ಬೆಂಗಳೂರು
ರಾಜ್ಯದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ ವಿತರಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನೇರ ನಗದು ಸೌಲಭ್ಯ ಡಿಬಿಟಿ ವ್ಯಾಪ್ತಿಗೆ ಒಳಪಡಿಸುವ ಪ್ರಯತ್ನ ವಿಳಂಬವಾಗಿದ್ದು, ಕೋವಿಡ್ ಸಂಕಷ್ಟದಲ್ಲಿ ಈ ವರ್ಗದ ಫಲಾನುಭವಿಗಳು ತಮ್ಮ ಸೌಲಭ್ಯ ಪಡೆಯಲು ಎರಡರಿಂದ ಮೂರು ತಿಂಗಳು ಕಾಯುವುದು ಅನಿವಾರ್ಯವಾಗಿದೆ.
ಖಜಾನೆ 2 ಅಡಿ ರಾಜ್ಯದ 60 ಲಕ್ಷಕ್ಕೂ ಹೆಚ್ಚು ಮಂದಿ ವೃದ್ಧಾಪ್ಯ, ವಿಧವಾ ಮತ್ತಿತರ ವೇತನ ಪಡೆಯುತ್ತಿದ್ದು, ಈ ಎಲ್ಲಾ ಫಲಾನುಭವಿಗಳ ಖಾತೆಗೆ ನೇರವಾಗಿ ನೆರವು ನೀಡಲು ಸರ್ಕಾರ ತೀರ್ಮಾನಿಸಿದೆ. ಆದರೆ ಈ ಸೌಲಭ್ಯ ಕಲ್ಪಿಸಲು ವಿಳಂಬ ಮಾಡುತ್ತಿರುವುದರಿಂದ ಜೀವನೋಪಾಯ, ಔಷಧಿ ಮತ್ತಿತರ ಉದ್ದೇಶಗಳಿಗಾಗಿ ಸರ್ಕಾರದ ನೆರವು ಪಡೆಯಲು ಕಾಯುತ್ತಿದ್ದ ಈ ವರ್ಗ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಇವರ ಖಾತೆಗೆ ನೇರವಾಗಿ ಸೌಲಭ್ಯ ಒದಗಿಸಲು ತಾಂತ್ರಿಕ ಸಮಸ್ಯೆ ತಲೆ ದೋರಿದೆ. ಹಿರಿಯ ನಾಗಕರು, ವಿಧವೆಯರು ತಮ್ಮ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ವಿವರಗಳನ್ನು ಸಲ್ಲಿಸಿಲ್ಲ. ಹೀಗಾಗಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಿಸುವ ಪ್ರಕ್ರಿಯೆ ವಿಳಂಬವಾಗಿದೆ.
ತಹಸೀಲ್ದಾರ್ ಕಚೇರಿಗೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದ್ದು, ಸಾಕಷ್ಟು ಮಂದಿ ಈಗಾಗಲೇ ವಿವರಗಳನ್ನು ಸಲ್ಲಿಸಿದ್ದಾರೆ. ಇನ್ನೂ ಹಲವು ಮಂದಿ ವಿವರಗಳನ್ನು ಸಲ್ಲಿಸುವುದು ಬಾಕಿ ಇದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸುವ ಕಾರ್ಯವೂ ಸಹ ಮಂದಗತಿಯಲ್ಲಿ ಸಾಗಿದೆ. ನೇರ ನಗದು ಸೌಲಭ್ಯ ಕಲ್ಪಿಸಲು ಖಜಾನೆ 2 ರಲ್ಲಿ ಸರ್ವರ್ ಸಿದ್ಧಪಡಿಸುವ ಕೆಲಸ ನಿರೀಕ್ಷೆಯಂತೆ ಸಾಗುತ್ತಿಲ್ಲ.
ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಇಲಾಖೆಯಿಂದ ಪ್ರತಿಯೊಂದು ಜಿಲ್ಲೆಗಳಲ್ಲಿ ಪಿಂಚಣಿ ಅದಾಲತ್‍ಗಳನ್ನು ನಡೆಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಲಾಗಿದ್ದು, ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸುವಂತೆ ನಿರ್ದೇಶನ ನೀಡಲಾಗಿದೆ.ಪ್ರತಿಯೊಂದು ಗ್ರಾಮ ಪಂಚಾಯತ್‍ಗಳಲ್ಲಿ ಕನಿಷ್ಠ 500 ರಿಂದ 600 ಮಂದಿ ವೃದ್ಧಾಪ್ಯ ಮತ್ತು ವಿಧವಾ ವೇತನ ಪಡೆಯುತ್ತಿದ್ದು, ಎಲ್ಲರಿಗೂ ಅಂಚೆ ಕಚೇರಿಗಳ ಮೂಲಕವೇ ವೇತನ ಪಾವತಿಯಾಗುತ್ತಿದೆ. ಆದರೆ ಅಂಚೆ ಇಲಾಖೆಯಲ್ಲಿ ಸೂಕ್ತ ಮಾನವ ಸಂಪನ್ಮೂಲ ಇಲ್ಲದ ಕಾರಣ ಎಲ್ಲರಿಗೂ ಕಾಲ ಕಾಲಕ್ಕೆ ವೇತನ ಪಾವತಿ ಕಷ್ಟವಾಗಿದೆ. ಜತೆಗೆ ಫಲಾನುಭವಿಗಳಿಂದ ಅಂಚೆ ಸಿಬ್ಬಂದಿ ಕಮೀಷನ್ ಪಡೆಯುವ ಕುರಿತಂತೆಯೂ ಬಂದ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರ ನೇರ ನಗದು ಸೌಲಭ್ಯ ಒದಗಿಸಲು ತೀರ್ಮಾನಿಸಿದೆ.
ರಾಜ್ಯದ ಹಿರಿಯ ನಾಗರಿಕರ ಕೋಶದ ಮಾಹಿತಿಯಂತೆ ರಾಜ್ಯದಲ್ಲಿ 2011 ರ ಜನಗಣತಿಯ ಅಂದಾಜಿನಂತೆ ಒಟ್ಟು ಜನ ಸಂಖ್ಯೆಯಲ್ಲಿ ಶೇ. 9.60 ಹಿರಿಯ ನಾಗರಿಕರಿದ್ದಾರೆ. ಹಿರಿಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಜೀವನ ಒದಗಿಸಿ ಕೊಡುವ ಉದ್ದೇಶದಿಂದ 2003 ರಲ್ಲಿ ಕೇಂದ್ರದ ಮಾದರಿಯಲ್ಲಿ ಹಿರಿಯ ನಾಗರಿಕರಿಗಾಗಿ ರಾಜ್ಯ ನೀತಿಯನ್ನು ರೂಪಿಸಿದೆ.
ಹಿರಿಯ ನಾಗರಿಕರಿಗಾಗಿ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಇಲಾಖೆಯಿಂದ ವೃದ್ಧಾಪ್ಯ ವೇತನ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಆಯಾ ತಾಲ್ಲೂಕಿನ ತಹಸೀಲ್ದಾರರ ಕಚೆರಿ ಮೂಲಕ ವೃದ್ದಾಪ್ಯ ವೇತನಗಳನ್ನು ಮಂಜೂರು ಮಾಡಲಾಗುತ್ತದೆ.
60 ರಿಂದ 64 ವರ್ಷ ವಯೋಮಿತಿಯವರಿಗೆ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ ಯೋಜನೆಯಡಿ ಮಾಸಿಕ 600 ರೂ., 65 ವರ್ಷ ಮೇಲ್ಪಟ್ಟವರಿಗೆ ಮಾಸಿಕ ಒಂದು ಸಾವಿರ ರೂ. ನೀಡಲಾಗುತ್ತಿದೆ. ರಾಜ್ಯದಲ್ಲಿ 39.50 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರು ಸೌಲಭ್ಯವನ್ನು ಪಡೆಯುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ