ತುಮಕೂರು
ಜನಸಾಮಾನ್ಯರಿಗೆ ಬ್ಯಾಂಕಿಂಗ್ ಸೇವೆಗಳು ತಲುಪುವಂತೆ ಎಲ್ಲ ಬ್ಯಾಂಕುಗಳು ವಿಸ್ತಾರಗೊಳ್ಳಬೇಕು ಎಂದು ಸಂಸದ ಜಿ.ಎಸ್ ಬಸವರಾಜು ತಿಳಿಸಿದರು.
ಕೇಂದ್ರ ಸರ್ಕಾರದ ಹಣಕಾಸು ಸೇವೆಗಳ ಇಲಾಖೆಯ ನಿರ್ದೇಶನದಂತೆ ಸಾಲ ವಿಸ್ತರಣೆಯ ಒಂದು ವಿಶೇಷ ಕಾರ್ಯಕ್ರಮವನ್ನು ತುಮಕೂರು ಜಿಲ್ಲೆಯ ಬ್ಯಾಂಕುಗಳು ಸಹಯೋಗದೊಂದಿಗೆ ಅಮಾನಿಕೆರೆಯ ಗಾಜಿನಮನೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿಯವರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಕಾರ್ಯಕ್ರಮದಂತೆ ಜಿಲ್ಲೆಯ ಎಲ್ಲಾ ಬ್ಯಾಂಕಿನ ಜೊತೆಯೊಂದಿಗೆ ಜನಸಾಮಾನ್ಯರಿಗೆ ಬ್ಯಾಂಕಿನ ಸೇವೆಗಳನ್ನು ತಲುಪಿಸಲು ಈ ಕಾರ್ಯಕ್ರಮ ರೂಪುಗೊಂಡಿರುವುದು ಬಹಳ ಸಂತಸದ ಸಂಗತಿ ಎಂದರು.
ಜನ ಸಮೂಹದೊಂದಿಗೆ ಬ್ಯಾಂಕುಗಳು ವಿಸ್ತಾರಗೊಳ್ಳಬೇಕು. ಪ್ರಯೋಜನ ಜನರಿಗೆ ದೊರಕಬೇಕು. ಪ್ರತಿಯೊಬ್ಬರು ಈ ಕಾರ್ಯಕ್ರಮದ ಮುಖೇನ ಬ್ಯಾಂಕಿನ ಹಲವಾರು ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರು ಮಾತನಾಡಿ, ಇಂತಹ ಕಾರ್ಯಕ್ರಮಗಳು ಜನರಿಗೆ ಅರಿವು ಮೂಡಿಸಲು ಸಹಕಾರಿಯಾಗಬೇಕು ಎಂದರು.
ಕಾರ್ಪೋರೇಷನ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ನಾಗರಾಜ ಉಡುಪ ಮಾತನಾಡಿ, ಕೇಂದ್ರದ ನಿರ್ದೇಶನದಂತೆ ಈ ಕಾರ್ಯಕ್ರಮ ಆಯೋಜಿಸಲು ಪ್ರತಿ ಜಿಲ್ಲೆಗೆ ಒಂದು ಬ್ಯಾಂಕ್ ಆಯ್ಕೆ ಮಾಡಿಕೊಳ್ಳಲಾಗಿದ್ದು, ಲೀಡ್ ಬ್ಯಾಂಕ್ ಸಹಯೋಗದೊಂದಿಗೆ ಕಾರ್ಪೊರೇಷನ್ ಬ್ಯಾಂಕ್ ಇಲ್ಲಿನ ಕಾರ್ಯಕ್ರಮದ ಜವಾಬ್ದಾರಿ ಹೊತ್ತಿದೆ. ಎಲ್ಲಾ ಬ್ಯಾಂಕುಗಳು ಇಲ್ಲಿ ಮಳಿಗೆಗಳನ್ನು ತೆರೆದಿದ್ದು, ಜನರಿಗೆ ಮಾಹಿತಿ ನೀಡುತ್ತಿವೆ.
ಕೈಗಾರಿಕಾ, ಗೃಹಸಾಲ ಇತ್ಯಾದಿಗಳ ಬಗ್ಗೆ ಮಳಿಗೆಗಳಲ್ಲಿ ಮಾಹಿತಿ ವಿನಿಮಯ ಕಾರ್ಯಕ್ರಮ ನಡೆಯುತ್ತಿದೆ ಎಂದು ವಿವರಿಸಿದರು.ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ವಿ.ಎಸ್.ಜ್ಯೋತಿಗಣೇಶ್ ಮಾತನಾಡಿ, ಕೃಷಿಕರು, ವಿದ್ಯಾರ್ಥಿಗಳು ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಬ್ಯಾಂಕುಗಳು ಸಾಲ ನೀಡುತ್ತಿವೆ. ಯಾರೇ ಆಗಲಿ ಸಾಲ ಪಡೆದವರು ಮರುಪಾವತಿ ಮಾಡಬೇಕು. ಇಂತಹ ವ್ಯವಸ್ಥೆಯನ್ನು ರೂಢಿಸಿಕೊಂಡಾಗ ಸಾಲ ನೀಡಿದ್ದಕ್ಕೆ ಹಾಗೂ ಪಡೆದದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಿಜಿಎಂ ಸುದರ್ಶನ್ ಸೇಠಿ, ಎಜಿಎಂ ಚೆಲ್ಲಾದೊರೈ, ಲೀಡ್ ಬ್ಯಾಂಕ್ ಚೀಫ್ ಮ್ಯಾನೇಜರ್ ಜ್ಯೋತಿ ಗಣೇಶ್‍ರವರು ಸಾಲದ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ಜಿಲ್ಲೆಯ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಇಂದೂ ಕೂಡ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಬ್ಯಾಂಕಿನವರು ತಮ್ಮ ತಮ್ಮ ಬ್ಯಾಂಕಿನಲ್ಲಿ ದೊರೆಯುವ ಸವಲತ್ತುಗಳನ್ನು ಪರಿಚಯಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ