪಿ ಕೊಡದೇ ಪರೀಕ್ಷೆ ನಡೆಸಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ದೂರಿದರು.
ಅಭ್ಯರ್ಥಿಗಳ ವಿದ್ಯಾರ್ಹತೆ, ಸಂಶೋಧನೆ, ಲಿಖಿತ ಪರೀಕ್ಷೆಯಲ್ಲಿ ಪಡೆದ ಒಟ್ಟು ಸರಾಸರಿ ಅಂಕಗಳ ಆಧಾರದಲ್ಲಿ 1ಃ3 ಅನುಪಾತ ಪಟ್ಟಿ ಪ್ರಕಟಿಸಬೇಕಿತ್ತು. ಆದರೆ, ದಾವಣಗೆರೆ ವಿವಿ ನೇಮಕಾತಿಯಲ್ಲಿ 1ಃ3 ಪಟ್ಟಿಯ£್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಿಲ್ಲ. ಬದಲಿಗೆ ಸಂದರ್ಶನಕ್ಕೆ ನಾಲ್ಕೈದು ದಿನ ಬಾಕಿ ಇರುವಾಗ ಎಲ್ಲಾ ಅಭ್ಯರ್ಥಿಗಳ ಸರಾಸರಿ ಅಂಕಗಳನ್ನು ಪ್ರಕಟಿಸಿ, ಸಂದರ್ಶನ ನಡೆಸಲಾಗಿದೆ.
ಸಂದರ್ಶನದ ದಿನದಂದು ಸೂಚನಾ ಫಲಕದಲ್ಲಿ ಸಂದರ್ಶನದ ಅಂಕ ಪ್ರಕಟಿಸಿ, ನಂತರ ಆಯ್ಕೆ ಪಟ್ಟಿ ಪ್ರಕಟಿಸಬೇಕು. ಆದರೆ, ಸಂದರ್ಶನದ ನಂತರ ಆಯ್ಕೆ ಪಟ್ಟಿ ವೆಬ್‍ಸೈಟ್‍ನಲ್ಲೂ ಪ್ರಕಟಿಸದೇ ನೇರವಾಗಿ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಪಡೆದು, ಅಂದೇ ನೇಮಕಾತಿ ಆದೇಶಯವನ್ನು ತರಾತೂರಿಯಲ್ಲಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.
ದಾವಣಗೆರೆ ವಿವಿಯಲ್ಲಿ ನಡೆದಿರುವ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಅಕ್ರಮದಲ್ಲಿ ಕುಲಪತಿ, ಕುಲಸಚಿವರು, ಆಪ್ತರು, ಡೀನ್‍ಗಳು, ಸಿಂಡಿಕೇಟ್ ಸದಸ್ಯರು, ಬೋಧಕೇತರ ಸಿಬ್ಬಂದಿ ಭಾಗಿಯಾಗಿದ್ದು, ರಾಜ್ಯಪಾಲರೂ ಈ ಎಲ್ಲರ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಮುಖಂಡರಾದ ಕೆ.ಹೆಚ್.ಮೆಹಬೂಬ್, ಎಂ.ರವಿ, ಅಮ್ಜದ್ ಅಲಿ, ಅಶೋಕ್, ಸೋಮಶೇಖರ್, ಅಜಮ್ ರಜ್ವಿ, ಮಂಜುನಾಥ್ ಗಂಗೂರ್, ದಯಾನಂದ್, ಸಂತೋಷ್ ದೊಡ್ಮನಿ, ಸಿರಾಜ್ ಅಹ್ಮದ್, ಬೀಲಾಲ್, ಬಾಬುರಾವ್, ವೀರೇಶ್, ಅಜಿಮ್ ಶಫಿ ಮತ್ತಿತರರು ಪಾಲ್ಗೊಂಡಿದ್ದರು.