ತುಮಕೂರು
ರಾಜ್ಯದ ಸೌಹಾರ್ದ ಸಹಕಾರಿಗಳು ಆದಾಯ ತೆರಿಗೆ ಕಲಂ 80ಪಿ(2)ರ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವೆಂದು ರಾಜ್ಯ ಉಚ್ಛ ನ್ಯಾಯಾಲಯ ತೀರ್ಪು ನೀಡಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಬಿ.ಎಚ್.ಕೃಷ್ಣಾರೆಡ್ಡಿ ತಿಳಿಸಿದರು.
ನಗರದ ಸೇಕ್ರೆಡ್ ಹಾರ್ಟ್ ಸೌಹಾರ್ದ ಸಹಕಾರಿ ನಿ. ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಸ್ವಾಯತ್ತ ಸಹಕಾರ ಕಾಯ್ದೆಯಾದ ಸೌಹಾರ್ದ ಸಹಕಾರಿ ಅಧಿನಿಯಮದಡಿ ನೋಂದಾಯಿತ ಸೌಹಾರ್ದ ಸಹಕಾರಿಗಳು ಸಹಕಾರಿ ಸಂಘಗಳಲ್ಲ ಎಂದು ಆದಾಯ ತೆರಿಗೆ ಇಲಾಖಾಧಿಕಾರಿಗಳು ತೆರಿಗೆ ಕಟ್ಟುವಂತೆ ನೋಟೀಸ್‍ಗಳನ್ನು ನೀಡುತ್ತಿರುವುದನ್ನು ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಸತತ ಎರಡು ವರ್ಷಗಳ ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ರಾಜ್ಯ ಉಚ್ಛ ನ್ಯಾಯಾಲಯ ರಾಜ್ಯದ ಸೌಹಾರ್ದ ಸಹಕಾರಿಗಳು ಆದಾಯ ತೆರಿಗೆ ಕಲಂ 80ಪಿ(2)ರ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವೆಂದು ಐತಿಹಾಸಿಕ ತೀರ್ಪು ನೀಡಿದೆ ಎಂದರು.
ಸೌಹಾರ್ದ ಸಹಕಾರ ಕ್ಷೇತ್ರದ ಆದಾಯ ತೆರಿಗೆ ತೊಂದರೆ ನಿವಾರಣೆ ದೃಷ್ಠಿಯಿಂದ ಸೌಹಾರ್ದ ಸಹಕಾರಿಗಳು ಕೂಡ ಸಹಕಾರಿ ಸಂಘ ಎಂದು ಸೌಹಾರ್ದ ಸಹಕಾರಿ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡಿಕೊಡಲು ಅಥವಾ ಅದೇಶ ಹೊರಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಹಾಗೂ ಸಹಕಾರ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿಯವರನ್ನು ಭೇಟಿ ಮಾಡಿ ವಿನಂತಿಸಿಕೊಂಡಿದ್ದು, ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ರಾಜ್ಯ ಹೈಕೋರ್ಟ್ ತೀರ್ಪು ಬಂದಿರುವುದು ಸೌಹಾರ್ದ ಸಹಕಾರಿಗಳಿಗೆ ಪೂರಕವಾಗಿದೆ ಎಂದು ತಿಳಿಸಿದರು.
ನಿರ್ಮಲಾ ಸೀತಾರಾಮನ್ ಭೇಟಿ
ಜ.20ರಂದು ಬಡ್ಜೆಟ್ ಪೂರ್ವ ಸಿದ್ಧತೆ ಹಾಗೂ ಸಹಕಾರ ಕ್ಷೇತ್ರದ ಆದಾಯ ತೆರಿಗೆ ತೊಂದರೆಗಳ ನಿವಾರಣೆ ಕುರಿತಂತೆ ಸಹಕಾರ ಭಾರತೀಯ ಸಭೆ ನಡೆದಿದ್ದು, ಈ ಸಭೆಯಲ್ಲಿ ಸಹಕಾರ ಸಂಸ್ಥೆಗಳಿಗೆ 80ಪಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದ್ದರೂ ತೆರಿಗೆ ಅಧಿಕಾರಿಗಳು ನೋಟೀಸ್ ನೀಡುವ ಮೂಲಕ ಗೊಂದಲ ಮೂಡಿಸುತ್ತಿರುವುದು. ರಾಜ್ಯ ಕಾಯ್ದೆಯಲ್ಲಿರುವ ಸಹ ಸದಸ್ಯರು ಹಾಗೂ ನಾಮ ಮಾತ್ರ ಸದಸ್ಯರ ಅವಕಾಶವನ್ನು ಪರಿಗಣಿಸದೆ ಇವರೊಂದಿಗೆ ವ್ಯವಹಾರಕ್ಕೆ ತೆರಿಗೆ ವಿಧಿಸುತ್ತಿರುವುದರ ಬಗ್ಗೆ ಚರ್ಚೆ ಮಾಡಲಾಯಿತು ಎಂದು ತಿಳಿಸಿದರು.
ಸಹಕಾರ ಬ್ಯಾಂಕುಗಳಿಗೆ ಅನ್ವಯವಾಗುವ ಪ್ರಾವಧಾನವನ್ನು ಸಹಕಾರ ಸಂಸ್ಥೆಗಳಿಗೂ ಅನ್ವಯಿಸುತ್ತರುವುದು. ಸಹಕಾರಿಗಳು ಬ್ಯಾಂಕಿನಲ್ಲಿಟ್ಟಿರುವ ಮೀಸಲು ನಿಧಿಗಳ ಮೇಲಿನ ಬಡ್ಡಿಗೆ ತೆರಿಗೆ ಪಾವತಿಸಲು ಸೂಚಿಸುತ್ತಿರುವುದು. ಸಹಕಾರ ಕ್ಷೇತ್ರಕ್ಕೆ ಮಾರಕವಾಗುವಂತಹ 269ಎಸ್‍ಟಿ, 194ಎನ್ ಸೆಕ್ಷನ್‍ಗಳ ಮೂಲಕ ನಗದು ವ್ಯವಹಾರಕ್ಕೆ ಕಡಿವಾಣ ವಿಧಿಸುತ್ತಿರುವುದು. 269 ಎಸ್‍ಎಸ್ ಹಾಗೂ 269 ಟಿ ಮೂಲಕ ಸಾಲ ಹಾಗೂ ಠೇವಣಿ ವ್ಯವಹಾರಗಳಿಗೆ ರೂ.20,000/-ಗಳ ನಗದು ಮಿತಿ ವಿಧಿಸಿರುವುದು. ಅಪನಗದೀಕರಣ ಸಂದರ್ಭದಲ್ಲಿ ಸದಸ್ಯರಿಂದ ಬಂದಿರುವ ಬ್ಯಾಂಕಿಗೆ ಜಮಾ ಮಾಡಲಾದ ನೋಟುಗಳ ಮೊತ್ತಕ್ಕೆ ಸಮನಾದ ಮೊತ್ತವನ್ನು ದಂಡ ಮತ್ತು ಬಡ್ಡಿಯಾಗಿ ವಿಧಿಸುವ ಬಗ್ಗೆ ನೋಟೀಸ್ ನೀಡುತ್ತಿರುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಚರ್ಚೆ ಮಾಡಲಾಗಿದೆ ಎಂದರು.
ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಿದ್ದು, ಈ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಲಾಗಿದ್ದು, ಈ ಬಗ್ಗೆ ಸಚಿವರು ಸ್ಪಂಧಿಸಿ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮವಿಡುವ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಸೌಹಾರ್ದ ಸಹಕಾರಿಗಳ ಸಂಖ್ಯಾತ್ಮಕ ಬೆಳವಣಿಗೆಯ ಜೊತೆಗೆ ಗುಣಾತ್ಮಕ ಬೆಳವಣಿಗೆಯೂ ಸಹ ಸಂಯುಕ್ತ ಸಹಕಾರಿಯ ಆಡಳಿತ ಮಂಡಳಿಯ ಆದ್ಯತಾ ವಲಯವಾಗಿದೆ. ಆದಾಯ ತೆರಿಗೆ ತೊಂದರೆಗಳಿಂದಾಗಿ ಸಹಕಾರ ಕ್ಷೇತ್ರಕ್ಕೆ ಆಗುತ್ತಿರುವ ಹಿನ್ನಡೆಗಳನ್ನು ಮೀರಿ ಸಹಕಾರಿಗಳು ಗುಣಾತ್ಮಕವಾಗಿ ಬೆಳವಣಿಗೆ ಸಾಧಿಸಬೇಕಾಗ ಅಗತ್ಯವಿದೆ ಎಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಲಕ್ಷ್ಮೀನಾರಾಯಣ, ಉಪಾಧ್ಯಕ್ಷ ಲ್ಯಾನ್ಸಿ ಎಚ್ ಪಾಯ್ಸ್, ನಿರ್ದೇಶಕ ಸುರೇಶ್‍ರಾವ್, ಸಂಯುಕ್ತ ಸಹಕಾರಿಯ ನಿರ್ದೇಶಕ ಬಿ.ಗಂಗಾಧರಯ್ಯ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ