ಅಮೃತ್ ಯೋಜನೆಯಡಿ ಕಾಮಗಾರಿ ಪುನರಾವರ್ತನೆಯಾಗಿಲ್ಲ

ತುಮಕೂರು
    ತುಮಕೂರು ನಗರದಲ್ಲಿ ಅಮೃತ್ ಯೋಜನೆ ಅನುದಾನದಲ್ಲಿ ನಡೆಯುತ್ತಿರುವ ಯಾವುದೇ ಕಾಮಗಾರಿಗಳು ಪುನರಾವರ್ತನೆಗೊಂಡಿಲ್ಲ ಎಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಪಾಲನ್ ಸ್ಪಷ್ಟಪಡಿಸಿದ್ದಾರೆ.
    ಅಮೃತ್ ಯೋಜನೆ ಕಾಮಗಾರಿಗಳಲ್ಲಿ ಅಕ್ರಮಗಳಾಗುತ್ತಿವೆ ಎಂದು ದೂರಿ ತುಮಕೂರಿನ ಸಾರ್ವಜನಿಕ ಹೋರಾಟಗಾರ ಇಮ್ರಾನ್ ಪಾಷ ಇತ್ತೀಚೆಗೆ ಮುಖ್ಯಮಂತ್ರಿ ಕಚೇರಿಗೆ ಇ-ಜನಸ್ಪಂದನ ತಂತ್ರಾಂಶದ ಮೂಲಕ ದೂರು ಸಲ್ಲಿಸಿದ್ದರು. ಸದರಿ ದೂರು ಅರ್ಜಿಯನ್ನು ಅಲ್ಲಿಂದ ಮಹಾನಗರ ಪಾಲಿಕೆ ಕಚೇರಿಗೆ ರವಾನಿಸಿದ್ದು, ಆ ಅರ್ಜಿಗೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರು ಇತ್ತೀಚೆಗೆ ಇಮ್ರಾನ್ ಪಾಷ ಅವರಿಗೆ ನೀಡಿರುವ ಹಿಂಬರಹದಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.
ಪಾಲಿಕೆಗೆ 26.50 ಕೋಟಿ ರೂ.
    ಕೇಂದ್ರ ಪುರಸ್ಕøತ ಅಮೃತ್ ಯೋಜನೆಯ ಅನುದಾನದಲ್ಲಿ ತುಮಕೂರು ಮಹಾನಗರ ಪಾಲಿಕೆಗೆ ಒಟ್ಟು 26.50 ಕೋಟಿ ರೂ.ಗಳನ್ನು ನೀಡಲಾಗಿದೆ. ಈ ಅನುದಾನವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ ಎಂದು ಹಿಂಬರಹದಲ್ಲಿ ತಿಳಿಸಲಾಗಿದ್ದು, ಉಳಿದ ವಿವರ ಈ ಕೆಳಕಂಡಂತಿದೆ:- 
1)ಮಳೆ ನೀರಿನ ಚರಂಡಿ ಕಾಮಗಾರಿ ಕೈಗೊಳ್ಳಲು ಒಟ್ಟು 6.90 ಕೋಟಿ ರೂ. ನೀಡಲಾಗಿದೆ. ಇದರಲ್ಲಿ ಒಟ್ಟು 4 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ 2 ಕಾಮಗಾರಿಗಳು ಪೂರ್ಣಗೊಂಡಿದ್ದು, 2.37 ಕೋಟಿ ರೂ. ವೆಚ್ಚವಾಗಿದೆ. ಉಳಿದ 2 ಕಾಮಗಾರಿಗಳು ಪ್ರಗತಿಯಲ್ಲಿವೆ.
2)ಹಸಿರು ಜಾಗ ಮತ್ತು ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗೆ 6.07 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. ಇದರಲ್ಲಿ 12 ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈವರೆಗೆ 10 ಕಾಮಗಾರಿಗಳು ಪೂರ್ಣಗೊಂಡಿವೆ. 2 ಕಾಮಗಾರಿಗಳು ಪ್ರಗತಿಯಲ್ಲಿವೆ. ಈವರೆಗೆ 3.64 ಕೋಟಿ ರೂ. ವೆಚ್ಚವಾಗಿದೆ.
3)ನಗರ ಸಂಚಾರ (ಟ್ರಾಫಿಕ್)ಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು 13.53 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. ಇದರಲ್ಲಿ ಒಟ್ಟು 16 ಕಾಮಗಾರಿಗಳನ್ನು ಕೈಗೊಳ್ಳಲುದ್ದೇಶಿಸಿದ್ದು, ಈವರೆಗೆ 12 ಕಾಮಗಾರಿಗಳು ಪೂರ್ಣಗೊಂಡಿವೆ.  4 ಕಾಮಗಾರಿಗಳು ಪ್ರಗತಿಯಲ್ಲಿವೆ. ಈವರೆಗೆ ಒಟ್ಟು 5.96 ಕೋಟಿ ರೂ. ವೆಚ್ಚವಾಗಿದೆಯೆಂದು ಆಯುಕ್ತರು ಪಟ್ಟಿ ಮಾಡಿದ್ದಾರೆ.
      ಸದರಿ ಕಾಮಗಾರಿಗಳನ್ನು ಸ್ಮಾರ್ಟ್‍ಸಿಟಿ  ವತಿಯಿಂದ ನಿರ್ವಹಿಸಿರುವ ಜಾಗಗಳಲ್ಲಿ ಪಾಲಿಕೆ ವತಿಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು ಕಾಮಗಾರಿಯನ್ನು ಕೈಗೊಂಡಿದ್ದಾರೆ. ಇದರಲ್ಲಿ ಯಾವುದೇ ಕಾಮಗಾರಿಗಳು ಪುನರಾವರ್ತಿತವಾಗಿಲ್ಲ ಎಂದು ಆಯುಕ್ತರು ಸದರಿ ಹಿಂಬರಹದಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಾಹಿತಿ ಮುಚ್ಚಿಟ್ಟ ಸಿಬ್ಬಂದಿ
     ಅಮೃತ್ ಯೋಜನೆಯಡಿ ಕೈಗೊಂಡಿರುವ ಮಳೆ ನೀರಿನ ಚರಂಡಿ ಕುರಿತಾದ ಕ್ರಿಯಾಯೋಜನೆ ಮತ್ತು ಅಂದಾಜು ವೆಚ್ಚದ ದಾಖಲಾತಿಗಳನ್ನು ನೀಡುವಂತೆ ಆರಂಭದ ದಿನದಿಂದಲೂ ಮಹಾನಗರ ಪಾಲಿಕೆಯ ತಾಂತ್ರಿಕ ಶಾಖೆಯನ್ನು ಕ್ರಮಬದ್ಧವಾಗಿ ಒತ್ತಾಯಿಸುತ್ತ ಬಂದಿದ್ದರೂ, ತಾಂತ್ರಿಕ ಶಾಖೆಯ ಮುಖ್ಯಸ್ಥರುಗಳು ಉದ್ದೇಶಪೂರ್ವಕವಾಗಿ ಸದರಿ ಮಾಹಿತಿಯನ್ನು ನೀಡದೆ ಗೌಪ್ಯತೆ ಕಾಪಾಡುತ್ತಿದ್ದಾರೆ. ಇದು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ಆರೋಪಿಸಿರುವ ದೂರು ಅರ್ಜಿದಾರ ಇಮ್ರಾನ್ ಪಾಷ, ಈ ಬಗ್ಗೆ ಪ್ರಸ್ತುತ ಪಾಲಿಕೆ ಆಯುಕ್ತ ಭೂಪಾಲನ್ ಅವರ ಗಮನವನ್ನು ಸೆಳೆಯಲಾಗುತ್ತಿದೆ ಎಂದಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap