ಬಿ.ಎಚ್ ರಸ್ತೆಯಲ್ಲಿ ಹಂಪ್ಸ್‍ಗಳ ತೆರವು : ದಿನೆ ದಿನೆ ಹೆಚ್ಚುತ್ತಿರುವ ಅಪಘಾತಗಳು

ತುಮಕೂರು
ವಿಶೇಷ ವರದಿ :ರಾಕೇಶ್.ವಿ.
       ಇಂದಿನ ಯುವ ಪೀಳಿಗೆಗೆ ಅತಿ ವೇಗವಾಗಿ ಬೈಕ್ ಚಲಾಯಿಸುವುದು ಒಂದು ರೀತಿಯ ಫ್ಯಾಷನ್ ಆಗಿದೆ. ಹೈವೇ ರಸ್ತೆಗಳಲ್ಲಿ ಇವರ ವೇಗಕ್ಕೆ ಮಿತಿಯೇ ಇರುವುದಿಲ್ಲ. ಇದರ ನಡುವೆ ನಗರದಲ್ಲಿಯೂ ಸಹ ಕೆಲ ರಸ್ತೆಗಳಲ್ಲಿ ಬೈಕ್‍ಗಳನ್ನು ಅತಿ ವೇಗವಾಗಿ ಚಲಿಸುತ್ತಾರೆ. ಈ ನಿಟ್ಟಿನಲ್ಲಿ ರಸ್ತೆಯ ಅಲ್ಲಲ್ಲಿ ಹಂಪ್ಸ್‍ಗಳನ್ನು ಅಳವಡಿಸಲಾಗುತ್ತದೆ. ಆದರೆ ಗಣ್ಯ ವ್ಯಕ್ತಿಯ ಆಗಮನದ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಂಪ್ಸ್‍ಗಳನ್ನು ತೆರವುಗಳಿಸದರಾದರೂ ಮತ್ತೆ ಅದನ್ನು ಮರು ನಿರ್ಮಾಣ ಮಾಡುವುದನ್ನೇ ಮರೆತೇ ಬಿಟ್ಟಂತಿದೆ ಅಧಿಕಾರಿಗಳು.
     ಹೌದು ವರ್ಷದ ಆರಂಭದಲ್ಲಿ ತುಮಕೂರು ನಗರಕ್ಕೆ ಕಿಸಾನ್ ಸಮ್ಮಾನ್ ಯೋಜನೆಯ ರಾಷ್ಟ್ರ ಮಟ್ಟದ ಕಾರ್ಯಕ್ರಮದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಅವರ ಆಗಮನ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಡಳಿಯ, ಸ್ಮಾರ್ಟ್ ಸಿಟಿ, ಮಹಾನಗರ ಪಾಲಿಕೆ ಸೇರಿದಂತೆ ಇನ್ನಿತರ ಇಲಾಖೆಗಳು ಹಗಲು ರಾತ್ರಿ ಎನ್ನದೆ ಕಚೇರಿ ಕೆಲಸಗಳನ್ನೆಲ್ಲಾ ಬಿಟ್ಟು ಕೇವಲ ಮೋದಿ ಕಾರ್ಯಕ್ರಮಕ್ಕೆ ತಯಾರಿ, ಸಿದ್ಧತೆಯತ್ತ ಗಮನ ಹರಿಸಿದ್ದರು. ಆ ಸಂದರ್ಭದಲ್ಲಿ ಮೋದಿಯವರ ರಸ್ತೆ ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಹಾಳಾಗಿದ್ದ ಬಿಎಚ್ ರಸ್ತೆಯನ್ನು ದುರಸ್ಥಿಗೊಳಿಸಿ ಹೊಸ ಮಧುವಣಗಿತ್ತಿಯಂತೆ ತಯಾರು ಮಾಡಿದ್ದರು.
      ಈ ಹಿಂದೆ ಹಲವು ಬಾರಿ ರಸ್ತೆಯಲ್ಲಿನ ಹಳ್ಳಕೊಳ್ಳಗಳಿಂದ ಅದೆಷ್ಟೊ ಅಪಘಾತಗಳು ನಡೆದು, ಅನೇಕ ಜನ ಆಸ್ಪತ್ರೆ ಪಾಲಾಗಿದ್ದರು. ಈ ಬಗ್ಗೆ ಮಾಧ್ಯಮದಲ್ಲಿ ವರದಿಗಳು ಕೂಡ ಪ್ರಕಟಗೊಂಡಿದ್ದವು. ಆದರೆ ಈ ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಜಿಲ್ಲಾಡಳಿತ ನಗರಕ್ಕೆ ಮೋದಿ ಭೇಟಿ ನೀಡುತ್ತಾರೆ ಎಂಬ ವಾರ್ತೆ ತಿಳಿಯುತ್ತಿದ್ದಂತೆಯೆ ಬಟವಾಡಿಯಿಂದ ಭದ್ರಮ್ಮ ವೃತ್ತದವರೆಗಿನ ರಸ್ತೆಯನ್ನು ಸಿದ್ಧಪಡಿಸಲಾಯಿತು. ಜೊತೆಗೆ ಬಟವಾಡಿ ವೃತ್ತ, ಎಸ್ಪಿ ಕಚೇರಿ ಎದುರು, ವಿಶ್ವವಿದ್ಯಾಲಯ ಎದುರು, ಸಿದ್ಧಗಂಗಾ ಹೈಸ್ಕೂಲ್ ಬಳಿಯ ಹಂಪ್ಸ್‍ಗಳನ್ನು ತೆರವುಗೊಳಿಸಲಾಗಿದ್ದು, ಮತ್ತೆ ಅವುಗಳನ್ನು ಅಳವಡಿಸುವ ಗೋಜಿಗೆ ಹೋಗಿಲ್ಲ.
ವಾಹನಗಳ ವೇಗದ ಚಾಲನೆ
    ಬಿಎಚ್ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಈ ರಸ್ತೆಯಲ್ಲಿ 60ಕಿಮೀ ವೇಗದಲ್ಲಿ ವಾಹನಗಳು ಚಲಿಸುತ್ತವೆ. ದ್ವಿಚಕ್ರ ವಾಹನಗಳಿಗಂತೂ ವೇಗದ ನಿಯಂತ್ರಣವೇ ಇರುವುದಿಲ್ಲ. ಹೀಗಿದ್ದಾಗ ಹಂಪ್ಸ್‍ಗಳಿರುವ ಕಡೆ ವಾಹನವನ್ನು ನಿಧಾನ ಮಾಡಲಾಗುತ್ತದೆ. ಆದರೆ ಇದೀಗ ಹಂಪ್ಸ್‍ಗಳನ್ನು ತೆರವುಗೊಳಿಸಿದ್ದರಿಂದ ವಾಹನಗಳ ವೇಗಕ್ಕೆ ಮಿತಿ ಇಲ್ಲದಂತಾಗಿದೆ. ದ್ವಿಚಕ್ರ ವಾಹನಗಳಿಂದ ಹಿಡಿದು ಆಟೋ, ಕಾರುಗಳು ಕೂಡ ಅತಿ ವೇಗವಾಗಿ ಚಲಿಸುತ್ತಿವೆ.
ರಸ್ತೆ ದಾಟಲು ಹೆದರುತ್ತಿರುವ ಜನ
    ಭದ್ರಮ್ಮ ವೃತ್ತದಿಂದ ಸಿದ್ದಗಂಗಾ ಪ್ರೌಢಶಾಲೆಯವರೆಗೆ, ಅಲ್ಲಿಂದ ಎಸ್‍ಎಸ್ ವೃತ್ತದವರೆಗೆ, ಶಿವಕುಮಾರಸ್ವಾಮಿ ವೃತ್ತದಿಂದ ಎಸ್‍ಪಿ ಕಚೇರಿ, ಎಸ್‍ಪಿ ಕಚೇರಿಯಿಂದ ಎಸ್‍ಐಟಿ ಕಾಲೇಜು ವರೆಗೆ, ಅಲ್ಲಿಂದ ಬಟವಾಡಿ ವೃತ್ತದವರೆಗೆ ರಸ್ತೆಯ ಮಧ್ಯಭಾಗದಲ್ಲಿ ಗ್ರಿಲ್ ಅಳವಡಿಕೆ ಮಾಡಿರುವುದರಿಂದ ಅಲ್ಲಲ್ಲಿ ಇರುವ ಯೂಟರ್ನ್‍ಗಳ ಮೂಲಕವೆ ಜನರು ರಸ್ತೆ ದಾಟಬೇಕಿದೆ. ಇದೀಗ ವಾಹನಗಳ ವೇಗದ ಚಾಲನೆಯಿಂದ ಜನರು ರಸ್ತೆ ದಾಟಲು ಹೆದರುತ್ತಿದ್ದಾರೆ. 
ಹೆಚ್ಚುತ್ತಿರುವ ಅಪಘಾತಗಳು
     ರಸ್ತೆಯ ಮೂರ್ನಾಲ್ಕು ಕಡೆಗಳಲ್ಲಿ ಮಾತ್ರ ಯೂಟರ್ನ್ ತೆಗೆದುಕೊಳ್ಳಲು ದಾರಿ ಮಾಡಲಾಗಿದೆ. ಈ ಮೂಲಕವೇ ವಾಹನಗಳು ಯೂಟರ್ನ್ ತೆಗೆದುಕೊಂಡು ತಮ್ಮ ದಿಕ್ಕಿನೆಡೆಗೆ ಚಲಿಸುತ್ತಿದ್ದವು. ಹಂಪ್ಸ್‍ಗಳು ಇದ್ದ ಕಾರಣ ಈ ವಾಹನಗಳು ರಸ್ತೆ ಬದಲಾಯಿಸಿಕೊಳ್ಳಲು ಸುಲಭವಾಗಿತ್ತು. ಇದೀಗ ಹಂಪ್ಸ್‍ಗಳು ತೆರವುಗೊಳಿಸಿರುವುದರಿಂದ ವಾಹನಗಳು ಸುಗಮವಾಗಿ ರಸ್ತೆ ಬದಲಾಯಿಸಲು ಆಗುತ್ತಿಲ್ಲ. ಜೊತೆಗೆ ದಿನೆ ದಿನೆ ಅಪಘಾತಗಳು ಹೆಚ್ಚಾಗುತ್ತಿವೆ. 
ನಿಲ್ಲದ ಸಂಚಾರಿ ಪೊಲೀಸರು
   ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ವಾಹನಗಳ ಓಡಾಟ ಹೆಚ್ಚಾಗಿದೆ. ಈ ನಡುವೆ ಸುಗಮ ಸಂಚಾರಕ್ಕಾಗಿ ಟ್ರಾಫಿಕ್ ಪೊಲೀಸರನ್ನು ನಿಲ್ಲಿಸಿದರೆ ಅನುಕೂಲವಾಗುತ್ತದೆ. ಆದರೆ ಟೌನ್‍ಹಾಲ್, ಎಸ್‍ಎಸ್ ವೃತ್ತ ಹೊರತು ಪಡಿಸಿದರೆ ಇನ್ನೆಲ್ಲಿಯೂ ಸಂಚಾರಿ ಪೊಲೀಸರು ನಿಂತಿರುವುದಿಲ್ಲ. ಕಾಕತಾಳಿಯವೆಂಬಂತೆ ಎಸ್‍ಪಿ ಕಚೇರಿ ಮುಂಭಾಗದಲ್ಲಿರುವ ರಸ್ತೆಯ ಬಳಿ ಒಬ್ಬರು ಕಾಣಿಸಿಕೊಳ್ಳುತ್ತಾರೆ. ಆಗಾಗ್ಗೆ ಬಟವಾಡಿ ಬಳಿ ಒಬ್ಬಿಬ್ಬರು ಕಾಣಿಸಿಕೊಳ್ಳುತ್ತಾರೆ ಅಷ್ಟೆ..!
ಗಮನ ಹರಿಸದ ಅಧಿಕಾರಿಗಳು
    ನಗರಕ್ಕೆ ಮೋದಿ ಬರುತ್ತಾರೆ ಎಂಬ ಕಾರಣಕ್ಕೆ ನಿಯಮಗಳ ಪ್ರಕಾರ ಅಧಿಕಾರಿಗಳು ರಸ್ತೆಯ ಹಂಪ್ಸ್‍ಗಳನ್ನು ಕಿತ್ತು ಹಾಕಿದರು. ಮೋದಿ ಬಂದು ಹೋದ ನಂತರ ರಸ್ತೆಯಲ್ಲಿ ಅವಶ್ಯ ಇರುವ ಕಡೆಯಲ್ಲಿ ಹಂಪ್ಸ್‍ಗಳನ್ನು ಅಳವಡಿಸಬೇಕಿತ್ತು. ಆದರೆ ಇಲ್ಲಿಯವರೆಗೆ ಈ ಕೆಲಸ ಮಾಡಿಯೇ ಇಲ್ಲ. ಇದಕ್ಕೆ ಅಧಿಕಾರಿಗಳ ಜಾಣಕುರುಡು ಕಾರಣವೇ ಅಥವಾ ಇಚ್ಛಾಶಕ್ತಿಯ ಕೊರತೆಯೋ ತಿಳಿಯದಾಗಿದೆ. ಒಟ್ಟಾರೆಯಾಗಿ ಜಿಲ್ಲಾಡಳಿತದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ, ರಾಷ್ಟ್ರೀಯ ಹೆದ್ದಾರಿ ಸಂಬಂಧಪಟ್ಟವರಾಗಲಿ ಈ ಬಗ್ಗೆ ಗಮನ ಹರಿಸುತ್ತಿಲ್ಲ. 
    ರಸ್ತೆಯ ಹಂಪ್ಸ್‍ಗಳನ್ನು ತೆರವುಗೊಳಿಸಿ ಸುಮಾರು 20ಕ್ಕೂ ಹೆಚ್ಚು ದಿನಗಳಾದರೂ ಈ ಸಂಬಂಧ ಯಾರೂ ಗಮನ ಹರಿಸದೇ ಇರುವುದು ವಿಪರ್ಯಾಸವಾಗಿದೆ. ಕೇವಲ ಜನಪ್ರತಿನಿಧಿಗಳ ಜೀವಕ್ಕೆ ಇರುವ ಬೆಲೆ ಸಾಮಾನ್ಯ ಜನಕ್ಕೆ ಇಲ್ಲದಾಗಿದೆ. ಕಳೆದ 20 ದಿನಗಳಲ್ಲಿ ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಬಹುಶಃ ಈ ರಸ್ತೆಯಲ್ಲಿ ಹಂಪ್ಸ್‍ಗಳನ್ನು ಹಾಕಲು ಯಾರಾದರೂ ಪ್ರಾಣ ಬಿಡಬೇಕೋ ಏನೋ.
ವೆಂಕಟೇಶ್, ಆಟೋ ಚಾಲಕರು
   ಹಂಪ್ಸ್‍ಗಳನ್ನು ತೆಗೆದಾಗಿನಿಂದ ಅಪಘಾತಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಭೆ ಕೂಡ ನಡೆಸಲಾಗಿದೆ. ಮೂರ್ನಾಲ್ಕು ದಿನಗಳಲ್ಲಿ ರಸ್ತೆ ಕಾಮಗಾರಿಯ ಪ್ಯಾಚ್‍ವರ್ಕ್ ಪ್ರಾರಂಭ ಮಾಡಲಾಗುತ್ತದೆ. ಆಗ ಮೊದಲು ಹಂಪ್ಸ್‍ಗಳನ್ನು ಹಾಕಿದ ನಂತರವಷ್ಟೇ ಮುಂದಿನ ಕಾಮಗಾರಿ ಮಾಡಲಾಗುತ್ತದೆ. 
ಸಂಪತ್‍ಕುಮಾರ್, ರಾ.ಹೆ. ಸಹಾಯಕ ಅಭಿಯಂತರರು
   ಹಂಪ್ಸ್‍ಗಳು ತೆರವುಗೊಳಿಸಿರುವುದರಿಂದ ದಿನೆ ದಿನೆ ಅಪಘಾತಗಳು ಹೆಚ್ಚುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ಹಂಪ್ಸ್‍ಗಳನ್ನು ಹಾಕುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇಂದು ಅಥವಾ ನಾಳೆಯೊಳಗೆ ಬಟವಾಡಿ ವೈ ಜಂಕ್ಷನ್‍ನಿಂದ ಭದ್ರಮ್ಮ ವೃತ್ತದವರೆಗೆ 5 ಕಡೆಗಳಲ್ಲಿ ಹಂಪ್ಸ್ ಹಾಕಲಿದ್ದಾರೆ.
ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link