ಬೆಂಗಳೂರು
ಆಪರೇಷನ್ ಕಮಲ ಕಾರ್ಯಾಚರಣೆ ಕುರಿತ ಆಡಿಯೋ ಪ್ರಕರಣದ ಬಗ್ಗೆ ಎಸ್.ಐ.ಟಿ ತನಿಖೆಗೆ ಬಿಜೆಪಿ ಎರಡನೇ ದಿನವೂ ಸಹ ವಿರೋಧ ವ್ಯಕ್ತಪಡಿಸಿದೆ. ಸರ್ಕಾರ ಎಸ್.ಐ.ಟಿ ತನಿಖೆಯ ನಿಲುವಿನಿಂದ ಹಿಂದೆ ಸರಿಯಲು ನಿರಾಕರಿಸಿದೆ. ಮಂಗಳವಾರ ಇಡೀ ದಿನ ವಿಧಾನಸಭೆಯಲ್ಲಿ ಭಾರೀ ವಾದ, ಪ್ರತಿವಾದ ನಡೆಯಿತು. ಅಂತಿಮವಾಗಿ ಸಭಾಧ್ಯಕ್ಷ ರಮೇಶ್ ಕುಮಾರ್ ಬುಧವಾರ ಬೆಳಗ್ಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಡಳಿತ ಮತ್ತು ಪ್ರತಿಪಕ್ಷ ಮುಖಂಡರ ಸಭೆ ಕರೆದಿದ್ದಾರೆ. ಇಂದು ಪ್ರಕರಣ ತಾರ್ಕಿಕ ಅಂತ್ಯ ಕಾಣುವ ನಿರೀಕ್ಷೆಯಿದೆ.
ಆದರೆ ಬಿಜೆಪಿ ನಾಯಕರು ಈ ಪ್ರಕರಣದ ಬಗ್ಗೆ ಸದನ ಸಮಿತಿ ರಚಿಸಿ, ಇಲ್ಲವಾದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಿ. ಸ್ವತಃ ಮುಖ್ಯಮಂತ್ರಿ ಆರೋಪಿ ಸ್ಥಾನದಲ್ಲಿದ್ದು, ಅವರು ತನಿಖಾ ಸಂಸ್ಥೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಬಲವಾಗಿ ವಾದ ಮಂಡಿಸಿದರು.
ಭೋಜನ ವಿರಾಮಕ್ಕೂ ಮುನ್ನ ಹಾಗೂ ನಂತರ ಇಡೀ ದಿನ ಪ್ರಕರಣದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಮೌನವಾಗಿದ್ದ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಸಂಜೆ ವೇಳೆಗೆ ತಮ್ಮ ಎಂದಿನ ಲಯಕ್ಕೆ ಮರಳಿ ತಾವು ಸ್ಪೀಕರ್ ಬಗ್ಗೆ ಆಡಿಯೋದಲ್ಲಿ ಮಾತನಾಡಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಮತ್ತೊಮ್ಮೆ ಸವಾಲು ಹಾಕಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ತಮಗೆ ಇಷ್ಟ ಬಂದ ಹಾಗೆ ಆಡಿಯೋ ಎಡಿಟ್ ಮಾಡಿದ್ದಾರೆ. ಸಾಕಷ್ಟು ಅಂಶಗಳನ್ನು ಕಂಟ್ ಅಂಡ್ ಪೇಸ್ಟ್ ಮಾಡಿದ್ದಾರೆ. ಆಡಿಯೋವನ್ನು ಎರಡು ಮೂರು ನಿಮಿಗಳಿಗೆ ಇಳಿಸಿದ್ದಾರೆ ಎಂದು ಆಪಾದಿಸಿದರು.
ಸದನಕ್ಕೆ ಸಂಬಂಧಿಸಿದ ಆಡಿಯೋವನ್ನು ಮುಖ್ಯಮಂತ್ರಿ ಅವರು ಬಿಡುಗಡೆ ಮಾಡಿರುವುದು ಮೊದಲ ಅಕ್ಷಮ್ಯ ಅಪರಾಧ. ಇನ್ನು ತಾವು ಅಲ್ಲಿರುವುದು ಸಾಬೀತು ಮಾಡಿದರೆ, ಸ್ಪೀಕರ್ ಅವರಿಗೆ 50 ಕೋಟಿ ರೂ ನೀಡಿರುವುದಾಗಿ ಹೇಳಿರುವುದನ್ನು ನಿರೂಪಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಈ ವಿಚಾರಕ್ಕೆ ಬದ್ಧನಾಗಿದ್ದೇನೆ. ಮೇಲ್ಮನೆ ಸದಸ್ಯರನ್ನಾಗಿ ಮಾಡಲು ಹಣ ಕೇಳಿದ್ದಾಗಿ ಸ್ವತಃ ಮುಖ್ಯಮಂತ್ರಿಗಳು ಸಹ ಒಪ್ಪಿಕೊಂಡಿದ್ದಾರೆ. ಇಂತವಹರು ನಮಗೆ ನೀತಿ ಪಾಠ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.
ಕುಮಾರ ಸ್ವಾಮಿ ಅವರು ತಮ್ಮ ಖುರ್ಚಿ ಉಳಿಸಿಕೊಳ್ಳಲು ನಡೆಸಿರುವ ಷಡಂತ್ರ ಇದಾಗಿದೆ. ಈ ಬಗ್ಗೆ ಸದನ ಸಮಿತಿ ರಚಿಸಿ, ನಾವು ಎಸ್‍ಐಟಿ ತನಿಖೆಗೆ ಆದೇಶ ಮಾಡುವುದನ್ನು ಒಪ್ಪುವುದಿಲ್ಲ. ಮೊದಲ ಅರೋಪಿ ಮುಖ್ಯಮಂತ್ರಿಯಾಗಿದ್ದು, ಅವರ ಕೈಯಲ್ಲಿ ಎಸ್‍ಐಟಿ. ಇದೆ. ತನಿಖಾ ಸಂಸ್ಥೆ ಮುಖ್ಯಮಂತ್ರಿ ಅವರನ್ನು ಪ್ರಶ್ನೆ ಮಾಡಲು ಸಾಧ್ಯವೆ?. ಅವರು ತನಿಖೆ ಎದುರಿಸಲು ಆಗುವುದಿಲ್ಲ ಎಂದು ಯಡಿಯೂರಪ್ಪ ಪ್ರತಿಪಾದಿಸಿದರು.
ಆಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ತಮ್ಮ ಮೇಲೆಯೇ ತಮಗೆ ಅನುಮಾನ ಉಂಟಾಗಿದೆ. ತಪ್ಪಿತಸ್ಥನಾಗಿದ್ದರೆ ತನಿಖೆಯಲ್ಲಿ ಗೊತ್ತಾಗುತ್ತದೆ. ಸದನ ಸಮಿತಿಯಿಂದ ತನಿಖೆ ನಡೆಸಲು ಸಾಧ್ಯವಿಲ್ಲ. ಕೆಲವು ಪ್ರಮುಖ ವಿಷಯಗಳಲ್ಲಿ ನೀವು ಎಡವುತ್ತಿದ್ದೀರಿ. ಒಟ್ಟು 20 ನಿಮಿಷದ ಆಡಿಯೋ ಬಹಿರಂಗಗೊಳಿಸಿರುವುದನ್ನು ಅರಗಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತಿಲ್ಲ. ಇನ್ನು 40ನಿಮಿಷದ ಆಡಿಯೋ ಬಿಟ್ಟರೆ ಏನಾಗಬಹುದು?. ಮುಂದೆ ಇದನ್ನು ಸಹ ಬಿಡುಗಡೆ ಮಾಡೋಣ ಎಂದು ಯಡಿಯೂರಪ್ಪ ಅವರನ್ನು ಕಿಚಾಯಿಸಿದರು.
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ನಾವು ಇಲ್ಲಿ ಚರ್ಚೆ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಿಬಿಡಲು ಸಾಧ್ಯವಿಲ್ಲ. ನಿರ್ಧಾರ ಆದ ನಂತರ ತನಿಖೆ ನಡೆಯಬೇಕು. ಎಫ್.ಐ.ಆರ್ ಬಳಿಕ ಆರೋಪ ಪಟ್ಟಿ ಸಲ್ಲಿಸಬೇಕು. ನಂತರ ಶಿಕ್ಷೆ ಅನುಭವಿಸಬೇಕು ಎಂದು ಪಟ್ಟು ಹಿಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಸದನದಲ್ಲಿ ಎಲ್ಲರ ಅಭಿಪ್ರಾಯ ಪಡೆದ ನಂತರವೇ ಎಸ್.ಐ.ಟಿ ತನಿಖೆಗೆ ಆದೇಶಿಸಲಾಗಿದೆ. ನಾವು ಕಚೇರಿಯಲ್ಲಿ ಕುಳಿತು ತೀರ್ಮಾನ ಮಾಡಿಲ್ಲ. ಇದು ಸದನದ ತೀರ್ಮಾನ. ಹೀಗಾಗಿ ಸರ್ಕಾರದ ನಿಲುವು ಬದಲಾಗುವುದಿಲ್ಲ ಎಂದರು.
ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ಬಿಜೆಪಿಯವರು ಸರ್ಕಾರ ಉರುಳಿಸಲು ಯಾವಾಗಲೂ ಡೆಡ್ ಲೈನ್ ಕೊಡುತ್ತಿದ್ದರು. ನಾವು ಬಜೆಟ್ ಮಂಡಿಸುವುದಿಲ್ಲ ಎಂದು ಸಹ ಹೇಳಿದ್ದರು. ಆದರೆ ಬಜೆಟ್ ಮಂಡನೆ, ರಾಜ್ಯಪಾಲರ ಭಾಷಣಕ್ಕೆ ಒಳ್ಳಯೆ ಮುಹೂರ್ತ ನಿಗದಿ ಮಾಡಿದ್ದು ನಾನೆ. ಮತ್ತು ಬಜೆಟ್ ಮಂಡನೆ ದಿನ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡುತ್ತಾರೆ. ಮುಖ್ಯಮಂತ್ರಿ ಅವರು ಬಜೆಟ್ ಭಾಷಣ ಪೂರ್ಣಗೊಳಿಸುತ್ತಾರೆ ಎಂದು ಈ ಮೊದಲೇ ತಿಳಿಸಿದ್ದೆ. ಈ ಪ್ರಕರಣದಲ್ಲಿ ಎಸ್.ಐ.ಟಿ. ತನಿಖೆ ನಡೆಸುವುದು ಮುಖ್ಯಮಂತ್ರಿ ಅವರ ಕರ್ತವ್ಯವಾಗಿದೆ. ಇದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ ಎಂದರು.
ಮತ್ತೆ ಕುಮಾರ ಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕರು ಮತ್ತೆ ಮುಖ್ಯಮಂತ್ರಿಯಾಗಿ ನೋಡಬೇಕು ಎಂದು ಹೇಳುತ್ತಿದ್ದಾರೆ. ಅದರಲ್ಲಿ ಯಾವ ತಪ್ಪಿದೆ. ಅದು ಅವರ ಅಭಿಪ್ರಾಯ. ಸಿದ್ದರಾಮಣ್ಣ ಅವರಿಂದ ಈ ಮೈತ್ರಿ ಸರ್ಕಾರ ನಡೆಯುತ್ತಿದ್ದು, ಅವರೇ ನಮ್ಮ ನಾಯಕರು. ಆದರೆ ಮಾಧ್ಯಮಗಳು ದಾರಿ ತಪ್ಪಿಸುತ್ತಿವೆ. ಈ ದೇಶಕ್ಕೆ ರಾಜಕೀಯವಾಗಿ ಸಂದೇಶ ರವಾನಿಸುವ ಉದ್ದೇಶದಿಂದ ವಿಷಕಂಠನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದೇ. ಆದರೆ ಮೈತ್ರಿ ಧರ್ಮಕ್ಕೆ ಚ್ಯುತಿ ತಂದಿಲ್ಲ. ತಾವು ತಪ್ಪು ಮಾಡಿದ್ದರೆ ತಲೆ ಬಾಗಲು ಸಿದ್ಧನಿದ್ದೇನೆ. ತಮ್ಮನ್ನು ಒಳಗೊಂಡು ಎಸ್.ಐ.ಟಿ ತನಿಖೆ ನಡೆಯುಲಿದೆ ಎಂದರು.
ಪ್ರತಿಪಕ್ಷ ಬಿಜೆಪಿಯಿಂದ ಎಸ್.ಐ.ಟಿ. ತನಿಖೆಗೆ ಪದೇ ಪದೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್, ನಾಳೆ ಬೆಳಗ್ಗೆ ಸಭೆ ಸೇರಿ ಚರ್ಚೆ ನಡೆಸೋಣ. ಪ್ರತಿಪಕ್ಷ ಮುಖಂಡರು, ಸಭಾ ನಾಯಕರ ಅಭಿಪ್ರಾಯ ಆಲಿಸಿ ನಂತರ ನಿರ್ಧಾರ ತೆಗೆದುಕೊಳ್ಳೋಣ ಎಂದು ಹೇಳಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.
ಇದಕ್ಕೂ ಮುನ್ನ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಭಾಧ್ಯಕ್ಷರ ಬಗ್ಗೆ ಯಾರು ಅನುಮಾನಪಡುವುದಿಲ್ಲ. ಇಡೀ ಸದನ ಸಭಾಧ್ಯಕ್ಷರ ಜೊತೆಗೆ ಇದೆ. ಆದರೆ ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸಭಾಧ್ಯಕ್ಷರ ಹೆಸರು ಆಡಿಯೊದಲ್ಲಿ ರುವುದು ಮುಖ್ಯಮಂತ್ರಿ ಅವರಿಗೆ ಮೊದಲೇ ಗೊತ್ತಿತ್ತು. ಹೀಗಿದ್ದರೂ ಅವರು ಅದನ್ನು ಬಹಿರಂಗಪಡಿಸಿದ್ದು ಸರಿಯಾದ ಕ್ರಮವಲ್ಲ. ಸಿಎಂಗೆ ಯಾವುದೇ ತನಿಖೆಗೆ ವಹಿಸುವ ಅಧಿಕಾರ ಇತ್ತು. ಆದರೆ ಅದನ್ನು ಮಾಡದೇ ಹೀಗೆ ಏಕಾ ಏಕಿ ಮಾಹಿತಿ ಬಹಿರಂಗ ಪಡಿಸಿದ್ದು ಏಕೆ ? ಎಂದು ಪ್ರಶ್ನಿಸಿದರು.