ಚಿತ್ರದುರ್ಗ; :
ಮಕ್ಕಳು ಶಾಲೆ ಬಿಡದಂತೆ ನಿಗಾವಹಿಸಿ, ಅವರಿಗೆ ಉತ್ತಮ ಶಿಕ್ಷಣ ನೀಡುವತ್ತ ಶಿಕ್ಷಣ ಇಲಾಖೆ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಿ.ಪಿ.ಡಿ, ಟಿ.ಡಿ. ಲಸಿಕಾ ಅಭಿಯಾನ ಹಾಗೂ ಮಿಷನ್ ಇಂಧ್ರ ಧನುಷ್-2 ಲಸಿಕಾ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ವಲಸೆ ಹೋಗುವ ಪದ್ಧತಿ, ಬಾಲ್ಯ ವಿವಾಹಕ್ಕೆ ದೂಡುವುದು, ಮಕ್ಕಳನ್ನು ದುಡಿಮೆಗೆ ಹಚ್ಚುವುದು, ಅಪೌಷ್ಠಿಕತೆ ಹಾಗೂ ಬಡತನದಂತಹ ಕಾರಣಗಳಿಂದ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಾಗುವ ಸಂಭವವಿರುತ್ತದೆ. ಆದ್ದರಿಂದ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಡಿಡಿಪಿಐ ಅವರು ಶಾಲೆ ಬಿಟ್ಟ ಮಕ್ಕಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ.
ಪ್ರತಿಯೊಂದು ಮಗು 6 ನೇ ತರಗತಿಗೆ ಸೇರಿದ ಕೂಡಲೇ ಆಧಾರ್ ಸಹಿತ ಹಾಜರಾತಿ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಶಾಲೆಯಿಂದ ದೂರ ಉಳಿದ ಮಗುವಿನ ಕುಟುಂಬದವರಿಗೆ ಮಕ್ಕಳ ವಿದ್ಯಾಭ್ಯಾಸ, ವಿದ್ಯಾರ್ಥಿಗಳಿಗೆ ಉಚಿತ ವಸತಿ, ಶಿಕ್ಷಣ ವ್ಯವಸ್ಥೆ ಹಾಗೂ ಸರ್ಕಾರ ರೂಪಿಸಿರುವ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಬಾಲಕಾರ್ಮಿಕ, ಬಾಲ್ಯ ವಿವಾಹಕ್ಕೆ ಸರ್ಕಾರ ವಿಧಿಸುವ ಶಿಕ್ಷೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು.
ಜಿಲ್ಲೆಯಲ್ಲಿ ಒಟ್ಟು ಶಾಲೆ ಬಿಟ್ಟ ಮಕ್ಕಳ ಬಗ್ಗೆ ಸೆಪ್ಟಂಬರ್‌ನಲ್ಲಿ ವರದಿ ಸಲ್ಲಿಸುವುದಾಗಿ ಹೇಳಿದ್ದು, ಇದುವರೆಗೂ ಯಾವುದೇ ಪ್ರತಿಕ್ರಿಯೆ ಇಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಪ್ರಸ್ತ ಸನ್ನಿವೇಶದಲ್ಲಿ ಬಾಲ್ಯವಿವಾಹ ಕೂಡ ಒಂದು ದೊಡ್ಡ ಸವಾಲಾಗಿದ್ದು ಮಕ್ಕಳ ಶಾಲಾ ದಾಖಲಾತಿ ಮತ್ತು ವರ್ಗಾವಣೆ ಪತ್ರವಿದ್ದರೇ ಅವರ ವಯಸ್ಸನ್ನು ಸುಲಭವಾಗಿ ಪತ್ತೆ ಹಚ್ಚಿ, ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು. ಶಿಕ್ಷಣ ಇಲಾಖೆ ಆದಷ್ಟು ಬೇಗ ಶಾಲೆ ಬಿಟ್ಟ ಮಕ್ಕಳನ್ನು ಪತ್ತೆ ಹಚ್ಚಿ, ಅವರ ಸಂಪೂರ್ಣ ವಿವರದೊಂದಿಗೆ ಮಾಹಿತಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಆರೋಗ್ಯ ಇಲಾಖೆಯು ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಹಲವಾರು ಲಸಿಕೆಗಳನ್ನು ಅಭಿವೃದ್ಧಿ ಪಡಿಸಿದೆ. ಈ ಎಲ್ಲಾ ಲಸಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾಹಿತಿ ಅತ್ಯಗತ್ಯ. ಪಂಚಾಯಿತಿಗಳಲ್ಲಿ ಡಂಗೂರದಿಂದ, ಆಯಾ ಶಾಲಾ ಮುಖ್ಯೋಪಾಧ್ಯಾಯ ರಿಂದ ಹಾಗೂ ಜಾಹಿರಾತುಗಳ ಮೂಲಕ ಮಾಹಿತಿ ನೀಡಬೇಕು.
ಧನುರ್ವಾಯು (ಡಿಪಿಐ) ಮತ್ತು ಗಂಟಲು ಮಾರಿ (ಟಿಡಿ) ರೋಗಗಳನ್ನು ತಡೆಯಲು ಜುಲೈ ನಿಂದ ಅಕ್ಟೋಬರ್ ವರೆಗೆ ದಿನಕ್ಕೆ 200 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಲಸಿಕೆಯನ್ನು ನುರಿತ ತರಬೇತಿ ಹೊಂದಿದವರಿಂದ ನೀಡಲಾಗಿದೆ. ಇಂದ್ರಧನುಷ್ 2018 ರಲ್ಲಿ ಲಸಿಕೆ ಶೇ.73 ರಷ್ಟು ಸಾಧನೆ ಮಾಡಿದೆ. ತಾಯಿ ಕಾರ್ಡ್ ವಿತರಣೆ ಹಾಗೂ ಸೂಕ್ತ ವರದಿ ಇದ್ದರೇ, 2020 ರವರೆಗೆ ಜಿಲ್ಲೆಯು ಲಸಿಕೆ ಕಾರ್ಯಕ್ರಮದಲ್ಲಿ ಶೇ. 100 ರಷ್ಟು ಸಾಧನೆ ಮಾಡುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಲಸಿಕೆಗಳ ಬಗ್ಗೆ ಜಾಹಿರಾತು ಭಿತ್ತರಿಸಿದರೇ ಸಾರ್ವಜನಿಕ ರನ್ನು ಬಹುಬೇಗ ತಲುಪುವ ಸಾಧ್ಯತೆಯಿದೆ. ಮಕ್ಕಳ ಆರೋಗ್ಯದ ತಪಾಸಣೆಗಾಗಿ ನೀಡುವ ತಾಯಿ ಕಾರ್ಡ್ ಬಗ್ಗೆ ಅಂಗನವಾಡಿ ಮತ್ತು ಶಾಲೆಗಳು ಹೆಚ್ಚು ಗಮನಹರಿಸಬೇಕು. ಲಸಿಕಾ ಕಾರ್ಯಕ್ರಮವಾದ ನಂತರ ಆ ಕಾರ್ಡ್ ಅಗತ್ಯ. ತಾಯಿ ಕಾರ್ಡ್ ಮಗುವಿನ ಆರೋಗ್ಯದ ಹಂತವನ್ನು ತಿಳಿಸುವಲ್ಲಿ ಸಹಕಾರಿ. ಇದರ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಬೇಕು. ಹಾಗೆಯೇ ಲಸಿಕೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಒಂದು ಪ್ರಮಾಣ ಪತ್ರ ನೀಡಿದರೇ, ಲಸಿಕೆಯಿಂದ ದೂರ ಉಳಿದ ಮಕ್ಕಳ ಪತ್ತೆಗೆ ಸಹಾಯವಾಗುತ್ತದೆ ಎಂದರು.
ಸಭೆಯಲ್ಲಿ ಡಿಡಿಪಿಐ ರವಿಶಂಕರ್‌ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯಕ್, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಸಯ್ಯದ್ ಮಹಮ್ಮದ್ ಮುಬಿನ್, ಆರ್.ಸಿ.ಹೆಚ್ ಅಧಿಕಾರಿಗಳು, ತಾಲ್ಲೂಕು ಮಟ್ಟದ ಆರೋಗ್ಯಾಧಿಕಾರಿಗಳು, ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಸಿಎಂ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ