ತಪ್ಪುಗಳಿಗೆ ಹಿಂಜರಿಯಬೇಡಿ, ಸಾಧನೆಯತ್ತ ಮುನ್ನುಗ್ಗಿ

ದಾವಣಗೆರೆ:

    ತಪ್ಪುಗಳಿಲ್ಲದೇ ಸುಧಾರಣೆ ಅಸಾಧ್ಯವಾಗಿದ್ದು, ಹೊಸ ವಿಷಯಗಳನ್ನು ಕಲಿಯಲು ಹೋದಾಗ ತಪ್ಪುಗಳು ಆಗೇ ಆಗುತ್ತವೆ. ಇದಕ್ಕೆ ಯಾರೂ ಹಿಂಜರಿಯದೇ, ಸಾಧನೆಯತ್ತ ಮುಖ ಮಾಡಬೇಕೆಂದು ಬೆಂಗಳೂರು ಎ.ಡಿ.ಟಿ.ಜಿ.ಸಿ ಹಿರಿಯ ಯೋಜನಾ ನಿರ್ವಾಹಕ ಸಚಿನ್ ಕಯ್ಯೂರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ನಗರದ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಕಾಲೇಜಿನ ಆವರಣದಲ್ಲಿರುವ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿರುವ ರಾಷ್ಟ್ರಮಟ್ಟದ ತಾಂತ್ರಿಕ ವಿಚಾರ ಸಂಕಿರಣ ಮೆಕ್ ಐ ಪ್ರಿಕ್ಸ್ -2019 ತಾಂತ್ರಿಕ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

    ಯಾವುದೇ ಹೊಸ ವಿಷಯಗಳನ್ನು ಕಲಿಯಲು ಹೋದರೆ, ತಪ್ಪುಗಳು ಆಗುವುದು ಸರ್ವೇಸಾಮಾನ್ಯ. ಹೀಗಾಗಿ ನಮ್ಮಿಂದ ತಪ್ಪಾಯಿತು. ಎಂಬ ಕಾರಣಕ್ಕೆ ಯಾರು ಸಹ ಹಿಂಜರಿಯದೇ ಸಾಧನತೆಯತ್ತ ಮುಖ ಮಾಡಬೇಕು ಹಾಗೂ ಉತ್ತಮ ಸಂಬಂಧಗಳ ಜಾಲವನ್ನು ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

    ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಉದ್ಯೋಗಕ್ಕೆ ಅಗತ್ಯವಾಗಿ ಬೇಕಾಗಿರುವ ಮೂಲ ಜ್ಞಾನವನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸುವುದರ ಜೊತೆಗೆ, ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಹಾಗೂ ಗಣಿತದ ಪರಿಣಿತ ಪಡೆಯುವುದರ ಜೊತೆಗೆ ಹಲವಾರು ವಲಯಗಳ ಜ್ಞಾನವನ್ನು ಸಂಗ್ರಸಿಕೊಳ್ಳಬೇಕು. ಆಗ ಯಶಸ್ಸು ನಿಮ್ಮ ಕಟ್ಟಿಟ್ಟ ಬುತ್ತಿಯಾಗಲಿದೆ ಎಂದರು.

    ಯಾವುದೇ ಒಬ್ಬ ವಿದ್ಯಾರ್ಥಿ ಜೀವನದ ಗುರಿ ತಲುಪಬೇಕಾದರೆ, ಸ್ನೇಹಿತರು, ಕುಟುಂಬ ಹಾಗೂ ಹಿರಿಯ ವಿದ್ಯಾರ್ಥಿಗಳ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ಅಲ್ಲದೇ, ಅವರೆಲ್ಲರ ಜೊತೆಯಲ್ಲಿ ಅರ್ಥಪೂರ್ಣ ಚರ್ಚೆಯಲ್ಲಿ ತೊಡಗಿ, ಹೊಸ ಹೊಸ ವಿಚಾರಗಳ ಬಗ್ಗೆ ಮಾತನಾಡಿ. ಗೊತ್ತಿಲ್ಲದ ಹಲವು ಸಂಗತಿಗಳನ್ನು ಅರಿತು ನವೀನ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

    ಯುಪಿಎಸ್‍ಸಿ ಪರೀಕ್ಷೆಯಲ್ಲಿ 114ನೇ ರ್ಯಾಂಕ್ ಪಡೆದ ಬಿಐಇಟಿ ಕಾಲೇಜಿನ ಹಳೆಯ ವಿದ್ಯಾರ್ಥಿ ರೋಷ್‍ನ್‍ಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂಜಿನಿಯರಿಂಗ್ ಪದವಿ ಪಡೆದ ನಂತರದಲ್ಲಿ ಉದ್ಯೋಗ ಹಾಗೂ ಜೀವನ ಭದ್ರತೆಯ ವಿಷಯಗಳು ಹೆಚ್ಚಾಗಿ ನನ್ನನ್ನು ಕಾಡುತ್ತಿದ್ದವು.

     ಆದರೆ, ಎರಡು ಮೂರು ವರ್ಷಗಳ ನಂತರ ಉದ್ಯೋಗದಲ್ಲಿ ಏಕಾಂಗಿತನ ಕಾಡಲಾರಂಭಿಸಿತು. ಪ್ರತಿದಿನವೂ ಅದೇ ಕೆಲಸ ಮಾಡುವುದು ಬೇಸರ ತಂದ ಕಾರಣದಿಂದಾಗಿ ಚಿಕ್ಕಂದಿನಲ್ಲಿ ನಾನು ಕಾಣುತ್ತಿದ್ದ ಕನಸಾದ ಯು.ಪಿ.ಎಸ್.ಸಿ. ಸ್ಪರ್ಧಾತ್ಮ ಪರೀಕ್ಷೆಗೆ ಪ್ರಯತ್ನಿಸಲು ನಿರ್ಧರಿಸಿದೆ. ಆದರೆ, ಯು.ಪಿ.ಎಸ್.ಸಿ ಪರೀಕ್ಷೆ ಎದುರಿಸುವುದು ಅಷ್ಟು ಸುಲಭದ್ದಾಗಿರಲಿಲ್ಲ. ಕಬ್ಬಿಣದ ಕಡಲೆಯಂತಿತ್ತು.

     ಐದು ಬಾರಿ ಯುಪಿಎಸ್‍ಸಿಯ ವಿವಿಧ ಹಂತಗಳಲ್ಲಿ ಅನುತ್ತೀರ್ಣನಾಗಿದ್ದೆ. ಪ್ರತಿದಿನವೂ ನನ್ನ ಕೈಲಾಗದ ಕೆಲಸ ಎಂಬ ಮನೋಭಾವ ಮನೆಮಾಡಲಾರಂಭಿಸಿತು. ಆದರೂ, ಛಲ ಬಿಡದೇ ಪರಿಶ್ರಮ ಪಟ್ಟಿದ್ದಕ್ಕೆ ಫಲ ನೀಡಿತು ಎಂದು ತಮ್ಮ ಪರಿಶ್ರಮವನ್ನು ಎಳೆ, ಎಳೆಯಾಗಿ ಬಿಚ್ಚಿಟ್ಟರು.

    ಬಿಐಇಟಿ ಕಾಲೇಜು ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಡಾ| ಎಂ.ಸಿ. ನಟರಾಜ್, ಎಸ್.ಕುಮಾರಪ್ಪ ಉಪಸ್ಥಿತರಿದ್ದರು. ಎಸ್.ಇ. ಮಂಜುಳಾ ಪ್ರಾರ್ಥಿಸಿದರು. ಡಿ.ಇ. ಉಮೇಶ್ ಸ್ವಾಗತಿಸಿದರು. ಬಿ.ಎಸ್. ಶ್ರೇಯಾಂಕ್ ಹಾಗೂ ರುಕೈಯ್ಯಾ ಮೆಹವಿಷ್ ನಿರೂಪಿಸಿದರು. ಜಿ.ಎನ್.ಕೌಶಲ್ಯ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ